ಉಪ್ಪಿನಂಗಡಿ:ಮದುವೆ ವಾರ್ಷಿಕೋತ್ಸವದ ದಿನದಂದೇ ದಂಪತಿ ಬಾಳಿನಲ್ಲಿ ವಿಧಿಯ ಕರಿನೆರಳು!! ಪತಿ-ಮಕ್ಕಳೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಬೈಕ್ ಸ್ಕಿಡ್-ಗಂಭೀರ ಗಾಯಗೊಂಡ ಪೆರಾಬೆ ನಿವಾಸಿ ಮಹಿಳೆ ಸಾವು
ಮದುವೆ ವಾರ್ಷಿಕೋತ್ಸವದ ದಿನದಂದು ಖುಷಿಯಿಂದ ದೇವಸ್ಥಾನಕ್ಕೆ ತೆರಳುತ್ತಿದ್ದ ಪತಿ-ಪತ್ನಿ ಸಹಿತ ಇಬ್ಬರು ಮಕ್ಕಳು ವಿಧಿಯ ಕ್ರೂರ ಆಟಕ್ಕೆ ಸಿಲುಕಿ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ಪತ್ನಿ ಮೃತಪಟ್ಟ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಯಾಡಿ ಕೊಂತ್ರಿಜಾಲು ಎಂಬಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಕಡಬ ತಾಲೂಕು ಪೆರಾಬೆ ಅತ್ರಿಮಜಲು ದಿನೇಶ್ ಎಂಬವರ ಪತ್ನಿ ಗೀತಾ(30)ಎಂದು ಗುರುತಿಸಲಾಗಿದೆ.
ಘಟನೆ ವಿವರ: ದಿನೇಶ್ ಹಾಗೂ ಗೀತಾರ ಮದುವೆ ವಾರ್ಷಿಕೋತ್ಸವದ ದಿನದಂದು ತಮ್ಮಿಬ್ಬರು ಮಕ್ಕಳೊಂದಿಗೆ ಬುಡೆರಿಯಾ ದೈವಸ್ಥಾನದಲ್ಲಿ ನಡೆಯುತ್ತಿದ್ದ ನೇಮೋತ್ಸವಕ್ಕೆ ತೆರಳಿ, ಅಲ್ಲಿಂದ ಆಲಂಕಾರು-ನೆಲ್ಯಾಡಿ ಮಾರ್ಗವಾಗಿ ಸೌತಡ್ಕ ದೇವಸ್ಥಾನಕ್ಕೆ ತೆರಳುತ್ತಿದ್ದರು. ಇವರು ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನೆಲ್ಯಾಡಿ ಕೊಲ್ಯೊಟ್ಟು ಅಂಗನವಾಡಿ ಕೇಂದ್ರದ ಬಳಿ ಸ್ಕಿಡ್ ಆದ ಪರಿಣಾಮ ಸವಾರ ದಿನೇಶ್ ಹಾಗೂ ಮಕ್ಕಳು ಸಣ್ಣಪುಟ್ಟ ಗಾಯಗೊಂಡರೆ, ಸಹಸವಾರೆ ಪತ್ನಿ ಗೀತಾ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು.
ಕೂಡಲೇ ಗೀತಾ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕೆತ್ಸೆ ಫಲಕಾರಿಯಾಗದ ಕೊನೆಯುಸಿರೆಳೆದಿದ್ದಾರೆ.ಈ ಸಂಬಂಧ ದಿನೇಶ್ ರವರ ಅಣ್ಣ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.