ಉಡುಪಿ:ಹೆಂಡತಿ ಗರ್ಭಿಣಿ ಎನ್ನುವುದನ್ನು ಮರೆತು ವಿಕೃತಿ ಮೆರೆದ ಪತಿ!! ಸಿಗರೇಟ್ ನಿಂದ ಮುಖ ಸುಡಲು ಪ್ರಯತ್ನ-ಹೊಟ್ಟೆಗೆ ಕಾಲಿನಿಂದ ಒದ್ದು ಹಲ್ಲೆ
ಉಡುಪಿ:ಗರ್ಭಿಣಿ ಪತ್ನಿಗೆ ಹಲ್ಲೆ ನಡೆಸಿ ಆಕೆಯ ಮುಖಕ್ಕೆ ಸಿಗರೇಟ್ ನಿಂದ ಸುಡಲು ಪ್ರಯತ್ನಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೂ ಕೃತ್ಯ ಎಸಗಿದ ವ್ಯಕ್ತಿಯ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ ಕುಂದಾಪುರದಲ್ಲಿ ನಡೆದ ಘಟನೆ ಎನ್ನಲಾಗಿದ್ದು, ಕುಂದಾಪುರದ ಬೀಜಾಡಿ ನಿವಾಸಿ ಪ್ರಿಯಾಂಕಾ (21) ಹಲ್ಲೆಗೆ ಒಳಗಾದ ಮಹಿಳೆಯಾಗಿದ್ದು, ಆಕೆಯ ಪತಿ ಪ್ರದೀಪ್ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.
ಪ್ರಿಯಾಂಕಳಿಗೆ ಕುಂದಾಪುರದ ಬರೆಬೆಟ್ಟು ನಿವಾಸಿ ಪ್ರದೀಪ್ ಎಂಬಾತನೊಂದಿಗೆ ವಿವಾಹವಾಗಿದ್ದು, ಆ ಬಳಿಕ ಆತ ವರದಕ್ಷಿಣೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಸುಮಾರು ಎರಡು ಲಕ್ಷಕ್ಕೂ ಮಿಕ್ಕಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಇದೇ ವಿಚಾರವಾಗಿ ಪ್ರತೀ ನಿತ್ಯವೂ ಆಕೆಯ ಮೇಲೆ ಗರ್ಭಿಣಿ ಎಂಬ ಕನಿಕರವನ್ನು ಬಿಟ್ಟು ಹಲ್ಲೆ ನಡೆಸುತ್ತಿದ್ದ.
ಅಷ್ಟಕ್ಕೇ ಸುಮ್ಮನಾಗದ ಆತ ಆಕೆಯ ಮುಖಕ್ಕೆ ಸಿಗರೇಟ್ ಹೊತ್ತಿಸಿ ಇಡಲು ಪ್ರಯತ್ನಿಸಿದ್ದು, ಕಾಲಿಗೆ ಬಿದ್ದರೂ ಆಕೆಯ ಹೊಟ್ಟೆಗೆ ಒದೆದಿದ್ದ. ಹೊಟ್ಟೆಗೆ ಒದೆಯಲು ಮುಂದಾದಾಗ ತಪ್ಪಿಸಿಕೊಳ್ಳುವ ಭರದಲ್ಲಿ ಹೊಡೆತ ಪ್ರಿಯಾಂಕಳ ಸೊಂಟಕ್ಕೆ ಬಿದ್ದಿದೆ ಎನ್ನಲಾಗಿದೆ.ವೈರಲ್ ಆದ ವೀಡಿಯೋ ದಲ್ಲಿ ಆರೋಪಿಯ ತಾಯಿಯು ಕೂಡ ಪರಿ ಪರಿಯಾಗಿ ಅಂಗಲಾಚುವ ದೃಶ್ಯವೂ ಸೆರೆಯಾಗಿದ್ದು, ಸದ್ಯ ಈತನ ಕಿರುಕುಳದಿಂದ ಬೇಸತ್ತ ಪ್ರಿಯಾಂಕ ಠಾಣೆಗೆ ದೂರು ನೀಡಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ.