ಕಾಂಗ್ರೆಸ್ ಉಚ್ಛಾಟಿತ ರಾಜೇಶ್ ಬಾಳೆಕಲ್ಲು ಬಿಜೆಪಿ ಸೇರ್ಪಡೆ!! ಜಿಲ್ಲೆಯ ಘಟಾನುಘಟಿ ನಾಯಕರು ಪಕ್ಷಕ್ಕೆ ಬರಮಾಡಿಕೊಳ್ಳುವಾಗ ಬಿಜೆಪಿ ಕಾರ್ಯಕರ್ತರ ಆಕ್ಷೇಪ
ಕಾಂಗ್ರೆಸ್ ಉಚ್ಛಾಟಿತ ನಾಯಕ ರಾಜೇಶ್ ಬಾಳೆಕಲ್ಲು ಅವರನ್ನು ಇಂದು ಜಿಲ್ಲೆಯ ಘಟನುಘಟಿ ನಾಯಕರು ನೆರೆದಿದ್ದ ಸಭಾವೇದಿಕೆಯಲ್ಲಿ ಬಿಜೆಪಿಗೆ ಬರಮಾಡಿಕೊಳ್ಳಲಾಗಿತ್ತು. ಇದೇ ವೇಳೆ ಬಿಜೆಪಿಯ ಇತರ ಸ್ಥಳೀಯ ನಾಯಕರುಗಳ ಸಹಿತ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ, ಕಪ್ಪು ಬಾವುಟ ಪ್ರದರ್ಶಿಸಿದರು. ಆದರೂ ಕಾರ್ಯಕರ್ತರ ಮಾತಿಗೆ ಬಗ್ಗದ ನಾಯಕರುಗಳು ಬಾಳೆಕಲ್ಲು ಅವರನ್ನು ಶಾಲು ಹಾಕಿ ಬರಮಾಡಿಕೊಂಡಾಗ, ಬೂತ್ ನಾಯಕರು ತಮ್ಮ ನಾಮಫಲಕವನ್ನು ಹಿಂದಿರುಗಿಸಿ ನಡೆದರು. ಸದ್ಯ ವಿಟ್ಲ ಬಿಜೆಪಿಯಲ್ಲಿ ಮುಂದೇನಾಗುತ್ತದೆ ಎಂಬ ಯೋಚನೆ ಕಾಡಿದೆ.
ಈ ಮೊದಲು ಕಾಂಗ್ರೆಸ್ ನ ನಾಯಕರಾಗಿ ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಹಾಲಿ ಉಪಾಧ್ಯಕ್ಷರಾಗಿದ್ದ ರಾಜೇಶ್, ಪಕ್ಷದ ಅಭ್ಯರ್ಥಿಯೋರ್ವರ ವಿರುದ್ಧ ಪ್ರಚಾರ ಹಾಗೂ ಪಕ್ಷದ ಅವಹೇಳನ ನಡೆಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಗೇಟ್ ಪಾಸ್ ನೀಡಿತ್ತು.
ಇಂದು ಅಧಿಕೃತವಾಗಿ ವಿಟ್ಲದಲ್ಲಿ ನಡೆದ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎಸ್ ಅಂಗಾರ, ಸಂಜೀವ ಮಠಂದೂರು ಅವರ ಸಮ್ಮುಖದಲ್ಲಿ ರಾಜೇಶ್ ಹಾಗೂ ಇತರ 8 ಮಂದಿ ಬಿಜೆಪಿ ಸೇರ್ಪಡೆಯಗಿದ್ದಾರೆ.ಈ ಸಂದರ್ಭ ಪಕ್ಷಕ್ಕೆ ಸೇರಿಸಿಕೊಳ್ಳಬಾರದೆಂದು ಪಕ್ಷದ ಬೂತ್ ಅಧ್ಯಕ್ಷರುಗಳ ಸಹಿತ ಇತರ ಕಾರ್ಯಕರ್ತರು ಪಟ್ಟು ಹಿಡಿದಿದ್ದು, ಕಪ್ಪು ಪಟ್ಟಿ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೂ ಬಿಜೆಪಿ ನಾಯಕರು ಸ್ಥಳೀಯ ನಾಯಕರ ಮಾತಿಗೆ ಕಿವಿಗೊಡದೆ ಪಕ್ಷಕ್ಕೆ ಬರಮಾಡಿಕೊಂಡಿದ್ದು, ಬೂತ್ ನಾಯಕರುಗಳು ತಮ್ಮ ಮನೆಗೆ ಅಂಟಿಸಿದ್ದ ನಾಮಫಲಕ ಹಿಂದಿರುಗಿಸಿ ಆಕ್ರೋಶ ಹೊರಹಾಕಿದ್ದಾರೆ.ಸದ್ಯ ವಿಟ್ಲ ಬಿಜೆಪಿ ಪಾಳಯದಲ್ಲಿ ಬಿರುಕು ಮೂಡಿದ್ದು ಎತ್ತ ಸಾಗಲಿದೆ ಎಂಬುವುದು ಪ್ರಶ್ನೆಯಾಗುಳಿದಿದೆ.