ಕೋಮು ದ್ವೇಷದ ಭಾಷಣ ಆರೋಪ: ಡಾ.ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನು ತೀರ್ಪು ಡಿ.9 ಕ್ಕೆ

ಪುತ್ತೂರು: ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಪ್ರಚೋದನೆ ಮತ್ತು ಅವಮಾನಕಾರಿ ಭಾಷಣ ಮಾಡಿರುವ ಆರೋಪ ಎದುರಿಸುತ್ತಿರುವ ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಮುಕ್ತಾಯಗೊಂಡಿದೆ. ಡಿ.9 ಕ್ಕೆ ತೀರ್ಪನ್ನು ನ್ಯಾಯಾಲಯವು ಕಾಯ್ದಿರಿಸಿದೆ.

ಅ.20 ರಂದು ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಡಾ.ಪ್ರಭಾಕರ ಭಟ್ ಮಾಡಿದ ಭಾಷಣ ಅಪಾಯಕಾರಿಯಾಗಿದ್ದು, ಹಿಂದೂ ಮುಸ್ಲಿಂ ಸಮುದಾಯಗಳ ಕುರಿತು ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದಾರೆ, ಪ್ರಚೋದನೆ ಮಾಡಿದ್ದಾರೆ ಎಂದು ಪುತ್ತೂರು ತಾಲೂಕಿನ ಈಶ್ವರಿ ಪದ್ಮುಂಜ ಎಂಬುವವರು ಪುತ್ತೂರು ಗ್ರಾಮಾಂತರ ಠಾಣೆಗೆ ದೂರನ್ನು ನೀಡಿದ್ದರು. ಈ ಭಾಷಣವು ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಿರುವುದನ್ನು ದೂರಿನಲ್ಲಿ ಉಲ್ಲೇಖ ಮಾಡಲಾಗಿತ್ತು.
ದೂರಿನ ಅನ್ವಯ ಪ್ರಭಾಕರ ಭಟ್ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಡಾ.ಭಟ್ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಜಾಮೀನು ಅರ್ಜಿ ಸಲ್ಲಿಕೆ ಮಾಡಿದ ಒಂದು ವಾರದ ಬಳಿಕ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಪುತ್ತೂರು ಗ್ರಾಮಾಂತರ ಠಾಣೆಗೆ ತೆರಳಿ ಪೊಲೀಸ್ ವಿಚಾರಣೆಗೆ ಹೋಗಿದ್ದರು.
ನಿರೀಕ್ಷಣಾ ಜಾಮೀನು ನೀಡುವುದಕ್ಕೆ ಸರಕಾರಿ ಅಭಿಯೋಜಕಿ ಜಯಂತಿ ಕೆ.ಭಟ್ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಡಿ. 6 ರಂದು ದೂರುದಾರರ ಪರ ವಕೀಲರಾದ ಪಿ.ಕೆ.ಸತೀಶನ್ ಅವರು ವಾದ ಮಂಡಿಸಿದ್ದರು. ಡಾ.ಪ್ರಭಾಕರ ಭಟ್ ಪರ ವಕೀಲ ಮಹೇಶ್ ಕಜೆ ಅವರು ಡಿ.5 ರಂದು ವಾದ ಮಂಡನೆ ಮಾಡಿದ್ದಾರೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿ ವಿಚಾರಣೆಯನ್ನು ಡಿ.9ಕ್ಕೆ ಮುಂದೂಡಿದೆ.
Comments are closed.