ಶ್ರೀಕೃಷ್ಣನಿಂದ ಪ್ರಭಾವಿತರಾಗಿ ದೇವಾಲಯವನ್ನು ನಿರ್ಮಿಸಿದ ಮುಸ್ಲಿಂ ಉದ್ಯಮಿ !! |ಜಾರ್ಖಂಡ್ ನಲ್ಲಿ ತಲೆಯೆತ್ತಿದೆ 42 ಲಕ್ಷ ವೆಚ್ಚದ ಭವ್ಯ ಶ್ರೀಕೃಷ್ಣ ಮಂದಿರ | ಕೋಮು ಸಾಮರಸ್ಯ ಸಾರುವ ಈ ಘಟನೆ ಅದೆಷ್ಟೋ ಮಂದಿಗೆ ಪ್ರೇರಣೆ
ರಾಂಚಿ:ಮನುಷ್ಯನ ಜಾತಿ, ಪೂಜಿಸಲ್ಪಡುವ ದೇವರು ಯಾವುದಾದರೇನು ಆತನ ಮನಸ್ಸು ಪರಿಶುದ್ಧವಾಗಿದ್ದರೆ ಸಾಕು.ಜಾತಿ, ಧರ್ಮ ಕೇವಲ ಒಂದು ನಂಬಿಕೆ ಅಷ್ಟೇ ಎಲ್ಲರ ಮೈಯಲ್ಲೂ ಹರಿದಾಡುತ್ತಿರುವುದು ಒಂದೇ ಬಣ್ಣದ ರಕ್ತ.ಇದೇ ರೀತಿ ಸಮಾನತೆ ಸಾರುವಂತೆ ಮುಸ್ಲಿಂ ಉದ್ಯಮಿಯೋರ್ವರು ಶ್ರೀಕೃಷ್ಣನಿಂದ ಪ್ರಭಾವಿತರಾಗಿ ದೇವಾಲಯವನ್ನು ನಿರ್ಮಿಸಿ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿದ್ದಾರೆ.
ಹಿಂದೂ- ಮುಸ್ಲಿಂ ನಡುವೆ ಅಲ್ಲಲ್ಲಿ ಆಗಾಗ ಸಂಘರ್ಷಗಳು ನಡೆಯುತ್ತಿದ್ದರೂ, ಕೆಲವೆಡೆಗಳಲ್ಲಿ ಎರಡೂ ಕೋಮಿನ ನಡುವೆ ಸಾರಮಸ್ಯದ ಘಟನೆಗಳೂ ನಡೆಯುತ್ತಿರುತ್ತವೆ.ಅಂಥದ್ದೇ ಒಂದು ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
ಹೌದು.ಜಾರ್ಖಂಡ್‌ನ ದುಮ್ಕಾದ ಮಹೇಶ್‌ಬಥನ್‌ನಲ್ಲಿ ಉದ್ಯಮಿ ನೌಶಾದ್ ಶೇಖ್ 42 ಲಕ್ಷ ರೂಪಾಯಿ ವೆಚ್ಚದಲ್ಲಿ ಕೃಷ್ಣ ಮಂದಿರ ನಿರ್ಮಿಸಿದ್ದಾರೆ. ಶ್ರೀಕೃಷ್ಣನಿಂದ ಪ್ರಭಾವಿತರಾಗಿ ತಾವು ಇದನ್ನು ಕಟ್ಟಿಸಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತರಿಸಿದ ನೌಶಾದ್ ಶೇಖ್, ‘ಎಲ್ಲರಿಗೂ ದೇವರು ಒಬ್ಬನೇ. ಆದ್ದರಿಂದ, ಒಬ್ಬೊಬ್ಬರು ದೇವಸ್ಥಾನ, ಮಸೀದಿ ಅಥವಾ ಚರ್ಚ್‌ನಲ್ಲಿ ಪೂಜಿಸುತ್ತಾರೆ. ನಾವು ಎಲ್ಲಿ ಪೂಜಿಸುತ್ತೇವೆ ಎಂಬುದು ಮುಖ್ಯವಲ್ಲ, ನಾವು ಎಷ್ಟು ಭಕ್ತಿಯನ್ನು ಹೊಂದಿದ್ದೇವೆ ಎಂಬುದು ಮುಖ್ಯ. ಕೃಷ್ಣ ಪರಮಾತ್ಮನೇ ನನ್ನ ಕನಸಿನಲ್ಲಿ ಬಂದು ತನಗಾಗಿ ದೇವಸ್ಥಾನವನ್ನು ನಿರ್ಮಿಸಲು ಪ್ರೇರೇಪಣೆ ನೀಡಿದ್ದಾನೆ. ನನಗೆ ಕೃಷ್ಣನಲ್ಲಿ ಭಕ್ತಿಯಿದೆ. ನಾನು ಶ್ರೀಕೃಷ್ಣನಿಂದ ಪ್ರಭಾವಿತನಾಗಿದ್ದೇನೆ’ ಎಂದಿದ್ದಾರೆ.
ಕಳೆದ ಸೋಮವಾರ ದೇವಸ್ಥಾನದ ‘ಪ್ರಾಣ-ಪ್ರತಿಷ್ಠೆ’ ನಡೆದಿದ್ದು, ಎಲ್ಲಾ ಸಮುದಾಯದ ಜನರು ಈ ದೇವಸ್ಥಾನಕ್ಕೆ ಆಗಮಿಸಿ, ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. 3 ವರ್ಷಗಳಲ್ಲಿ ದೇವಾಲಯದ ನಿರ್ಮಾಣವಾಗಿದ್ದು,ಹಿಂದೂ ಪದ್ಧತಿಯಂತೆ 150 ಬ್ರಾಹ್ಮಣರಿಂದ ‘ಪ್ರಾಣ-ಪ್ರತಿಷ್ಠೆ’ ನೆರವೇರಿಸಲಾಗಿದೆ.