Sanchar Sathi: ‘ಸಂಚಾರ್ ಸಾಥಿ’ ಆಯಪ್ ಮುಖಾಂತರ 20 ಲಕ್ಷಕ್ಕೂ ಹೆಚ್ಚು ಕದ್ದ ಮೊಬೈಲ್ ಗಳ ಪತ್ತೆ!!

Share the Article

Sanchar Sathi: ಸೈಬರ್‌ ಸುರಕ್ಷತೆ ದೃಷ್ಟಿಯಿಂದ ಸ್ಮಾರ್ಟ್‌ ಫೋನ್‌ಗಳಲ್ಲಿ ಸಂಚಾರ್‌ ಸಾಥಿ ಆಯಪ್‌ ಅನ್ನು ಕಡ್ಡಾಯವಾಗಿ ಮೊಬೈಲ್‌ ಉತ್ಪಾದಕರು ಇನ್ನು 3 ತಿಂಗಳಲ್ಲಿ ಅಳವಡಿಸಬೇಕು ಎಂಬ ಕೇಂದ್ರ ಸರ್ಕಾರದ ಆದೇಶ ವಿವಾದಕ್ಕೆ ಗುರಿಯಾಗಿದ್ದು ಈ ಕುರಿತಾಗಿ ಪ್ರತಿ ಪಕ್ಷಗಳು ಸಂಸತ್ತಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದವು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ‘ಸಂಚಾರ ಸಾಥಿ’ ಆಪ್ ಡೌನ್ಲೋಡ್ ಮಾಡಿಕೊಳ್ಳುವುದು ಕಡ್ಡಾಯವಲ್ಲ ಎಂದು ಮತ್ತೆ ಸೂಚನೆಯನ್ನು ನೀಡಿತು.

ಈ ‘ಸಂಚಾರ್ ಸಾಥಿ’ ಆಪ್ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡಿದ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈ ‘ಸಂಚಾರ್ ಸಾಥಿ’ ಆಪ್ ಅನ್ನು ಇದುವರೆಗೂ 1.5 ಕೋಟಿಗು ಹೆಚ್ಚು ಮೊಬೈಲ್ ಗಳಲ್ಲಿ ಡೌನ್ಲೋಡ್ ಮಾಡಲಾಗಿದೆ. ಇದರ ಆಧಾರದ ಮೇಲೆ 20 ಲಕ್ಷಕ್ಕೂ ಹೆಚ್ಚು ಕದ್ದ ಮೊಬೈಲ್ ಗಳನ್ನು ಪತ್ತೆಹಚ್ಚಲಾಗಿದೆ. ಈ ಪೈಕಿ 7.5 ಲಕ್ಷ ಮೊಬೈಲ್ ಗಳನ್ನು ಬಳಕೆದಾರರಿಗೆ ಹಿಂದಿರುಗಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನೂ ಪ್ರತಿಪಕ್ಷಗಳು ಸಂಚಾರ ಸಾಥಿ ಆಪ್ ಡೌನ್ಲೋಡ್ ಕಡ್ಡಾಯವಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಂತೆ ತಾನು ನೀಡಿದ ಆದೇಶವನ್ನು ವಾಪಸ್ ಪಡೆಯಿತು. ಈ ವಿವಾದದ ನಡುವೆಯೇ ‘ಸಂಚಾರ ಸಾಥಿ’ ಆಪ್ ಡೌನ್ಲೋಡ್ ಮಾಡುವುದರಲ್ಲಿ ಹತ್ತು ಪಟ್ಟು ಏರಿಕೆಯಾಗಿದೆ ಎಂಬುದು ತಿಳಿದು ಬಂದಿದೆ. ‘ಸಂಚಾರ ಸಾಥಿ’ ಆಯಪ್‌ ವಿಚಾರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ಈ ಆಪ್ ಗೆ ಸಾರ್ವಜನಿಕರಿಂದ ಇದ್ದಕ್ಕಿದ್ದಂತೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದ ದೈನಂದಿನ ಸರಾಸರಿ ಪ್ರಮಾಣ 60 ಸಾವಿರದಿಂದ 6 ಲಕ್ಷಕ್ಕೆ ಏರಿಕೆಯಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ದೂರಸಂಪರ್ಕ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಏನಿದು ಸಂಚಾರ್‌ ಸಾಥಿ ಆ್ಯಪ್‌?
ಸಂಚಾರ್‌ ಸಾಥಿ ಪೋರ್ಟಲ್ ಅನ್ನು ಮೇ 2023 ರಲ್ಲಿ ತೆರೆಯಲಾಗಿದ್ದು ಅದರ ಮುಂದುವರಿದ ಭಾಗವಾಗಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಜನವರಿಯಲ್ಲಿ ದೂರಸಂಪರ್ಕ ಇಲಾಖೆಯು ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ ಈ ಆ್ಯಪ್ ಅನ್ನು ಬಿಡುಗಡೆ ಮಾಡಿತ್ತು. ಈ ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡಿದ ಬಳಿಕ ಮೊಬೈಲ್‌ ಕಳ್ಳತನವಾದರೆ ಅಥವಾ ಕಳೆದುಹೋದರೆ ಬ್ಲಾಕ್‌ ಮಾಡಬಹುದು. ಅಷ್ಟೇ ಅಲ್ಲದೇ ಈ ಫೋನ್‌ ದೇಶದ ಬೇರೆ ಕಡೆ ಬಳಕೆಯಾಗುತ್ತಿದ್ದರೂ ಕಾನೂನು ಸಂಸ್ಥೆಗಳಿಗೆ ಎಲ್ಲಿ ಈ ಫೋನ್‌ ಸಕ್ರಿಯವಾಗಿದೆ ಎಂಬ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ.ಸೈಬರ್ ಅಪರಾಧ, ನಕಲಿ ಐಇಎಂಐ ಸಂಖ್ಯೆ ಬಳಸಿ ನಡೆಸುವ ಕೃತ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಈ ಆ್ಯಪ್ ಇನ್‌ಸ್ಟಾಲ್‌ ಮಾಡಲು ಕಡ್ಡಾಯ ಮಾಡಿ, ಬಳಿಕ ಇದು ಕಡ್ಡಾಯಬಲ್ಲವೆಂದು ಹೇಳಿದೆ.

Comments are closed.