ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ದೇಹ ತುಂಡರಿಸಲು ಸಿದ್ಧತೆ ನಡೆಸಿದ ವೈದ್ಯರು | ಇನ್ನೇನು ಕತ್ತರಿಸಬೇಕು ಅನ್ನುವಷ್ಟರಲ್ಲಿ ‘ಗೊರಕೆ’ ಹೊಡೆದ ಹೆಣ!!!
ಸತ್ತುಹೋದ ಎಂದು ವೈದ್ಯರು ಹೇಳಿದ ಅದೆಷ್ಟೋ ವ್ಯಕ್ತಿಗಳು ಎದ್ದು ಕುಳಿತಿರುವ ಘಟನೆಗಳು ನಡೆಯುತ್ತಿರುತ್ತವೆ. ಚಿತಾಗಾರಕ್ಕೆ ಒಯ್ಯುವ ವೇಳೆ ಉಸಿರಾಡುವುದು, ಇಲ್ಲವೇ ಕೈ ಕಾಲುಗಳನ್ನು ಅಲ್ಲಾಡಿಸುವುದು… ಹೀಗೆ ಜೀವಂತ ಬಂದಿರುವ ಘಟನೆಗಳು ಅದೆಷ್ಟೋ ನಡೆದಿವೆ.ಅಂಥದ್ದೇ ಒಂದು ಘಟನೆ ಇದೀಗ ಸ್ಪೇನ್‌ನಿಂದ ವರದಿಯಾಗಿದೆ.
ಸ್ಪೇನ್‌ನ ವಿಲ್ಲಾಬೋನಾದಲ್ಲಿರುವ ಆಸ್ಟುರಿಯಸ್ ಸೆಂಟ್ರಲ್ ಪೆನಿಟೆನ್ನಿಯರಿ ಎಂಬ ಜೈಲಿನಲ್ಲಿ ಗೋಂಜಲೋ ಮಾಟೊಯಾ ಜಿಮೆನೆಜ್ ಎಂಬ ಖೈದಿ ಬಿದ್ದಿದ್ದ. ಆತನನ್ನು ಆಸ್ಪತ್ರೆಗೆ ಸಾಗಿಸಿದ್ದು, ಮೂವರು ತಜ್ಞ ವೈದ್ಯರು ಈತ ಸತ್ತುಹೋಗಿರುವುದಾಗಿ ಘೋಷಿಸಿದ್ದರು. ಜೈಲಿನ ಆವರಣದಲ್ಲಿ ಈ ಘಟನೆ ನಡೆದಿತ್ತು.
ಜೈಲಿನಲ್ಲಿರುವ ವ್ಯಕ್ತಿ ಸಾವನ್ನಪ್ಪಿರುವುದರಿಂದ ಕೆಲವು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದ ಮೇರೆಗೆ ವಿಧಿವಿಜ್ಞಾನ ವೈದ್ಯರನ್ನು ಕರೆಸಲಾಗಿತ್ತು. ಅವರು ಸಹ ಈತನ ಸಾವನ್ನು ದೃಢ ಪಡಿಸಿದ್ದರು. ಆತ ಸತ್ತಿರುವುದಾಗಿ ಮನೆಯವರಿಗೂ ವಿಷಯ ತಿಳಿಸಲಾಗಿತ್ತು.
ಸಾವಿನ ಬಗ್ಗೆ ತಿಳಿದುಕೊಳ್ಳಲು ಈತನನ್ನು ಮರಣೋತ್ತರ ಪರೀಕ್ಷೆಗೆ ಕರೆದುಕೊಂಡು ಒಯ್ಯಲಾಗುತ್ತಿತ್ತು. ಪರೀಕ್ಷೆಗಾಗಿ ದೇಹ ತುಂಡರಿಸಲು ಎಲ್ಲಾ ಸಿದ್ಧತೆ ನಡೆಸಲಾಗಿತ್ತು. ಆದರೆ ಅದಕ್ಕೂ ಸ್ವಲ್ಪ ಮುಂಚೆಯೇ ಗೋಂಜಲೊ ದೇಹದಿಂದ ಗೊರಕೆ ಶಬ್ದ ಕೇಳಿಬಂದಿದ್ದು ವೈದ್ಯರು ಬೆಚ್ಚಿಬಿದ್ದಿದ್ದಾರೆ.
ಆರಂಭದಲ್ಲಿ ವೈದ್ಯರು ಹಾಗೂ ಪೋಸ್ಟ್ ಮಾರ್ಟಮ್ ಸ್ಥಳದಲ್ಲಿ ಇದ್ದ ಸಿಬ್ಬಂದಿ ಇದನ್ನು ನಂಬಲಿಲ್ಲ. ನಂತರ ಸೂಕ್ಷ್ಮವಾಗಿ ಗಮನಿಸಿದಾಗ ಆತನ ದೇಹದಲ್ಲಿ ಚಲನೆ ಇರುವುದು ಕಂಡುಬಂತು. ಗೊರಕೆ ಹೊಡೆಯುತ್ತಿದ್ದುದು ಕೂಡ ಅದೇ ದೇಹದಿಂದ ಬರುತ್ತಿರುವುದು ತಿಳಿಯಿತು. ಕೂಡಲೇ ಗೋಂಜಲೊನನ್ನು ಓವಿಡೊದಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಪರೀಕ್ಷೆ ಮಾಡಿದಾಗ ಆತ ಬದುಕಿರುವುದು ತಿಳಿದುಬಂದಿದೆ.
ಈತನಿಗೆ ಸೈನೋಸಿಸ್ ಸಮಸ್ಯೆಯಿತ್ತು. ಆಮ್ಲಜನಕದ ಕೊರತೆಯಿಂದಾಗಿ ಚರ್ಮದ ಬಣ್ಣವು ಬದಲಾಗಿತ್ತು. ಈ ಹಿನ್ನೆಲೆಯಲ್ಲಿ ಆತ ಮೃತಪಟ್ಟಿರುವಂತೆ ಕಂಡಿತ್ತು ಎಂದು ಈಗ ವೈದ್ಯರು ವರದಿಯನ್ನು ನೀಡಿದ್ದಾರೆ.