Motivational Story: ಒಂದೇ ಒಂದು ಕೈ-ಕಾಲು ಕೂಡಾ ಇಲ್ಲ, ಆತನ ಬದುಕಿನ ಉನ್ಮಾದ ನೋಡಿದ್ರೆ!

Share the Article

ಬರಹ: ಸುದರ್ಶನ್ ಬಿ. ಪ್ರವೀಣ್

Motivational Story: ಈತ ಅದೆಷ್ಟು ದುರದೃಷ್ಟ ಅಂದ್ರೆ ಅದನ್ನು ಪದಗಳಲ್ಲಿ ಹೇಳಿ ಮುಗಿಸಲು ಆಗುವುದಿಲ್ಲ. ಯಾರಿಗಾದರೂ ಒಂದು ಕಾಲು ಅಥವಾ ಕೈ ಇಲ್ಲದೆ ಹೋದಾಗ ಅಥವಾ ಪೋಲಿಯೋ ಬಾಧಿಸಿ ಕೈ ಕಾಲು ಸ್ವಾಧೀನ ಕಳೆದುಕೊಂಡಾಗ ನಾವು ಅಂತವರನ್ನು ನೋಡಿ ಮರುಗುತ್ತೇವೆ. ಆದರೆ ಈತನಿಗೆ ಹೇಳಿಕೊಳ್ಳಲು ಒಂದೇ ಒಂದು ಕಾಲಾಗಲಿ ಕೈಯಾಗಲೀ ಇಲ್ಲ! ಕೇವಲ, ಬುಡ ಕಡಿದು ಹಾಕಿದ ಮರದ ತುಂಡಿನಂತೆ ಕಾಣುವ ವ್ಯಕ್ತಿ ಇವತ್ತಿನ ನಮ್ಮ ಸ್ಪೂರ್ತಿಯ ಅತಿಥಿ!

ಈತ ನಿಕ್‌ ವುಜಿಸಿಕ್‌‍. ಇವತ್ತು ಈತ ತನ್ನ ಸ್ಪೂರ್ತಿದಾಯಕ ಭಾಷಣಗಳಿಗೆ ಹೆಸರುವಾಸಿ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ 1982ರಲ್ಲಿ, ತನ್ನ ದೇಹದಲ್ಲಿ ಕೈಕಾಲುಗಳಿಲ್ಲದೆ ಆತ ಜನಿಸುತ್ತಾನೆ. ತನ್ನ ಅಂಗವೈಕಲ್ಯವು ತನ್ನ ದೈನಂದಿನ ಜೀವನವನ್ನು ಅಡ್ಡಿಪಡಿಸಲು ಬಿಡುವ ಬದಲು, ಆತ ಅದನ್ನೊಂದು ಸವಾಲಾಗಿ ಸ್ವೀಕರಿಸಿ, ಲಕ್ಷಾಂತರ ಜನರ ಜೀವನವನ್ನು ಬದಲಾಯಿಸಲು ಬಳಸಿಕೊಳ್ಳುತ್ತಾನೆ. ಅದೇ ನಂಬಿಕೆಯೊಂದಿಗೆ ಇವತ್ತಿಗೂ ಆತ ಸ್ಪೂರ್ತಿಯ ಸೆಲೆಯಾಗಿ ಬದುಕುತ್ತಿದ್ದಾನೆ.

ಈತ ಹುಟ್ಟಿದಾಗ ಕೈಯಿ ಕಾಲು ಏನೂ ಇಲ್ಲದ ಈತನನ್ನು ಕಂಡ ಅಪ್ಪ ಅಮ್ಮ ಆಸ್ಪತ್ರೆಯಿಂದ ಓಡಿ ಹೋಗಿದ್ದರು. ಅಂಥಹಾ ದುರದೃಷ್ಟದಲ್ಲಿ ದುರದೃಷ್ಟ ವ್ಯಕ್ತಿ ಈತನಾಗಿದ್ದ!
ತಾನು ಹತ್ತು ವರ್ಷದ ಮಗುವಾಗಿದ್ದಾಗ, `ಅಯ್ಯೋ, ನಾನ್ಯಾಕೆ ಯಾವಾಗಲೂ ಇತರರಿಗಿಂತ ಭಿನ್ನನಾಗಿದ್ದೇನೆ’ ಎಂದು ಆಶ್ಚರ್ಯಪಡುತ್ತಿದ್ದೆ. ಮುಂದಕ್ಕೆ `ಅಯ್ಯೋ, ನನಗೆ ಕೈಯೇ ಇಲ್ವಲ್ಲ, ನನ್ನ ಕಾಲು ಎಲ್ಲಿ ಹೋಯ್ತು? ನಾನು ಹೇಗೆ ನಡೀಲಿ. ನಾನ್‌ ಹೇಗೆ ಬರೀಲಿ, ನಾನ್ಯಾಕೆ ಹೀಗಿದ್ದೇನೆ?” ಎಂದು ಆತ ಮರುಗಿ ಕೇಳಿದ್ದ. ಒಂದು ಹಂತದಲ್ಲಿ ಆತ ಸಾಯಲು ಕೂಡಾ ನಿರ್ಧರಿಸಿದ್ದ. ಈ ರೀತಿ ಇದ್ದು ಬದುಕುವುದಕ್ಕಿಂತ ಸಾಯೋದೇ ಮೇಲು ಎಂದು ನಿರ್ಧರಿಸಿದ. ತನ್ನ ಜೀವನದಲ್ಲಿ ಬದುಕುವುದಕ್ಕೆ ಯಾವುದೇ ಉದ್ದೇಶವನ್ನು ಕಾಣದ ಆತ ನೀರಲ್ಲಿ ಮುಳುಗಿ ಸತ್ತು ಹೋಗಲು ನಿರ್ಧರಿಸಿದ.

ಆಗ ಅವನು, ತನ್ನ ಪ್ರೀತಿಯ ಹೆತ್ತವರ ಬಗ್ಗೆ ಮತ್ತು ತಾನು ಸತ್ತಿರುವುದನ್ನು ನೋಡುವುದು ಅವರಿಗೆ ಎಷ್ಟು ನೋವುಂಟು ಮಾಡುತ್ತದೆ ಎಂದು ಯೋಚಿಸುತ್ತಾ ಕೊನೆಯ ಕ್ಷಣದಲ್ಲಿ ಸಾವಿನಿಂದ ದೂರವಾದ. ಅಂದಿನಿಂದ, ಈ ಯುವಕನಿಗೆ ಹಿಂತಿರುಗಿ ನೋಡುವ ಅವಕಾಶವಿರಲಿಲ್ಲ. ಬದುಕಲೇ ಬೇಕೆಂದು ನಿರ್ಧರಿಸಿ ಹಟ ತೊಟ್ಟ. ಇವತ್ತಿಗೆ ಆತ ಜಗತ್ತಿನ ಬಹು ದೊಡ್ಡ ಸ್ಪೂರ್ತಿದಾಯಕ ಮಾತುಗಾರ ಮತ್ತು ಸಾಧಕ.

ಬಾಲ್ಯ ಮತ್ತು ಆರಂಭಿಕ ಜೀವನ
ದುಷ್ಕಾ ಮತ್ತು ಬೋರಿಸ್‌ ಅವರ ಹಿರಿಯ ಮಗ ನಿಕೋಲಸ್‌ ಜೇಮ್ಸೌ ವುಜಿಸಿಕ್‌ ಡಿಸೆಂಬರ್‌ 4, 1982ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಜನಿಸಿದ. ಶಿಶು, ಇತರ ಎಲ್ಲಾ ಅಂಶಗಳಲ್ಲಿ ಆರೋಗ್ಯವಾಗಿದ್ದರೂ, ಆಟೋಸೋಮಲ್‌ ರಿಸೆಸಿವ್‌ ಟೆಟ್ರಾ-ಅಮೆಲಿಯಾದೊಂದಿಗೆ ಜನಿಸಿದ ಕಾರಣ ಆತನಿಗೆ ಕೈಕಾಲುಗಳೇ ಇರಲಿಲ್ಲ. ಇದು ಅಪರೂಪದ ಸ್ಥಿತಿಯಾಗಿದ್ದು, ಮಗುವಿಗೆ ಕೇವಲ ಎರಡು ಕಾಲ್ಬೆರಳುಗಳನ್ನು ಹೊಂದಿರುವ ಪಾದಗಳನ್ನು ಹೊರತುಪಡಿಸಿ ಯಾವುದೇ ಕೈಕಾಲುಗಳಿಲ್ಲ.

ಆರಂಭದಲ್ಲಿ, ಕೈ ಮತ್ತು ಕಾಲುಗಳ ಇಲ್ಲದೆ, ಬರುವ ತೊಂದರೆಗಳನ್ನು ನಿಭಾಯಿಸುವುದು ಮಗುವಿಗೆ ಮತ್ತು ಅವನ ಕುಟುಂಬಕ್ಕೆ ತುಂಬಾ ಕಷ್ಟಕರವಾಗಿತ್ತು. ಅವನ ಐಕ್ಯೂನಲ್ಲಿ ಯಾವುದೇ ದೋಷವಿಲ್ಲದದ್ದಿರೂ, ಅವನಿಗೆ ಸಾಮಾನ್ಯ ಶಾಲೆಯಲ್ಲಿ ಅಧ್ಯಯನ ಮಾಡಲು ಸಹ ಅವಕಾಶವಿರಲಿಲ್ಲ. ಆದರೆ ಅವನಲ್ಲಿ ಛಲ ಒಂದು ಇತ್ತಲ್ಲ? ಅದುವೇ ಆತನನ್ನು ಮುಂದಕ್ಕೆ ತಳ್ಳಿತ್ತು.
ಆತ ಕ್ರಮೇಣ ತನ್ನ ಅಳಿದುಳಿದ ಬೆರಳುಗಳಂತಹಾ ಪಾದಗಳನ್ನು ಬಳಸಿ ಬರೆಯಲು, ಟೈಪ್‌ ಮಾಡಲು, ಆಟವಾಡಲು ಮತ್ತು ಕೊನೆಗೆ ಕ್ಷೌರ ಮಾಡಲು ಕೂಡಾ ಕಲಿತುಕೊಂಡ. ನೀರಿಗೆ ಬಿದ್ದರೆ ಮೀನಿನಂತೆ ವೇಗವಾಗಿ ಈಜುವುದನ್ನು ಕಲಿತ. ಇವತ್ತಿಗೆ ಆತ ನಿಮಿಷಕ್ಕೆ 43 ಪದ ಟೈಪ್‌ ಕೂಡಾ ಮಾಡಬಲ್ಲ ನಿಷ್ಣಾತನಾಗಿದ್ದಾನೆ!

ಆಸ್ಟ್ರೇಲಿಯಾದ ಕ್ವೀನ್ಸ್‌ ಲ್ಯಾಂಡ್‌ನ `ರನ್‌ಕಾರ್ನ್‌ ಸ್ಟೇಟ್‌ ಹೈಸ್ಕೂಲ್‌‍’ನಿಂದ ತನ್ನ ಮಾಧ್ಯಮಿಕ ಶಿಕ್ಷಣವನ್ನು ಪಡೆದ ಈ ವಿಕಲ ಹುಡುಗ ಅಲ್ಲಿ ಶಾಲೆಯ ಲೀಡರ್‌ ಕೂಡಾ ಆಗಿದ್ದ. ಮುಂದೆ ಆತ ಕ್ವೀನ್ಸ್‌ ಲ್ಯಾಂಡ್‌ನ `ಗ್ರಿಫಿತ್‌ ವಿಶ್ವವಿದ್ಯಾಲಯ’ದಿಂದ ಹಣಕಾಸು ಯೋಜನೆ ಮತ್ತು ಲೆಕ್ಕಪತ್ರದಲ್ಲಿ ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ.

ವೃತ್ತಿಯಲ್ಲಿ ಸಕ್ಸಸ್‌
ಈತ ಈಗ `ಲೈಫ್‌ ವಿಥೌಟ್‌ ಲಿಂಬ್ಸ್‌‍’ ಎಂಬ ತನ್ನದೇ ಆದ ಸಂಸ್ಥೆಯನ್ನು ಸ್ಥಾಪಿಸಿದ್ದಾನೆ. ಆತ `ಲೈಫ್ಸ್‌ ಗ್ರೇಟರ್‌ ಪರ್ಪಸ್‌‍’ ಮತ್ತು `ಬಯಾಗ್ರಫಿ ಆಫ್‌ ಎ ಡಿಟರ್ಮೈನ್‌ ಮ್ಯಾನ್‌ ಆಫ್‌ ಫೇತ್‌’ ನಂತಹ ಪ್ರೇರಕ ಚಲನಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಅವರು `ಲೈಫ್‌ ವಿಥೌಟ್‌ ಲಿಮಿಟ್ಸ್‌‍: ಇನ್ಸ್ಪಿರೇಷನ್‌ ಫಾರ್‌ ಎ ರಿಡಿಕ್ಯುಲಸ್ಲಿ ಗುಡ್‌ ಲೈಫ್‌‍’ ಎಂಬ ಪುಸ್ತಕವನ್ನೂ ಬರೆದಿದ್ದಾನೆ. ಈ ಭಾಷಣಕಾರ `ದಿ ಬಟರ್‌ಫ್ಲೈ ಸರ್ಕಸ್‌‍’ ಎಂಬ ಕಿರುಚಿತ್ರದಲ್ಲಿ ಕೂಡಾ ನಟಿಸಿದ್ದಾರೆ, ಈ ಚಿತ್ರಕ್ಕೆ ಮೂರು ಪ್ರಶಸ್ತಿಗಳು ಲಭಿಸಿವೆ ಮತ್ತು ಸ್ವತಃ ಒಂದು ಪ್ರಶಸ್ತಿಯನ್ನು ಈತ ಪಡೆದುಕೊಂಡಿದ್ದಾನೆ. ತನ್ನಂತೆಯೇ ಇರುವ ಮನುಷ್ಯನನ್ನು (ಅಂದರೆ ಅಂಗವಿಕಲರನ್ನು, ಅಸಹಾಯಕ ಅಂದುಕೊಂಡವರನ್ನು) ತನ್ನನ್ನು ತಾನು ಪ್ರೇರೇಪಿಸಲು ಎರಡನೇ ಅವಕಾಶ ಕಲ್ಪಿಸುವುದು ಆತನ ಗುರಿ. ಅಲ್ಲದೆ ಆತ ಪ್ರಪಂಚದಾದ್ಯಂತ ಎಲ್ಲರಿಗೂ ಈ ಸಂದೇಶವನ್ನು ಹರಡಲು ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ.

ವೃತ್ತಿ ಜೀವನ
ನಿಕ್‌ ಎಂದು ಕರೆಯಲ್ಪಡುವ ಹದಿನೇಳು ವರ್ಷ ವಯಸ್ಸಿನವನಾಗಿದ್ದಾಗ, ಅವರು ತಮ್ಮ ಚರ್ಚ್‌ ಗುಂಪಿನಲ್ಲಿ ಭಾಷಣಗಳನ್ನು ನೀಡಲು ಪ್ರಾರಂಭಿಸಿದ್ದ. ಅಲ್ಲಿಂದ ಇವತ್ತಿನ ತನಕ ಸ್ಪೂರ್ತಿ ನೀಡುವ ಭಾಷಣಕಾರರಾಗಿ ಹೆಸರುವಾಸಿಯಾಗಿದ್ದಾರೆ.
ತಮ್ಮ ವೃತ್ತಿಜೀವನದಲ್ಲಿ, ನಿಕ್‌ ಪ್ರಪಂಚದಾದ್ಯಂತ 60ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣಿಸಿದ್ದಾರೆ. ಮತ್ತು ಲಕ್ಷಾಂತರ ಜನರ ಜೀವನವನ್ನು ಮುಟ್ಟಿ ತಟ್ಟಿ ಎಬ್ಬಿಸಿದ್ದಾನೆ. 2005ರಲ್ಲಿ, ಅವರು `ಲೈಫ್‌ ವಿಥೌಟ್‌ ಲಿಂಬ್ಸ್‌’ ಎಂಬ NGO ಅನ್ನು ಸ್ಥಾಪಿಸಿದರು.

ಪ್ರಶಸ್ತಿಗಳು ಮತ್ತು ಸಾಧನೆಗಳು
1990ರಲ್ಲಿ, ವುಜಿಸಿಕ್‌ ಅವರ ದೃಢನಿಶ್ಚಯ ಮತ್ತು ಧೈರ್ಯವು ಜಗತ್ತನ್ನು ಮೆಚ್ಚಿಸಿತು, ಮತ್ತು ಅವರಿಗೆ `ಆಸ್ಟ್ರೇಲಿಯನ್‌ ಯಂಗ್‌ ಸಿಟಿಜನ್‌ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
2005 ರಲ್ಲಿ `ಯಂಗ್‌ ಆಸ್ಟ್ರೇಲಿಯನ್‌ ಆಫ್‌ ದಿ ಇಯರ್‌ ಪ್ರಶಸ್ತಿ’ಗೆ ಈತ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.
2010 ರಲ್ಲಿ, `ದಿ ಬಟರ್‌ಫ್ಲೈ ಸರ್ಕಸ್‌‍’ ಚಿತ್ರದ ವಿಲ್‌ ಪಾತ್ರದಲ್ಲಿ ಅವರ ಅಭಿನಯಕ್ಕಾಗಿ ಅವರು `ಮೆಥಡ್‌ ಫೆಸ್ಟ್ ಇಂಡಿಪೆಂಡೆಂಟ್‌ ಫಿಲ್ಮ್ ಫೆಸ್ಟಿವಲ್‌’ನಲ್ಲಿ `ಅತ್ಯುತ್ತಮ ಕಿರುಚಿತ್ರ ನಟ’ ಪ್ರಶಸ್ತಿಯನ್ನು ಗೆದ್ದರು.

ಒಂದು ಕಾಲದಲ್ಲಿ ಮದುವೆಯಾಗುವುದೇ ನನ್ನ ಜೀವನದ ಉದ್ದೇಶ ಎಂದದ್ದಿ ನಿಕ್‌!
ಹೌದು, ಎಲ್ಲರಂತೆ ಒಂದು ಸಂಗಾತಿಯನ್ನು ಹುಡುಕಿ ಮದುವೆಯಾಗುವುದೇ ನನ್ನ ಜೀವನದ ಪರಮ ಉದ್ದೇಶ ಅಂದುಕೊಂಡಿದ್ದ. ಕಾರಣ, ಕೈ ಕಾಲು ಏನೂ ಇಲ್ಲದ ತನ್ನನ್ನು ಯಾರೂ ಮದುವೆಯಾಗಲಿಕ್ಕಿಲ್ಲ, ಒಂದು ವೇಳೆ ನಾನು ಮದುವೆಯಾಗಲು ಸಾಧ್ಯವಾದರೆ ಅದೇ ನನ್ನ ಜೀವನದ ಒಂದು ದೊಡ್ಡ ಸಾಧನೆ ಅಂದುಕೊಂಡಿದ್ದನಾತ. ಆತನ ಇಚ್ಛೆಯಂತೆ ಆತನಿಗೆ ಒಂದು ಪ್ರೀತಿಯ ಹುಡುಗಿ ಸಿಕ್ಕಿದ್ದಾಳೆ. 2012 ರಲ್ಲಿ, ವುಜಿಸಿಕ್‌ ತಮ್ಮ ಜೀವನದ ಪ್ರೀತಿ ಕನ್ಯೆ ಮಿಯಹರಾರನ್ನು ವಿವಾಹವಾಗಿದ್ದು, ಇದೀಗ ಈ ಮುದ್ದು ದಂಪತಿಗೆ ಇಬ್ಬರು ಗಂಡು ಮಕ್ಕಳು, ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಂಗ ವಿಕಲನಾಗಿದ್ದರೂ ಸಾರ್ಥಕ ಸಾಧನೆಯ ಬಾಳನ್ನು ಬದುಕಿ ಇತರರಿಗೆ ಸ್ಫೂರ್ತಿಯಾಗಿ ನಿಂತವನು ಈ ನಿಕ್ ವುಜಿಸಿಕ್‌!

Comments are closed.