ಸಂಕಷ್ಟದಲ್ಲಿದ್ದೇವೆ.. ಸಹಾಯ ಮಾಡಿ ಎಂದು ವಿಶ್ವದೆದುರು ಅಂಗಲಾಚಿ ಬೇಡಿದ ಅಫ್ಘಾನಿಸ್ತಾನ ಸರ್ಕಾರ !! | ತಾಲಿಬಾನಿಗಳ ಅಟ್ಟಹಾಸಕ್ಕೆ ಇನ್ನಾದರೂ ಕಡಿವಾಣ ಬಿದ್ದೀತೇ??
ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತಾಗಿದೆ ಅಫ್ಘಾನಿಸ್ತಾನದ ಸ್ಥಿತಿ. ಸದಾ ಪ್ರಜೆಗಳನ್ನು ಶಿಕ್ಷಿಸುತ್ತಾ ರಾಕ್ಷಸರಂತೆ ಕ್ರೌರ್ಯ ಮೆರೆಯುತ್ತಿದ್ದ ತಾಲಿಬಾನ್ ಸರ್ಕಾರ ಇದೀಗ ವಿಶ್ವದೆದುರು ಮಂಡಿಯೂರಿ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದೆ. ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಿ ಆಕ್ರಮಣಕಾರಿಯಾಗಿ ಆಡಳಿತಕ್ಕೇರಿದ್ದ ತಾಲಿಬಾನ್ ನಾಯಕರು ಇದೀಗ ಆಡಳಿತ ಬಿಕ್ಕಟ್ಟಿಗೆ ಸಿಲುಕಿದ್ದು ತಮಗೆ ನೆರವು ನೀಡುವಂತೆ ವಿಶ್ವದ ರಾಷ್ಟ್ರಗಳಿಗೆ ಮನವಿ ಮಾಡುವ ಸ್ಥಿತಿ ತಲುಪಿದ್ದಾರೆ.
ಹೌದು, ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ಎದುರಾಗಿರುವ ಮಾನವೀಯ ಬಿಕ್ಕಟ್ಟಿನ ಪರಿಹಾರಕ್ಕೆ ವಿಶ್ವದ ರಾಷ್ಟ್ರಗಳು ತಮ್ಮ ರಾಜಕೀಯ ಸಮಸ್ಯೆಯನ್ನೂ ಮೀರಿ ಸಹಾಯ ಹಸ್ತ ಚಾಚಬೇಕು ಎಂದು ತಾಲಿಬಾನ್ ನಾಯಕ ಮುಲ್ಲಾ ಬರಾದರ್ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ತಾಲಿಬಾನ್‌ನ ಉಪ ಪ್ರಧಾನ ಮಂತ್ರಿ ಮುಲ್ಲಾ ಅಬ್ದುಲ್ ಘನಿ ಬರಾದಾರ್, ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯು ಗಂಭೀರವಾಗಿದೆ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನ ಒಂದು ಕಡೆ ನಿರ್ಬಂಧಗಳನ್ನು ಎದುರಿಸುತ್ತಿದೆ. ಮತ್ತೊಂದೆಡೆ, ಕಳೆದ 20 ವರ್ಷಗಳ ಆಡಳಿತ ದೇಶದಲ್ಲಿ ನಾಗರಿಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಯಾವುದೇ ಮೂಲಸೌಕರ್ಯ ಸೃಷ್ಟಿ ಮಾಡಿಲ್ಲ. ದೇಶದ ನಾಗರಿಕರಿಗೆ ಹಣ, ವಸತಿ ಮತ್ತು ಆಹಾರದ ತೀವ್ರ ಅಗತ್ಯವಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಅಫ್ಘನ್ನರಿಗೆ ವಿಶ್ವ ರಾಷ್ಟ್ರಗಳಿಂದ ಮಾನವೀಯ ಸಹಾಯದ ತುರ್ತು ಎದುರಾಗಿದೆ ಎಂದು ಮುಲ್ಲಾ ಬರದಾರ್ ಹೇಳಿಕೊಂಡಿದ್ದಾರೆ.
ತುರ್ತು ಪರಿಸ್ಥಿತಿ ಎದುರಾದರೂ ತಾಲಿಬಾನ್ ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ ಎಂದ ಬರಾದರ್, ನಾಗರಿಕರಿಗೆ ಸಹಾಯ ಮಾಡಲು ಸಚಿವಾಲಯಗಳು ಮತ್ತು ಸರ್ಕಾರಿ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.