ಸೈಕಲ್ ಮೂಲಕ ಮಸಾಲಾ ಪದಾರ್ಥ ಮಾರುತ್ತಿದ್ದ ವ್ಯಕ್ತಿ ಈಗ 154 ಕೋಟಿ ಮೌಲ್ಯದ ಕಂಪನಿಯ ಒಡೆಯ |ಈತನ ಯಶೋಗಾಥೆಯ ಕಥೆ ನಿಮಗಾಗಿ

ಬಾದ್ ಶಾ ಮಸಾಲಾ ಈ ಪದ ನಿಮಗೆ ಚಿರಪರಿಚಿತ ಅಂತ ಅನಿಸುತ್ತದೆಯೇ ? ಹೌದು ಅಂತಾದರೆ ಇದರ ಯಶೋಗಾಥೆಯ ಕಥೆ ನೀವು ತಿಳಿದುಕೊಳ್ಳಬೇಕು.

ಮೊದಲಿಗೆ ಸೈಕಲಿನಲ್ಲಿ ಮಸಾಲೆ ಪದಾರ್ಥಗಳನ್ನು ಮಾರುತ್ತಿದ್ದ ವ್ಯಕ್ತಿಯೊಬ್ಬ ನಂತರ 154 ಕೋಟಿ ಮೌಲ್ಯದ ಮಸಾಲೆ ಉತ್ಪನ್ನಗಳ ಕಂಪನಿಯ ಒಡೆಯನಾದ ರೋಚಕ ಕಥೆ ಇದು.

ಟಿವಿ ಜಾಹೀರಾತಿನಲ್ಲಿ ಪ್ರಸಾರವಾಗುವ ಘೋಷವಾಕ್ಯ ಹಾಗೂ ಆಹಾರ ಖಾದ್ಯಗಳನ್ನು ನೋಡಿ ವೀಕ್ಷಕರ ಬಾಯಲ್ಲಿ ನೀರೂರುವುದು ಖಂಡಿತ. ಇತ್ತೀಚೆಗೆ ಇನ್ ಸ್ಟಾಗ್ರಾಂನಲ್ಲಿ 1990 ರ ಅವಧಿಯ ಜಾಹೀರಾತನ್ನು ಮತ್ತೆ ಪ್ರಸಾರ ಮಾಡುತ್ತಿದ್ದು, ಈ ನೆನಪನ್ನು ಮೆಲುಕು ಹಾಕುವಂತೆ ಮಾಡಿದೆ.

‘ ಬಾದ್ ಶಾ ಮಸಾಲಾ’ ಈ ಬ್ರ್ಯಾಂಡ್ 1958 ನೇ ಇಸವಿಯಿಂದಲೇ ಗ್ರಾಹಕರ ಹೃದಯ ಗೆದ್ದಿದೆ. ಹೀಗಿದ್ದೂ ಭಾರತದಲ್ಲಿ ಈ ಪುರಾತನ ಮಸಾಲೆ ಪದಾರ್ಥಗಳ ಕಂಪನಿಯ ಹಿಂದಿರುವ ವ್ಯಕ್ತಿಯ ಬಗ್ಗೆ ಸಾಕಷ್ಟು ವ್ಯಕ್ತಿಗೆ ತಿಳಿದಿರಲಿಕ್ಕಿಲ್ಲ.

ಬಾದ್ ಶಾ ಮಸಾಲಾ ಕಂಪನಿಯ ಎರಡನೇ ತಲೆಮಾರಿನ ಉದ್ಯಮಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಹೇಮಂತ್ ಝವೇರಿಯವರೊಂದಿಗೆ ನಡೆದ ಸಂದರ್ಶನದ ಮಾತು ಇದಾಗಿದೆ.

1958 ರಲ್ಲಿ, ಜವಾಹರ್ ಲಾಲ್ ಜಮ್ನಾದಾಸ್ ಝವೇರಿ ಮುಂಬೈನಲ್ಲಿ ಕೇವಲ ಗರಂ ಮಸಾಲಾ, ಮಸಾಲೆ ಟೀ ಮಾರಾಟ ವ್ಯಾಪಾರದಲ್ಲಿ ತೊಡಗಿಕೊಂಡಿದ್ದರು. ಈ ಮಸಾಲೆಯು ಶೀಘ್ರವಾಗಿ ಜನಪ್ರಿಯಗೊಂಡಿತಲ್ಲದೇ, ತಮ್ಮ ಉತ್ಪನ್ನ ಜಾಹೀರಾತಿನಲ್ಲಿ ‘ ಗುಣಮಟ್ಟದ ಉತ್ಪನ್ನ ಯಶಸ್ಸು ಗಳಿಸಲು ದೀರ್ಘಕಾಲ ತೆಗೆದುಕೊಳ್ಳುವುದಿಲ್ಲ’ ಎಂಬುದನ್ನು ಸೇರಿಸಿದರು.

ಇದಾದ ನಂತರ ಜವಾಹರಲಾಲ್ ಜಮ್ನದಾಸ್ ಮುಂಬೈನ ಉಪ‌ನಗರವಾದ ಘಟ್ಕೋಪಾರ್ ನಲ್ಲಿ ಸಣ್ಣದೊಂದು ಘಟಕವನ್ನು ಶುರು ಮಾಡಿದರು. ಈ ಘಟಕವು ಗುಜರಾತ್ ನ ಉಂಬರ್ ಗಾಂವ್ ನಲ್ಲಿ 6000 ಚದರ ಅಡಿ ವಿಸ್ತಾರದ ದೊಡ್ಡ ಘಟಕವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಇದಾದ ನಂತರ ಕಂಪನಿಯು ಪಾವ್ ಭಾಜಿ ಮಸಾಲಾ, ಚಾಟ್ ಮಸಾಲಾ ಹಾಗೂ ಚನ್ನಾ ಮಸಾಲಾ ಕೊಡುಗೆಗಳನ್ನು ಪರಿಚಯಿಸಿತು.

ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲೂ ಮಾರಾಟ 1996 ರವರೆಗೆ ಜವಹರಲಾಲ್ ಜಮ್ನಾದಾಸ್ ಈ ವ್ಯವಹಾರವನ್ನು ಯಶಸ್ವಿಯಾಗಿ ಮುನ್ನೆಡೆಸಿದರಾದರೂ, ಅಕಾಲಿಕ ನಿಧನಕ್ಕೊಳಗಾದರು. ಇದಾದ ನಂತರ ಅವರ ಪುತ್ರ ಹೇಮಂತ್ ಕಂಪನಿಯ ಸಾರಥ್ಯ ವಹಿಸಿಕೊಂಡರು‌‌. ಹೇಮಂತ್ ಕಂಪನಿಯ ಸಾರಥ್ಯವನ್ನು ವಹಿಸಿಕೊಂಡ ನಂತರ ಕಂಪನಿಯು ಜನರ ಬಳಿಗೆ ತಲುಪುವಂಥ ದಿಟ್ಟ ಹೆಜ್ಜೆಗಳನ್ನಿಟ್ಟರು.

ಇಂದು ಬಾದ್ ಶಾ ಮಸಾಲಾ 20 ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗುತ್ತಿದೆ. 450 ವಿತರಕರ ವಿತರಣಾ ಜಾಲದೊಂದಿಗೆ ಈ ಬ್ರ್ಯಾಂಡ್ ಸೂಪರ್ ಮಾರ್ಕೆಟ್ ಗಳು, ಸ್ಥಳೀಯ ದಿನಸಿ ಅಂಗಡಿಗಳು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೊ ಪ್ರಮುಖ ಸ್ಥಾನ ಪಡೆದಿದೆ.

ತಮ್ಮಂತೆಯೇ ಮಸಾಲೆ ಪದಾರ್ಥ ತಯಾರಿಕಾ ಪ್ರತಿಸ್ಪರ್ಧಿಗಳಾಗಿರುವ ವಸಂತ್ ಮಸಾಲಾ, ಪುಷ್ಪ ಮಸಾಲಾ, ಎಂಡಿಎಚ್ ಮಸಾಲಾ, ಎವರೆಸ್ಟ್ ಫುಡ್ ಪ್ರಾಡೆಕ್ಟ್ಸ್ ಪ್ರೈ ಲಿ, ಮದರ್ ಸ್ಪೈಸ್ ಲಿಮಿಟೆಡ್ ನಂತಹ ಕಂಪನಿಗಳ ತುರುಸಿನ ಪೈಪೋಟಿಯ ನಡುವೆಯೂ ಮಾರುಕಟ್ಟೆ ಶೇ.35 ರಷ್ಟು ಪ್ರಮಾಣವನ್ನು ಬಾದ್ ಶಾ ಮಸಾಲಾ ಆಕ್ರಮಿಸಿಕೊಂಡಿದೆ.

ಬಾದ್ ಶಾ ಮಸಾಲಾ ಆರು ವಿಭಾಗಗಳಲ್ಲಿ ಕಾರ್ಯಾಚರಿಸುತ್ತಿದ್ದು, ಸುಮಾರು 60 ದಾಸ್ತಾನು ಸಂಗ್ರಹ ಘಟಕಗಳನ್ನು ಹೊಂದಿದೆ. ಬಾದ್ ಶಾ ಕಂಪನಿಯು ಪ್ರತಿ ತಿಂಗಳೂ 400-500 ಟನ್ ಮಸಾಲೆ ಪದಾರ್ಥಗಳನ್ನು ಉತ್ಪಾದಿಸುತ್ತದೆ.

Leave A Reply

Your email address will not be published.