ಅಸ್ಸಾಂ ನ ಚಹಾ ಮಾರಾಟಗಾರ ಯುವಕ ನೀಟ್ ಪರೀಕ್ಷೆ ಪಾಸ್ ಮಾಡಿದ್ದು ನಕಲಿ| ಈತನ ಸುಳ್ಳು ಬಯಲಿಗೆಳೆದ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು
ಅಸ್ಸಾಂನ ಚಹಾ ಮಾರಾಟಗಾರನೊಬ್ಬ ಕಷ್ಟಪಟ್ಟು ಓದಿ ತನ್ನ ಮೊದಲ ಪ್ರಯತ್ನದಲ್ಲೇ ನೀಟ್ ಪರೀಕ್ಷೆ ತೇರ್ಗಡೆಹೊಂದಿ ದೆಹಲಿಯ ಪ್ರತಿಷ್ಠಿತ ಏಮ್ಸ್ ನಲ್ಲಿ ಪ್ರವೇಶ ಪಡೆದಿದ್ದಾರೆ ಎಂಬುದಾಗಿ ಇತ್ತೀಚೆಗೆ ಮಾಧ್ಯಮಗಳು ವರದಿ ಮಾಡಿತ್ತು.
ಇಷ್ಟು ಮಾತ್ರವಲ್ಲದೇ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಚಹಾ ಮಾರಾಟಗಾರನ ಶಿಕ್ಷಣ ವೆಚ್ಚವನ್ನು ಕೂಡಾ ತಮ್ಮಸರಕಾರ ಭರಿಸೋದಾಗಿ ಕೂಡಾ ಹೇಳಿದ್ದರು.
ಅಸ್ಸಾಂನ ಬಜಾಲಿ ಜಿಲ್ಲೆಯ 24 ವರ್ಷದ ಯುವಕ ನಕಲಿ ಪ್ರವೇಶ ಪತ್ರ ಸಿದ್ಧಪಡಿಸಿದ್ದಾನೆ ಎಂಬುದು ಈಗ ವರದಿಯಾಗಿದೆ. ಈ ಸಂಬಂಧ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಗುಂಪೊಂದು ಮೊದಲು ರಾಹುಲ್ ಹೇಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಹಲವು ಮೂಲಗಳಿಂದ ಪರಿಶೀಲಿಸಿದಾಗ ದಾಸ್ ಹರಿಯಾಣದ ವಿದ್ಯಾರ್ಥಿಯೊಬ್ಬನ ದಾಖಲೆಗಳನ್ನು ನಕಲು ಮಾಡಿರುವುದಾಗಿ ಬೆಳಕಿಗೆ ಬಂದಿದೆ.
ರೋಲ್ ನಂ.2303001114 ಎಂಬುದಾಗಿ ದಾಸ್ ತನ್ನ ನೀಟ್ ಪ್ರವೇಶ ಕಾರ್ಡ್ ನಲ್ಲಿ ತೋರಿಸಿದ್ದಾನೆ. ಆದರೆ ಅದನ್ನು ಪರಿಶೀಲಿಸಿದಾಗ ಇದು AIR 11656 ರ್ಯಾಂಕ್ ಪಡೆದ ಹರಿಯಾಣದ ಅಭ್ಯರ್ಥಿ ಎಂಬುದಾಗಿ ತಿಳಿದು ಬಂದಿದೆ.
ಕೆಲವು ವರ್ಷಗಳ ಹಿಂದೆ ರಾಹುಲ್ ತನ್ನ ತಂದೆಯನ್ನು ಕಳೆದುಕೊಂಡಿದ್ದ. ತಾಯಿ ಜೀವನೋಪಾಯಕ್ಕಾಗಿ ಚಹಾ ಅಂಗಡಿ ನಡೆಸುತ್ತಿದ್ದರು. ರಾಹುಲ್ ಕೂಡಾ ಇದಕ್ಕೆ ಸಾಥ್ ಕೊಡುತ್ತಿದ್ದ.
ಈ ನೀಟ್ ನಕಲಿ ಫಲಿತಾಂಶದ ವಿಷಯ ಹೊರಬರುತ್ತಿದ್ದಂತೆ ಜಮೀನು ಮಾಲೀಕರು ಸ್ಥಳ ಖಾಲಿ ಮಾಡುವಂತೆ ದಾಸ್ ತಾಯಿಗೆ ಸೂಚಿಸಿದ್ದಾರೆ. ಈಗ ಅಂಗಡಿ ಖಾಲಿ ಮಾಡಿರುವ ತಾಯಿ, ದಾಸ್ ಹಾಗೂ ಕಿರಿಯ ಸಹೋದರ ತಲೆಮರೆಸಿದ್ದಾರೆ ಎಂದು ಹೇಳಲಾಗಿದೆ.