ಕಾಲೇಜು ವಾಟ್ಸಪ್ ಗ್ರೂಪ್ ನಲ್ಲಿ ಪಾಕಿಸ್ತಾನ ಧ್ವಜದ ಸ್ಟಿಕ್ಕರ್ ಕಳುಹಿಸಿದ ವಿದ್ಯಾರ್ಥಿನಿ !! | ಎಬಿವಿಪಿ ಸಂಘಟನೆಯಿಂದ ವ್ಯಾಪಕ ಆಕ್ರೋಶ

ರಾಜ್ಯದಲ್ಲಿ ಇನ್ನೂ ಹಿಜಾಬ್ ವಿವಾದ ಮುಗಿದಿಲ್ಲ. ಹೀಗಿರುವಾಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ದೇಶದ್ರೋಹದ ಆರೋಪ ಕೇಳಿಬರುತ್ತಿದೆ. ಕಾಲೇಜಿನ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಪಾಕಿಸ್ತಾನ ಧ್ವಜದ ಸ್ಟಿಕರ್ ಹಾಕಿದ್ದನ್ನು ಖಂಡಿಸಿ ಎಬಿವಿಪಿ ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಕಳೆದ ತಿಂಗಳು ಹಿಜಾಬ್ ವಿಚಾರವಾಗಿ ಗಲಾಟೆ ನಡೆಯುತ್ತಿದ್ದ ವೇಳೆ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪಿನಲ್ಲಿ ಚರ್ಚೆ ನಡೆಯುತ್ತಿತ್ತು. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಪಾಕಿಸ್ತಾನ ಧ್ವಜದ ಸ್ಟಿಕರ್ ಹಾಕಿದ್ದಳು. ಇದೀಗ ಈ ವಿಷಯ ವಿವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನ ಧ್ವಜದ ಸ್ಟಿಕರ್ ಹಾಕಿದ ವಿದ್ಯಾರ್ಥಿನಿ ವಿರುದ್ಧ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಬೇಕು. ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಅಮಾನತುಪಡಿಸುವಂತೆ ಆಗ್ರಹಿಸಿ ಕಾಲೇಜಿನ ಮುಂಭಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಪಾಕಿಸ್ತಾನ ಧ್ವಜದ ಸ್ಟಿಕರ್ ಹಾಕಿದ್ದ ವಿದ್ಯಾರ್ಥಿನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಈ ಹಿಂದೆಯೇ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದೆವು. ಆದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ದೇಶದ್ರೋಹದ ಕೃತ್ಯ ಎಸಗಿರುವ ವಿದ್ಯಾರ್ಥಿನಿ ವಿರುದ್ಧ ಇನ್ನು ಎರಡು ದಿನದೊಳಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳುವುವರೆಗೂ ಕಾಲೇಜಿನಲ್ಲಿ ಯಾವುದೇ ತರಗತಿಗಳು ನಡೆಯಲು ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.