

ಸಾಮಾಜಿಕ ಮಾಧ್ಯಮದ ಮೂಲಕ ಮಧ್ಯಪ್ರದೇಶದ ಗ್ವಾಲಿಯರ್ ನಗರದ 26 ವರ್ಷದ ಅವಿನಾಶ್ ಎಂಬ ಯುವಕನಿಗೆ, ಮೊರಾಕೊ ದೇಶದ 24 ವರ್ಷದ ಫದ್ವಾ ಲೈಮಾಲಿ ಎಂಬ ಯುವತಿಯ ಪರಿಚಯವಾಗಿ ನಂತರ ಪ್ರೀತಿ ಹುಟ್ಟಿ, ನಂತರ ಮದುವೆಯಾಗಲು ಬಯಸಿದ್ದಾರೆ. ಇವರಿಬ್ಬರ ಪ್ರೀತಿ ಶುರುವಾಗಿ ಬರೋಬ್ಬರಿ 4 ವರ್ಷ ಆಯಿತು.
ಶೇ.99 ರಷ್ಟು ಮುಸ್ಲಿಮರೇ ಇರುವ ದೇಶ ಮೊರಕೊ. ರಾಜಪ್ರಭುತ್ವ ವಿರುವ ದೇಶ.
ಅವಿನಾಶ್ ಮೊರಕೊಗೆ ಹೋಗಿ ಪ್ರೇಯಸಿ ಫದ್ವಾಳ ಜೊತೆ ಮದುವೆಯಾಗಲು ಆಕೆಯ ತಂದೆ ಆಲಿ ಲೈಮಾಲಿ ಅವರೊಂದಿಗೆ ಪ್ರೀತಿಯ ಬಗ್ಗೆ ತಿಳಿಸಿ ಮದುವೆಗೆ ಅನುಮತಿ ಕೋರಿದ. ಆದರೆ ಫದ್ವಾ ತಂದೆ ಇದಕ್ಕೆ ಒಪ್ಪಲಿಲ್ಲ. ಕೊನೆಗೂ ಫದ್ವಾ ಒತ್ತಾಯದಿಂದ ಒಪ್ಪಬೇಕಾಯಿತು.
ಮದುವೆಗೆ ಒಪ್ಪಿದರೂ ಫದ್ವಾ ತಂದೆ ಒಂದು ಷರತ್ತು ವಿಧಿಸಿದರು. ಅದೇನೆಂದರೆ ಅವಿನಾಶ್ ಇಸ್ಲಾಂಗೆ ಮತಾಂತರಗೊಳ್ಳಬೇಕು ಎಂದು. ಹಾಗೆಯೇ ಮೊರಾಕೊದಲ್ಲೇ ನೆಲೆಸಬೇಕು ಎಂದು.
ಆದರೆ ಅವಿನಾಶ್ ಇದಕ್ಕೆ ಒಪ್ಪಲಿಲ್ಲ. ಇದರ ಬದಲಾಗಿ ಫದ್ವಾ ನಾನು ಅವಿನಾಶ್ ಜೊತೆ ಭಾರತಕ್ಕೆ ತೆರಳುವುದಾಗಿ ಹೇಳಿ ಹಠ ಹಿಡಿದಳು. ಎಲ್ಲಾ ಅಡೆತಡೆ ದಾಟಿ ಭಾರತ ತಲುಪಬೇಕೆಂದು ಬಯಸಿದ ಫದ್ವಾಗೆ ನಂತರ ಕೊರೊನಾ ಅಡಚಣೆಯಾಯಿತು. ಕೊರೊನಾ ಪ್ರಕರಣಗಳು ಕಡಿಮೆ ಆಗುವವರೆಗೆ ಕಾದ ಜೋಡಿ ಭಾರತಕ್ಕೆ ಬಂದು ಸರಕಾರಕ್ಕೆ ಮನವಿ ಸಲ್ಲಿಸಿದರು. ಎಲ್ಲಾ ನಿಯಮಗಳ ಅನುಸಾರ ಬುಧವಾರ ಈ ಜೋಡಿ ಸತಿಪತಿಗಳಾಗಿದ್ದಾರೆ.
ಫದ್ವಾ ಮತಾಂತರಗೊಳ್ಳುವಂತೆ ನಾನು ಎಂದಿಗೂ ಒತ್ತಾಯ ಮಾಡುವುದಿಲ್ಲ ಎಂದು ತನ್ನ ಪತ್ನಿಯ ಬಗ್ಗೆ ಹೇಳಿಕೊಂಡಿದ್ದಾರೆ ಅವಿನಾಶ್.













