ವಿದೇಶ ಸುತ್ತುವ ಕನಸಿಗೆ ರೆಕ್ಕೆ ಕಟ್ಟಲಿದೆ ಭಾರತದ ಅಡ್ವೆಂಚರ್ಸ್ ಓವರ್ ಲ್ಯಾಂಡ್ ಕಂಪನಿ | ಸದ್ಯದಲ್ಲೇ ದೆಹಲಿ ಟು ಲಂಡನ್ ಬಸ್ ಪ್ರವಾಸ | 70 ದಿನಗಳಲ್ಲಿ 18 ದೇಶ ಸುತ್ತುವ ಅವಕಾಶ ನಿಮ್ಮದಾಗಿಸಿಕೊಳ್ಳಿ

ದೇಶ ಸುತ್ತೋದು ಹಲವರ ಕನಸು. ಆದರೆ ಆ ಕನಸನ್ನು ನನಸು ಮಾಡಿಕೊಳ್ಳುವವರು ಕೆಲವರು ಮಾತ್ರ. ಆದರೆ ಇಂತಹ ಕನಸಿಗೆ ಬಸ್ ಪ್ರಯಾಣದ ಮೂಲಕ ರೆಕ್ಕೆ ಕಟ್ಟಲಿದೆ ಭಾರತದ ಪ್ರತಿಷ್ಠಿತ ಕಂಪನಿ. ಹೌದು. ದೆಹಲಿಯಿಂದ ಲಂಡನ್‍ವರೆಗೆ ಬಸ್‍ನಲ್ಲಿ ಪ್ರಯಾಣಿಸುವಂತಹ ನೂತನ ಪ್ರವಾಸ ಆರಂಭಿಸಲು ಭಾರತದ ಅಡ್ವೆಂಚರ್ಸ್ ಓವರ್‌ಲ್ಯಾಂಡ್ ಕಂಪನಿ ಸಿದ್ಧತೆ ಮಾಡಿಕೊಂಡಿದೆ.

ದೆಹಲಿಯಿಂದ ಹೊರಡುವ ಬಸ್ 70 ದಿನಗಳ ಕಾಲ ಸಂಚಾರ ಮಾಡಲಿದ್ದು, ಒಟ್ಟು 20 ಸಾವಿರ ಕಿಮೀ, ಕ್ರಮಿಸಿ 18 ದೇಶಗಳನ್ನು ಸುತ್ತಲಿದೆ. ಈಗಾಗಲೇ ಅಡ್ವೆಂಚರ್ಸ್ ಓವರ್‌ಲ್ಯಾಂಡ್ ಕಂಪನಿ ಈ ಟೂರ್ ಪ್ಯಾಕೇಜ್‍ಗೆ ದರ ಕೂಡ ನಿಗದಿ ಮಾಡಿದೆ. 1 ಟಿಕೆಟ್‍ನ ಬೆಲೆ 15 ಲಕ್ಷ ರೂ. ನಿಗದಿಮಾಡಿದೆ. ಟಿಕೆಟ್, ವೀಸಾ, ವಸತಿ, ಆಹಾರ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಕೂಡ 15 ಲಕ್ಷ ರೂ.ನಲ್ಲಿ ಬರಿಸುವಂತಹ ಪ್ಲಾನ್ ಮಾಡಿಕೊಂಡು ಪ್ರವಾಸಿಗರಿಗೆ ಆಫರ್ ನೀಡಿದೆ.

ದೆಹಲಿಯಿಂದ ಲಂಡನ್ ಪ್ರವಾಸ ಕೈಗೊಳ್ಳಲಿರುವ ಐಶಾರಾಮಿ ಬಸ್‍ನಲ್ಲಿ 20 ಸೀಟ್ ಇರಲಿದ್ದು, ಪ್ರತಿ ಪ್ರವಾಸಿಗರಿಗೂ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಇದೆ. ಅಲ್ಲದೇ ಬಸ್‍ನಲ್ಲೇ ಆಹಾರ ಮತ್ತು ಮಲ ವಿಸರ್ಜನೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ಬಸ್ ಮ್ಯಾನ್ಮಾರ್, ಥೈಲ್ಯಾಂಡ್, ಚೀನಾ, ಕಿರ್ಗಿಸ್ತಾನ ಮೂಲಕ ಫ್ರಾನ್ಸ್‌ಗೆ ತಲುಪಲಿದೆ. ಫ್ರಾನ್ಸ್‌ನ ಕಾಲೆಯಿಂದ ಲಂಡನ್‍ನ ನಡೋವರ್‍ವರೆಗೆ ಜಲಪ್ರದೇಶ ಇರುವುದರಿಂದ ಬಸ್‍ನ್ನು ಹಡಗಿನಲ್ಲಿ ಇಟ್ಟು ಸಾಗಿಸುವ ಪ್ಲಾನ್ ಕಂಪನಿ ಮಾಡಿಕೊಂಡಿದೆ ಎಂದು ಮೂಲಗಳಿಂದ ವರದಿಯಾಗಿದೆ. ಈ ಹಿಂದೆ 1976 ಸುಮಾರಿಗೆ ಕೋಲ್ಕತ್ತಾದಿಂದ ಲಂಡನ್‍ಗೆ ಇದೇ ರೀತಿಯ ಬಸ್ ಟೂರ್‌ ಬ್ರಿಟನ್ ಮೂಲದ ಕಂಪನಿ ಅಲ್ಬರ್ಟ್ ಟೂರ್ಸ್ ಆರಂಭಿಸಿತು. ಬಳಿಕ ಸಂಚರಿಸುವ ರಸ್ತೆಯಲ್ಲಿ ಅಪಘಾತ ಸೇರಿದಂತೆ ಕೆಲ ಕಾರಣಾಂತರಗಳಿಂದ ಸ್ಥಗಿತಗೊಳಿಸಿತು.

ಇದೀಗ ಅಡ್ವೆಂಚರ್ಸ್ ಓವರ್‌ಲ್ಯಾಂಡ್ ಕಂಪನಿ ವಿಶೇಷ ಟೂರ್‌ಗೆ ಅಣಿಯಾಗಿದ್ದು, ಭಾರತ ಹಾಗೂ ಮ್ಯಾನ್ಮಾರ್ ನಡುವಿನ ಗಡಿ ಬಿಕ್ಕಟ್ಟು ಶಮನವಾಗುತ್ತಿದ್ದಂತೆ ಈ ಟೂರ್‌ಗೆ ಚಾಲನೆ ಸಿಗಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ಟೂರ್ ಆರಂಭಿಸಲು ಕಂಪನಿ ನಿರ್ಧರಿಸಿದೆ ಎಂಬ ಸುದ್ದಿ ಮೂಲಗಳಿಂದ ವರದಿಯಾಗಿದೆ.

Leave A Reply

Your email address will not be published.