Ashok Rai: ಕೋಳಿ ಅಂಕ ನಿಲ್ಲಬಾರದು: ಅರೆಸ್ಟ್ ಮಾಡೋದಾದ್ರೆ ಮೊದಲು ನನ್ನನ್ನೇ ಬಂಧಿಸಿ: ಅಶೋಕ್ ರೈ

Ashok Rai: ಸುಮಾರು 800 ವರ್ಷಗಳ ಇತಿಹಾಸವಿರುವ ಬಂಟ್ವಾಳ ತಾಲೂಕಿನ ವಿಟ್ಲದ ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಜಂಬು ಜಾತ್ರೋತ್ಸವದಲ್ಲಿ ಪ್ರತಿ ವರ್ಷ ನಡೆಯುವಂತೆ ಈ ಬಾರಿ ಊರಿನವರು ಕೋಳಿ ಅಂಕವನ್ನು ಆಯೋಜಿಸಿದ್ದರು.

ಕೋಳಿ ಅಂಕ ಆಯೋಜನೆ ಮಾಡಿದ ವಿಚಾರ ತಿಳಿದ ವಿಟ್ಲ ಠಾಣೆಯ ಸಬ್ ಇನ್ಸ್‌ಪೆಕ್ಟರ್, ಇಲ್ಲಿ ಕೋಳಿ ಅಂಕ ಮಾಡುವಂತಿಲ್ಲ. ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.ತನ್ನ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಿದ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅಶೋಕ್ ರೈ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮನ್ನು ನಾವು ದೂರುವುದಿಲ್ಲ. ಮೇಲಾಧಿಕಾರಿಗಳು ಹೇಳಿದಂತೆ ನೀವು ಮಾಡುತ್ತಿರಬಹುದು. ಆದರೆ ಇಲ್ಲಿ ಜಾತ್ರೆಯ ವೇಳೆ ನಡೆಯುವ ಕೋಳಿ ಅಂಕ ನಡೆದುಕೊಂಡೇ ಬಂದಿದೆ. ಇವರು ಯಾರೂ ಹಣಕಟ್ಟಿ ಜೂಜು ಮಾಡುತ್ತಿಲ್ಲ. ಕುದುರೆ, ಕ್ರಿಕೆಟ್ ಬೆಟ್ಟಿಂಗ್‌ನಂತೆ ಇಲ್ಲಿ ಯಾವುದು ನಡೆಯುವುದಿಲ್ಲ. ಈ ಕೋಳಿ ಅಂಕ ಆಯೋಜನೆಗೆ ಅನುಮತಿ ನೀಡಬೇಕು ಎಂದು ಹೇಳಿದರು.ಇದಕ್ಕೆ ಸಬ್ ಇನ್ಸ್‌ಪೆಕ್ಟರ್ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಅಡಿ ಕೋಳಿ ಅಂಕ ನಡೆಸುವುದು ಕಾನೂನು ಬಾಹಿರ ಎಂದಾಗ ಅಶೋಕ್ ರೈ, ನೋಡಿ ಇಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಕೋಳಿ ಅಂಕ ನಡೆಯುತ್ತಿದೆ ಎನ್ನುವುದನ್ನು ಮೇಲಾಧಿಕಾರಿಗಳಿಗೆ ತಿಳಿಸಿ. ಮೂರು ದಿನದ ಬದಲು ಒಂದು ದಿನ ಕೋಳಿ ಅಂಕ ನಡೆಯಲಿ. ಯಾರನ್ನೂ ಬಂಧನ ಮಾಡುವ ಅಗತ್ಯವಿಲ್ಲ. ಕೇಸ್ ಹಾಕುವುದಾದರೆ ಕೇಸ್ ಹಾಕಿ. ಬಂಧನ ಮಾಡುವುದಾದರೆ ನನ್ನನ್ನು ಬಂಧಿಸಿ ಎಂದು ಗರಂ ಆಗಿ ಪ್ರತಿಕ್ರಿಯಿಸಿದರು. ನಂತರ ತಾವೇ ಮುಂದೆ ನಿಂತು ಕೋಳಿ ಅಂಕ ಮಾಡಿಸಿದರು.
Comments are closed.