ಇನ್ನು ಮುಂದೆ ಯಾರೂ ಶಾಲಾ-ಕಾಲೇಜುಗಳಿಗೆ ಹಿಜಾಬ್, ಕೇಸರಿ ಶಲ್ಯ ಧರಿಸಿ ಬರುವಂತಿಲ್ಲ – ಗೃಹ ಸಚಿವ ಆರಗ ಜ್ಞಾನೇಂದ್ರ
ಉಡುಪಿಯ ಹಿಜಾಬ್ ವಿವಾದ ಕುರಿತು ಕೊನೆಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಮೌನ ಮುರಿದಿದ್ದಾರೆ. ಧರ್ಮ ಆಚರಣೆ ಮಾಡಲು ಶಾಲಾ-ಕಾಲೇಜುಗಳು ಇಲ್ಲ. ಈ ಬಗ್ಗೆ ಆಡಳಿತ ಮಂಡಳಿಗಳು ಕ್ರಮವಹಿಸಬೇಕು ಎಂದು ಉಡುಪಿಯ ಹಿಜಾಬ್ ಗೊಂದಲ ವಿಚಾರವಾಗಿ ಗೃಹ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮದ ಪೂಜೆ ಮಾಡಲು ದೇವಾಲಯ, ಮಸೀದಿ, ಚರ್ಚ್ ಇವೆ. ಅಲ್ಲಿ ಬೇಕಾದಾರೆ ಇದನ್ನು ಮಾಡಲಿ. ಆದರೆ ಶಾಲಾ, ಕಾಲೇಜಿನ ವಾತಾವರಣದಲ್ಲಿ ಇಂತಹ ಸಂಘರ್ಷಗಳು ಆಗಬಾರದು. ಎಲ್ಲರೂ ಸೇರಿ ಭಾರತ ಮಾತೆಯ ಮಕ್ಕಳು ಎಂದು ವ್ಯಾಸಂಗಕ್ಕೆ ಬರಬೇಕು ಎಂದು ಸಲಹೆ ನೀಡಿದರು.
ಈಗಾಗಲೇ ಶಿಕ್ಷಣ ಸಚಿವರು ಈ ಬಗ್ಗೆ ಶಾಲೆಯಲ್ಲಿ ಸಮವಸ್ತ್ರ ಕಡ್ಡಾಯ ಎಂದು ಆದೇಶವನ್ನು ಹೊರಡಿಸಿದ್ದಾರೆ. ಇದರಿಂದಾಗಿ ಶಾಲೆ ಕಾಲೇಜಿಗೆ ಯಾರೂ ಹಿಜಾಬ್ ಹಾಗೂ ಕೇಸರಿ ಶಾಲುಗಳನ್ನು ಧರಿಸಿ ಬರಬಾರದು. ಜೊತೆಗೆ ಶಾಲೆಯಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ಓದಬೇಕು ಎಂದು ತಿಳಿಹೇಳಿದರು.
ಶಾಲಾ – ಕಾಲೇಜುಗಳಲ್ಲಿ ಎಲ್ಲರೂ ಭಾರತ ಮಕ್ಕಳು ಎಂದು ಓದುವುದರ ಜೊತೆಗೆ ಶೈಕ್ಷಣಿಕ ವಾತಾವರಣದಲ್ಲಿ ದೇಶದ ಐಕ್ಯತೆ, ಸಮಾನತೆ ಬಗ್ಗೆ ಕಲಿಬೇಕು. ವಿದ್ಯಾರ್ಥಿಗಳು ಶಾಲೆಗಳಲ್ಲಿ ಕಲಿತು ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂಬ ಸಂಸ್ಕಾರವನ್ನು ಪಡೆಯಬೇಕು ಎಂದರು.
ಶಾಲೆಗಳಲ್ಲಿ ಮಕ್ಕಳು ದೇಶದ ಐಕ್ಯತೆ ಬಗ್ಗೆ ಸಂಸ್ಕಾರ ಪಡೆಯದಿದ್ದರೆ ಏನಾಗಬುದು ಎಂಬುದನ್ನು ಎಲ್ಲರೂ ಯೋಚನೆ ಮಾಡಬೇಕು. ರಾಷ್ಟ್ರ ಒಗ್ಗಟ್ಟಾಗಬೇಕು ಎಂಬುದಕ್ಕೆ ಅಡ್ಡಗಾಲಾಗುವವರನ್ನು ಸರಿ ಮಾಡುವ ಕೆಲಸ ನಾವು ಮಾಡಬೇಕಾಗುತ್ತದೆ. ಉಡುಪಿಯ ಹಿಜಾಬ್ ಗೊಂದಲದ ವಿಚಾರದ ಹಿಂದೆ ಮತೀಯ ಸಂಘಟನೆಗಳ ಇದ್ದರೆ ಈ ಬಗ್ಗೆ ನಿಗಾ ವಹಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.