

ಚೆನ್ನೈ : ಪ್ರಧಾನಿ ನರೇಂದ್ರ ಮೋದಿಯನ್ನು ತಮಿಳು ಕಾರ್ಯಕ್ರಮವೊಂದರಲ್ಲಿ ಕೀಳಾಗಿ ಬಿಂಬಿಸಿದ ಆರೋಪದಲ್ಲಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಗೆ ನೋಟಿಸ್ ನೀಡಿದೆ.
ಜ.15 ರಂದು ಜ್ಯೂನಿಯರ್ ಸೂಪರ್ ಸ್ಟಾರ್ ಸೀಜನ್ 4 ಟೀವಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗಿತ್ತು. ಇದರಲ್ಲಿ ಪ್ರಧಾನಿಯನ್ನು ಕೀಳಾಗಿ ಬಿಂಬಿಸಿದ್ದಕ್ಕಾಗಿ ರಾಜ್ಯ ಬಿಜೆಪಿಯ ಮಾಹಿತಿ ಹಾಗೂ ಪ್ರಸಾರ ಇಲಾಖೆಯ ಹಾಗೂ ಸಾಮಾಜಿಕ ಮಾಧ್ಯಮ ಕೋಶದ ಮುಖ್ಯಸ್ಥ ಸಿ ಟಿ ಆರ್ ನಿರ್ಮಲ್ ಕುಮಾರ್ ದೂರು ದಾಖಲಿಸಿದ್ದಾರೆ.
ಸುಮಾರು 10 ವರ್ಷದ ಮಕ್ಕಳನ್ನು ಬಳಸಿಕೊಂಡು ಉದ್ದೇಶಪೂರ್ವಕವಾಗಿ ಪ್ರಧಾನಿಯ ಅವಹೇಳನ ಮಾಡಲಾಗಿದೆ. ಹಾಗೂ ಇದರ ವಿರುದ್ಧ ಚಾನೆಲ್ ಯಾವುದೇ ಕ್ರಮ ಕೈಗೊಂಡಿಲ್ಲ.
ಇಷ್ಟು ಮಾತ್ರವಲ್ಲದೇ ಬಿಜೆಪಿಗರು ಶೋನ ನಿರ್ಣಾಯಕರನ್ನು ಅವರ ಈ ಕಾರ್ಯಕ್ರಮದ ಪ್ರತಿಕ್ರಿಯೆ ಕುರಿತು ಕೇಳಿದಾಗ, ಅವರು ಬೇರೆ ಪ್ರದರ್ಶನಕ್ಕಾಗಿ ನೀಡಿದ ತಮ್ಮ ಪ್ರತಿಕ್ರಿಯೆಗಳನ್ನು ಇಲ್ಲಿ ಎಡಿಟ್ ಮಾಡಿ ಸೇರಿಸಲಾಗಿದೆ ಎಂದು ಸಬೂಬು ಹೇಳಿದ್ದಾರೆ.
ಝೀ ಕಾರ್ಯಕ್ರಮ ಈ ವಿವಾದಾತ್ಮಕ ಭಾಗವನ್ನು ತೆಗೆದುಹಾಕುವುದಾಗಿ ಹಾಗೂ ಅದನ್ನು ಮರುಪ್ರಸಾರ ಮಾಡದಿರುವುದಾಗಿ ಭರವಸೆ ನೀಡಿದೆ ಎಂದು ನಿರ್ಮಲ್ ತಿಳಿಸಿದ್ದಾರೆ.












