ಮೊದಲ ಮದುವೆ ಮುಚ್ಚಿಟ್ಟು ಹಿಂದೂ ಯುವತಿಯನ್ನು ಎರಡನೇ ಮದುವೆಯಾದ ಮುಸ್ಲಿಂ ವ್ಯಕ್ತಿ| ವಿಚ್ಛೇದನ ಕೇಳಿದ್ದಕ್ಕೆ ಮಚ್ಚಿನಿಂದ ನಡುರಸ್ತೆಯಲ್ಲಿ ಹಲ್ಲೆ

Share the Article

ನಾಲ್ಕು ವರ್ಷಗಳ ಹಿಂದೆ ಹಿಂದೂ ಯುವತಿಯೊಬ್ಬಳನ್ನು ಪ್ರೀತಿಸುವ ನೆಪದಲ್ಲಿ ಮದುವೆಯಾಗಿದ್ದ ಮುಸ್ಲಿಂ ಯುವಕನೊಬ್ಬ ಆಗ ಆಕೆಯನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿ ಅಮಾನುಷವಾಗಿ ಮಚ್ಚಿನಿಂದ‌ ಹೊಡೆದು ಕೊಲ್ಲಲು ಯತ್ನಿಸಿದ ಘಟನೆ ಗದಗ ನಗರದಲ್ಲಿ ನಡೆದಿದೆ.

ಗದಗ ನಗರದ ಮುಂಡರಗಿ ರಸ್ತೆಯ ಲಯನ್ ಸ್ಕೂಲ್ ಗ್ರೌಂಡ್ ಬಳಿ ಗುರುವಾರ ಬೆಳಗ್ಗೆ ಘಟನೆ ಸಂಭವಿಸಿದ್ದು, ಯುವಕನ ವರ್ತನೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಗಂಡನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಅಪೂರ್ವ ಶಿರೂರ( 26) ಅಲಿಯಾಸ್ ಅರ್ಫಾನ್ ಬಾನು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಈಕೆಯ ಗಂಡ ಇಜಾಜ್ ( 38) ಹಲ್ಲೆಗೈದ ಆರೋಪಿ. ನಾಲ್ಕು ವರ್ಷಗಳ ಹಿಂದೆ ಹಿಂದು ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ಈತನಿಗೆ ಈ ಮೊದಲೇ ಬೇರೊಬ್ಬಳ ಜೊತೆ ಮದುವೆ ಆಗಿತ್ತು. ಈ ವಿಷಯ ಮುಚ್ಚಿಟ್ಟು ಇಜಾಜ್ ಅಪೂರ್ವಳನ್ನು ಪ್ರೀತಿಯ ನಾಟಕವಾಡಿ ಮದುವೆ ಮಾಡಿಕೊಂಡಿದ್ದ.

ಮದುವೆ ಬಳಿಕ ಅಪೂರ್ವಳನ್ನು ಮುಸ್ಲಿಂ ಆಗಿ ಮತಾಂತರಿಸಿದ್ದ. ಆಕೆಯ ಹೆಸರನ್ನು ಅರ್ಫಾನ್ ಬಾನು ಎಂದು ಬದಲಿಸಿದ್ದ.

ಆರಂಭದಲ್ಲಿ ಚೆನ್ನಾಗಿಯೇ ಇದ್ದ ದಂಪತಿ ಬಾಳಲ್ಲಿ ನಂತರ ಕೌಟುಂಬಿಕ ಕಲಹ ಶುರುವಾಗಿತ್ತು. ಇಜಾಜ್ ಬೇರೊಬ್ಬಳು ಯುವತಿ ಜೊತೆ ಮೊದಲ ಮದುವೆಯಾಗಿರುವ ವಿಚಾರ ತಿಳಿದ ಅಪೂರ್ವ ಆತನಿಂದ ದೂರವಾಗಲು ನಿಶ್ಚಯಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ನಂತರ ಗಂಡನಿಂದ ದೂರವಾಗಿದ್ದ ಅಪೂರ್ವ ಗುರುವಾರ ಬೆಳಗ್ಗೆ ಗದಗ ನಗರದ ಮುಂಡರಗಿ ರಸ್ತೆಯ ಲಯನ್ ಸ್ಕೂಲ್ ಗ್ರೌಂಡ್ ನಲ್ಲಿ ದ್ವಿಚಕ್ರ ವಾಹನದಲ್ಲಿ ಡ್ರೈವಿಂಗ್ ಕಲಿಯುತ್ತಿದ್ದಳು. ಅಲ್ಲಿಗೆ ಮಚ್ಚು ಹಿಡಿದು ಬಂದ ಇಜಾಜ್ ಮನಸೋ ಇಚ್ಛೆ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಕೂಡಲೇ ಆಕೆಯನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಎಸ್ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply