ಧರ್ಮಸ್ಥಳ ಬುರುಡೆ ಪ್ರಕರಣ: ಎಸ್‌ಐಟಿ ವರದಿಯಲ್ಲಿ ಒಬ್ಬರಿಗೆ ಕ್ಲೀನ್‌ ಚಿಟ್‌?

Share the Article

ದಕ್ಷಿಣ ಕನ್ನಡ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿಯಲ್ಲಿ ಸಲ್ಲಿಸಿದೆ. ಈ ವರದಿಯು ಧರ್ಮಸ್ಥಳದ ಮಾನಹಾನಿಗೆ ಯತ್ನ ಮಾಡಿದ ಬುರುಡೆ ಗ್ಯಾಂಗ್‌ನ ಷಡ್ಯಂತ್ರವನ್ನು ಬಯಲು ಮಾಡಿದ್ದು, ಒಬ್ಬರಿಗೆ ಕ್ಲೀನ್‌ ಚಿಟ್‌ ನೀಡಲಾಗಿದೆ ಎಂದು ವರದಿಯಾಗಿದೆ.

ಧರ್ಮಸ್ಥಳದ ವ್ಯವಸ್ಥಾಪಕರಿಗೆ ಮತ್ತು ಮೇಲ್ವಿಚಾರಕರಿಗೆ ಕ್ಲೀನ್‌ಚಿಟ್‌ ನೀಡಿದ್ದು, ಧರ್ಮಸ್ಥಳದಲ್ಲಿ ಅಂತಹ ಯಾವುದೇ ಕೃತ್ಯಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ. ಆರು ಮಂದಿ ಆರೋಪಿಗಳು ನಡೆಸಿರುವ ಸಂಪೂರ್ಣ ಅಪರಾಧ ಒಳಸಂಚು ಎನ್ನುವುದು ದೃಢಪಟ್ಟಿದೆ ಎನ್ನಲಾಗಿದೆ.

ಆರೋಪಿಗಳಾದ ಚಿನ್ನಯ್ಯ, ಮಹೇಶ್‌ ತಿಮರೋಡಿ, ಗಿರೀಶ್‌ ಮಟ್ಟಣ್ಣನವರ್‌, ವಿಠ್ಠಲ ಗೌಡ, ಟಿ.ಜಯಂತ್‌ ಮತ್ತು ಸುಜಾತ ಭಟ್‌ ಅವರು ಅಪರಾಧ ಕೃತ್ಯದಲ್ಲಿ ಶಾಮೀಲಾಗಿದೆ ಎಂದು ಎಸ್‌ಐಟಿ ತನಿಖೆಯಲ್ಲಿ ದೃಢಪಟ್ಟಿರುವ ಕುರಿತು ಎಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿ ಮಾಡಿದೆ.

ಧರ್ಮಸ್ಥಳದ ಮೇಲ್ವಿಚಾರಕರ ಕುಮ್ಮಕ್ಕಿನ ಮೇರೆಗೆ ಹಾಗೂ ಅವರ ಕುಟುಂಬ ಸದಸ್ಯರು ನೂರಾರು ಮಹಿಳೆಯರನ್ನು, ಮಕ್ಕಳನ್ನು ಅತ್ಯಾಚಾರ, ದೌರ್ಜನ್ಯ ಹಾಗೂ ಇತರೆ ಕಾರಣಗಳಿಗೆ ಕೊಲೆ ಮಾಡಿ ನೇತ್ರಾವತಿ ನದಿ ದಂಡೆ ಸೇರಿ ವಿವಿಧ ಕಡೆ ಹೂಳಲಾಗಿದೆ ಎಂದು ಮೇಲ್ವಿಚಾರಕರ ವಿರುದ್ಧ ಆರೋಪ ಮಾಡಲಾಗಿತ್ತು. ಇದನ್ನು ಎಸ್‌ಐಟಿ ತನಿಖೆ ಮಾಡಿದ್ದು, ಶವ ಹೂತಿದ್ದೇನೆ ಎಂದು ತೋರಿಸಿದ ವ್ಯಕ್ತಿಯ ಪ್ರಕಾರ ಕಳೇಬರ ಸಿಕ್ಕಿಲ್ಲ. ನಂತರ ಇದು ಸುಳ್ಳು ಎನ್ನುವ ಮಾಹಿತಿ ಬಯಲಾಗಿದೆ. ಸುಳ್ಳು ಆರೋಪ ಮತ್ತು ಸುಳ್ಳು ಸಾಕ್ಷಿಗಳನ್ನು ಹುಟ್ಟುಹಾಕಿದವರೇ ಇದೀಗ ಆರೋಪಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ಧರ್ಮಸ್ಥಳದ ಮೇಲ್ವಿಚಾರಕರಿಗೆ ಕ್ಲೀನ್‌ ಚಿಟ್‌ ನೀಡಲಾಗಿದೆ ಎಂದು ವರದಿಯಾಗಿದೆ.

Comments are closed.