ತಾನು ದುಡಿದ ಹಣದಲ್ಲಿ 100 ರೂ. ಕೇಳಿದಕ್ಕಾಗಿ ಗಲಾಟೆ| ಹೆಂಡತಿಯಿಂದ ಅಣ್ಣನಿಗೆ ಕರೆ| ಅಣ್ಣನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾದ ವ್ಯಕ್ತಿ ಸಾವು

ದುಡಿದು ಬಂದ ಹಣವನ್ನು ಸಂಪೂರ್ಣವಾಗಿ ಹೆಂಡತಿಗೆ ನೀಡಿ, ಅದರಲ್ಲಿ 100 ರೂ. ಕೊಡು ಎಂದು ಕೇಳಿದ್ದಕ್ಕೆ ಗಲಾಟೆ ಆಗಿ ನಂತರ, ಹೆಂಡತಿಯ ಅಣ್ಣ ಬಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪರಿಣಾಮ ಕೊಲೆಯಲ್ಲಿ ಅಂತ್ಯಗೊಂಡಿದೆ. ಈ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತರನ್ನು ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಬರಮೇಲು ಮನೆಯ ಕುಂಜಿರ ಪೂಜಾರಿಯ ಮಗನಾದ ಕೇಶವ ಪೂಜಾರಿ ( 47) ಎಂದು ಗುರುತಿಸಲಾಗಿದೆ.

ಮೃತರು ಮಂಗಳೂರು ಹೋಟೆಲ್ ನಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದು, ಜ.31 ರಂದು ಕೆಲಸದಿಂದ ಮನೆಗೆ ಬಂದಾಗ 8000 ರೂ. ಹಣವನ್ನು ಹೆಂಡತಿ ಪ್ರೇಮ ಅವರಲ್ಲಿ ಕೊಟ್ಟಿದ್ದಾರೆ. ನಂತರ ಅದರಲ್ಲಿ ರೂ.100 ನ್ನು ಕೇಳಿದ್ದಕ್ಕೆ ಗಲಾಟೆ ಆಯಿತು‌. ನಂತರ ಈ ವಿಚಾರವನ್ನು ಹೆಂಡತಿ ತನ್ನ ಅಣ್ಣನಾದ ಚಂದಪ್ಪ ಪೂಜಾರಿಗೆ ಕರೆ ಮಾಡಿ ಹೇಳಿದ್ದಾಳೆ. ನಂತರ ಮನೆಗೆ ಬಂದ ಅಣ್ಣ ಭಾವನ ಮೇಲೆ ಕೋಲಿನಿಂದ ಹಲ್ಲೆಮಾಡಿದ್ದಾರೆ. ಆದರೆ ಮರುದಿನ ಕೇಶವ ಪೂಜಾರಿಗೆ ದೇಹದಲ್ಲಿ ವಿಪರೀತ ನೋವು ಉಂಟಾಗಿದ್ದರಿಂದ ಕೇಶವ ಪೂಜಾರಿ ತಾಯಿ ಲೀಲಾ‌ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅನಂತರ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದರು.

ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲು ತಾಯಿ ಮಗ ನಿರ್ಧಾರ ಮಾಡಿದಾಗ, ಯಾವುದೇ ಪ್ರಕರಣ ದಾಖಲಿಸದಂತೆ ಬೆದರಿಕೆ ಹಾಕಿದ್ದರೆನ್ನಲಾಗಿದೆ.

ಚಿಕಿತ್ಸೆ ತೆಗೆದುಕೊಂಡು ಗುಣಮುಖರಾಗದೇ ಇದ್ದ ಕೇಶವ ಪೂಜಾರಿಯನ್ನು ಮನೆಯಲ್ಲಿದ್ದ ಶಾರದಾ ಹಾಗೂ ದಿನೇಶ್ ಬಂಟ್ವಾಳ ಆಸ್ಪತ್ರೆಗೆ ದಾಖಲಿಸಲೆಂದು ಸಂಜೆ ಹೊತ್ತಲ್ಲಿ ಕರೆದುಕೊಂಡು ಹೋದಾಗ ಕೇಶವ ಪೂಜಾರಿ ಸಾವನ್ನಪ್ಪಿದ್ದಾರೆ. ಹಾಗಾಗಿ ಯಾರಿಗೂ ತಿಳಿಸದೆ ಶವಪರೀಕ್ಷೆ ಮಾಡಿಸದೆ ವಾಪಸ್ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಮೂಲಕ ಮನೆಗೆ ಕರೆದುಕೊಂಡು ಬಂದಿದ್ದಾರೆ. ನಂತರ ಅಕ್ಕಪಕ್ಕದ ಮನೆಯವರಿಗೆ ಗೊತ್ತಾಗಿ ಪೊಲೀಸರಿಗೆ ತಿಳಿಸಿದಾಗ ಪ್ರಕರಣ ದಾಖಲಾಗಿದೆ.

ನಂತರ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದಾಗ ಪ್ರಾಥಮಿಕ ವರದಿಯಲ್ಲಿ ಹಲ್ಲೆ ಮಾಡಿದ್ದರಿಂದ ಮೆದುಳು ಹಾಗೂ ಲಿವರ್ ನಿಷ್ಕ್ರಿಯವಾಗಿದ್ದು ದೇಹದ ಹಲವು ಕಡೆ ಹಲ್ಲೆ ಮಾಡಿದ ಗಾಯವಿದೆ ಎಂದು ಇದೊಂದು ಕೊಲೆ ಪ್ರಕರಣ ದಾಖಲು ಮಾಡಿದ್ದಾರೆ.

ಆದರೂ ಆರೋಪಿಯನ್ನು ಬಂಧಿಸದ ಪೊಲೀಸರ ಕ್ರಮಕ್ಕೆ ಬೇಸರಗೊಂಡ ಮನೆಮಂದಿ ಎಸ್ಪಿ ಕಚೇರಿಗೆ ಹೋಗಿ ದೂರು ನೀಡಿದ್ದಾರೆ.

ನಂತರ ಬೆಳ್ತಂಗಡಿ ಇನ್ಸ್ ಪೆಕ್ಟರ್ ಶಿವಕುಮಾರ್ ಮತ್ತು ತಂಡ ಆರೋಪಿಯನ್ನು ಫೆ.21 ರಂದು ಮಧ್ಯಾಹ್ನ ಖಚಿತ ಮಾಹಿತಿ ಮೇರೆಗೆ ಮಂಗಳೂರಿನ ಬಜಪೆ ವ್ಯಾಪ್ತಿಯ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದಲ್ಲಿಂದ ವಶಕ್ಕೆ ಪಡೆದು, ಪೂ‌ಂಜಾಲಕಟ್ಟೆ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಿದ್ದು, ಪೊಲೀಸರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave A Reply

Your email address will not be published.