ಕರಾವಳಿಯಲ್ಲಿ ಪ್ರಾರಂಭವಾಯಿತು ‘ಕಂಬಳ ಋತು’ | ಮೊದಲ ಕಂಬಳಕ್ಕೆ ಸಾಕ್ಷಿಯಾಯಿತು ಸಿದ್ಧಕಟ್ಟೆಯ ಹೊಕ್ಕಾಡಿಗೋಳಿ | ಕಂಬಳದಲ್ಲಿಯೂ ಕೇಳಿಬಂತು ಮರೆಯಾದ ಪುನೀತ್ ರಾಜ್ ಕುಮಾರ್ ಹೆಸರು!!
ತುಳುನಾಡು ಎಂದ ಕೂಡಲೇ ನೆನಪಿಗೆ ಬರುವುದೇ ಕಂಬಳ. ಈ ದೃಶ್ಯವನ್ನು ಕಣ್ ತುಂಬಿಕೊಳ್ಳುವುದೇ ಒಂದು ರೋಮಾಂಚನ.ಇದೀಗ ಕರಾವಳಿಯಲ್ಲಿ ಕಂಬಳ ಋತು ಆರಂಭವಾಗಿದ್ದು,ಪ್ರಥಮ ಕಂಬಳ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ಹೊಕ್ಕಾಡಿಗೋಳಿ ಎಂಬಲ್ಲಿ ನಡೆದಿದೆ.
ಬಂಟ್ವಾಳದ ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿಭಾಗದಲ್ಲಿ ಮಹಿಷಮರ್ದಿನಿ ಕಂಬಳ ಸಮಿತಿ ವತಿಯಿಂದ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ರವಿವಾರ ನಡೆಯಿತು.ಒಟ್ಟು 176 ಜೋಡಿ ಕೋಣಗಳು ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿದ್ದವು.
ವಿಶೇಷ ಏನೆಂದರೆ ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಎರಡು ತಿಂಗಳಾದರೂ ಅವರಿಲ್ಲದ ನೋವು ಇನ್ನೂ ಮಾಸಿಲ್ಲ. ರಾಜ್ಯಾದ್ಯಂತ ಅಭಿಮಾನಿಗಳು ವಿವಿಧ ರೀತಿಯಲ್ಲಿ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ. ಅಪ್ಪುವಿನ ನೆನಪನ್ನು ಮತ್ತಷ್ಟು ಜೀವಂತವಾಗೀಡೋದಕ್ಕೆ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ.ಮತ್ತೆ ಮಂಗಳೂರಿನ ಕಂಬಳದಲ್ಲೂ ಪುನೀತ್ ರಾಜ್‌ಕುಮಾರ್ ಹೆಸರು ಕೇಳಿಬಂದಿದೆ.
ಕಿರಣ್ ಕುಮಾರ್ ಮಂಜಿಲ ಮತ್ತು ಯಶೋಧರ ಮಹಾಬಲ ಪೂಜಾರಿ ಸಹೋದರರ ನೇತೃತ್ವದಲ್ಲಿ ಬೆಂಗಳೂರು ದೊಡ್ಮನೆ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದವರು ಪುನೀತ್ ಹೆಸರಿನಲ್ಲಿ ಓಟದ ಕೋಣಗಳನ್ನು ಓಡಿಸಿದ್ದು ಗಮನ ಸೆಳೆಯಿತು.ವಿವಿಧ ಕ್ಷೇತ್ರದ ಗಣ್ಯರು ಕಂಬಳದಲ್ಲಿ ಪಾಲ್ಗೊಂಡಿದ್ದು, ಸಾವಿರಾರು ಕಂಬಳಾಭಿಮಾನಿಗಳು ಭಾಗವಹಿಸಿದ್ದರು.ತೋಡಾರ್ ಪಂಚಶಕ್ತಿ ಪಾಂಡು, ಕರ್ನಿರೆ ಬೈಲು ಮನೆ ಚಂದು ಎಂಬ ಹೆಸರಿನ ಕೋಣಗಳು ನೇಗಿಲು ಹಿರಿಯ ವಿಭಾಗದಲ್ಲಿ ರೇಸ್‌ಗೆ ಇಳಿದಿದೆ. ಈ ಎರಡು ಕೋಣಗಳು ಕಂಬಳ ಓಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ಮೊದಲ ಕಂಬಳದಲ್ಲಿ ಬೆಂಗಳೂರು ದೊಡ್ಡಮನೆ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಈ ಬಾರಿ ಓಟಕ್ಕಿಳಿದಿದೆ.
ನೋಣೇಲು ಗುತ್ತು ರಶ್ಮಿತ್ ಶೆಟ್ಟಿ ನೇತೃತ್ವದಲ್ಲಿ ಹೊಕ್ಕಾಡಿಗೋಳಿ ವೀರ-ವಿಕ್ರಮ ಕಂಬಳ ನಡೆಯುತ್ತಿದ್ದು, ಕರಾವಳಿಯಲ್ಲಿ ಕಂಬಳ ಋತು ಆರಂಭವಾಗೋದು ಈ ಕಂಬಳದ ಮೂಲಕ ಅನ್ನೋದು ವಿಶೇಷವಾಗಿದೆ. ಮೊದಲ ಕಂಬಳಕ್ಕೆ ದಕ್ಷಿಣ ಕನ್ನಡ, ಉಡುಪಿ ಭಾಗಗಳಿಂದ ಇನ್ನೂರಕ್ಕೂ ಅಧಿಕ ಜೋಡಿಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತದೆ. ಎಲ್ಲಾ ಕೋಣಗಳ ಪೈಕಿ ಈ ಅಪ್ಪುವಿನ ಹೆಸರಿನ ಜೋಡಿ ಕಂಬಳ ಪ್ರೀಯರನ್ನು ಆಕರ್ಷಿಸಿದೆ.
ಕಂಬಳ ಪ್ರತಿಷ್ಠೆಯ ಕಣವಾಗಿದ್ದು,ಇಲ್ಲಿ ಹಲವು ಮನೆತನಗಳು ಹೆಸರಿಗಾಗಿ ಕೋಣಗಳನ್ನು ಓಡಿಸುತ್ತದೆ. ಯಾವ ಹೆಸರಿನ ಕೋಣಗಳು ಕಂಬಳದಲ್ಲಿ ವಿಜಯಶಾಲಿಗಳಾಗುತ್ತದೋ ಆ ವಿಜಯ ಮನೆತನಕ್ಕೆ ಮತ್ತು ಓಡಿದ ಕೋಣಗಳಿಗೆ ಸಂದುತ್ತದೆ. ಹೀಗಾಗಿ ಕಂಬಳ ಒಂದು ಪ್ರತಿಷ್ಠೆ ಯ ಕಣವಾಗಿದೆ.ಈ ಬಾರಿ ಮೊದಲ ಕಂಬಳ ನವೆಂಬರ್ 27 ಮತ್ತು 28ರಂದು ನಡೆಯ ಬೇಕಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಕಂಬಳ ಒಂದು ವಾರ ತಡವಾಗಿ ಆರಂಭವಾಗಿದೆ. ಡಿಸೆಂಬರ್ 5 ರಿಂದ ಮಾರ್ಚ್ 26ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಭಾಗದಲ್ಲಿ ಕಂಬಳ ಕೂಟ ನಡೆಯಲಿದೆ.ಓಮಿಕ್ರಾನ್ ಭೀತಿಯ ನಡುವೆಯೂ ಕರಾವಳಿಯಲ್ಲಿ ಕಂಬಳ ಕಲರವ ಆರಂಭವಾಗಿದೆ. ಕಂಬಳ ಯಾವುದೇ ಅಡೆತಡೆಯಿಲ್ಲದೇ ಸುಸಾಂಗವಾಗಿ ನಡೆಯಲಿ ಎನ್ನೋದು ಕಂಬಳ ಪ್ರಿಯರ ಅಭಿಪ್ರಾಯ.