G Parameshwar: ಡ್ರಗ್ಸ್ ದಂಧೆಕೋರರೊಂದಿಗೆ ಪೊಲೀಸರು ಶಾಮೀಲಾದಲ್ಲಿ ಎಫ್ಐಆರ್ ದಾಖಲಿಸಿ ಸೇವೆಯಿಂದ ವಜಾ: ಜಿ. ಪರಮೇಶ್ವರ್
G Parameshwar: ರಾಜ್ಯದಲ್ಲಿ ಡ್ರಗ್ಸ್ ದಂಧೆ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಪ್ರಕರಣಗಳಲ್ಲಿ ಪೊಲೀಸರು ಶಾಮೀಲಾಗಿರುವುದು ಗೊತ್ತಾದ್ರೆ ಸೇವೆಯಿಂದ ವಜಾ ಮಾಡುವುದಾಗಿ ಗೃಹ ಸಚಿವರು ಎಚ್ಚರಿಕೆ ರವಾನಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಮಾದಕವಸ್ತು ಮಾರಾಟಕ್ಕೆ ಉತ್ತೇಜನ ನೀಡುವ ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಸೇವೆಯಿಂದಲೇ ವಜಾ ಮಾಡುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.ದಾವಣಗೆರೆ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಮಾದಕವಸ್ತು ಮಾರಾಟದ ಜಾಲ ಹೆಚ್ಚಾಗುತ್ತಿದೆ. ಡ್ರಗ್ಸ್ ಅಡ್ಡೆಗಳ ಮೇಲೆ ನಡೆಯುವ ದಾಳಿಗೂ ಮುನ್ನವೇ ಕೆಳ ಹಂತದ ಪೊಲೀಸ್ ಸಿಬ್ಬಂದಿಗಳೇ ಮಾಹಿತಿ ನೀಡಿ ದಿಕ್ಕು ತಪ್ಪಿಸುತ್ತಿದ್ದಾರೆ.
ಡ್ರಗ್ಸ್ ಎಂಬ ಕ್ಯಾನ್ಸರ್ ದಿನೇ ದಿನೆ ವ್ಯಾಪಿಸುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ಸದಸ್ಯರು ಪ್ರಶ್ನೋತ್ತರ ಅವಧಿಯಲ್ಲಿ ಕಳವಳ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ಸಚಿವರು, ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ಪಣ ತೊಡಲಾಗಿದ್ದು, ಈಗಾಗಲೇ ಪಿಡುಗಿನ ವಿರುದ್ಧ ಸಮರ ಸಾರಲಾಗಿದೆ. ಹಿಂದೆಂದಿಗಿಂತಲೂ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿ ಸಾವಿರಾರು ಕೆ.ಜಿ. ತರಹೇವಾರಿ ಡ್ರಗ್ಸ್ ಜಪ್ತಿ ಮಾಡಿ, ನಾಶಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.ನಿರಂತರವಾಗಿ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ಕುರಿತಂತೆ ಜಾಗೃತಿ ಮೂಡಿಸಲಾಗುತ್ತಿದೆ. ಡ್ರಗ್ಸ್ ದಂಧೆಕೋರರೊಂದಿಗೆ ಪೊಲೀಸ್ ಸಿಬ್ಬಂದಿ ಭಾಗಿಯಾಗುವುದು ಕಂಡುಬಂದರೆ ಅಂತಹವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಸೇವೆಯಿಂದಲೇ ವಜಾಗೊಳಿಸುವಂತೆ ತಿಳಿಸಲಾಗಿದೆ.
ರಾಜ್ಯದಲ್ಲಿ ವ್ಯಾಸಂಗ ಮಾಡುವ ವಿದೇಶಿ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲಾಗಿದೆ. ದಂಧೆಕೋರರಿಗೆ ಬಾಡಿಗೆ ಮನೆ ನೀಡುವ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಎಚ್ಚರಿಕೆ ರವಾನಿಸಿದರು.
Comments are closed.