ಕಾರಿನ ಹೆಡ್ಲೈಟ್ ಬೆಳಕಿನಲ್ಲಿ ಪರೀಕ್ಷೆ ಬರೆದ 12 ನೇ ತರಗತಿಯ 400 ವಿದ್ಯಾರ್ಥಿಗಳು!!!

12 ನೇ ತರಗತಿಯ 400 ವಿದ್ಯಾರ್ಥಿಗಳು ತಮ್ಮ ಹಿಂದಿ ಪರೀಕ್ಷೆಯನ್ನು ಸೋಮವಾರ ಕಾರಿನ ಹೆಡ್ ಲೈಟ್ ಬೆಳಕಿನಲ್ಲಿ ಬರೆದ ಘಟನೆಯೊಂದು ನಡೆದಿದೆ. ಈ ಘಟನೆ ಬಿಹಾರದ ಮೋತಿಹಾರಿ ಪರೀಕ್ಷಾ ಕೇಂದ್ರದಿಂದ ವರದಿಯಾಗಿದೆ.

ಮಹಾರಾಜ ಹರೇಂದ್ರ ಕಿಸೋರ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಸೋಮವಾರ ಎರಡನೇ ಪರೀಕ್ಷೆ ಅಪರಾಹ್ನ 1.45 ರಿಂದ ಸಂಜೆ 5 ಗಂಟೆಯವರೆಗೆ ನಡೆಯಬೇಕಿತ್ತು. ಆದರೆ ಸೀಟು ಹಂಚಿಕೆಯ ಗೊಂದಲ ಕೊನೆಯ ಕ್ಷಣದವರೆಗೆ ಪರಿಹಾರವಾಗದ ಕಾರಣ ಅಪರಾಹ್ನ 4.30 ರವರೆಗೆ ವಿದ್ಯಾರ್ಥಿಗಳಿಗೆ ಉತ್ತರಪತ್ರಿಕೆ ನೀಡಿರಲಿಲ್ಲ.

ಬೇಸತ್ತ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಲು ಶುರುಮಾಡಿದರು. ಅನಂತರ ಪೊಲೀಸರು ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.

ಇಷ್ಟೊತ್ತಿಗಾಗಲೇ ಕತ್ತಲೆ ಆಗಲು ಶುರುವಾಗಿತ್ತು. ಅದರ ಜೊತೆಗೆ ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್ ಕೂಡಾ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಗದ್ದಲ ಉಂಟಾಯಿತು. ಈ ಸಮಯದಲ್ಲಿ ಕಾರುಗಳನ್ನು ಹೊಂದಿದ್ದ ಪೋಷಕರು ತಮ್ಮ ಕಾರಿನ ಹೆಡ್ ಲೈಟ್ ಆನ್ ಮಾಡಿದರು. ಈ ಬೆಳಕಿನಲ್ಲೇ ವಿದ್ಯಾರ್ಥಿಗಳು ಕಾಲೇಜಿನ ಕಾರಿಡಾರಿನಲ್ಲಿ ಕುಳಿತು ಪರೀಕ್ಷೆ ಬರೆದರು.

ಈಗ ಈ ಬಗ್ಗೆ ಉನ್ನತ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

Leave A Reply

Your email address will not be published.