Medicine: 112 ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್: CDSCO

Share the Article

Medicine: ನೀವು ಬಳಸುವ ಮಾತ್ರೆಗಳು ನಿಜವಾಗಿಯೂ ಸುರಕ್ಷಿತವೇ? ಹಾಗಿದ್ದರೆ ಈ ಸುದ್ದಿ ನಿಮಗೊಂದು ಎಚ್ಚರಿಕೆ.

ಹೌದು, ಭಾರತದ ಔಷಧಗಳ ಗುಣಮಟ್ಟವನ್ನು ನಿಯಂತ್ರಿಸುವ ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಬಿಡುಗಡೆ ಮಾಡಿರುವ ವರದಿಯು ದೇಶಾದ್ಯಂತ ಆತಂಕ ಮೂಡಿಸಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲೇ ನಡೆಸಿದ ಪರೀಕ್ಷೆಯಲ್ಲಿ ಬರೋಬ್ಬರಿ 112 ಬಗೆಯ ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ (Not of Standard Quality – NSQ) ಎಂದು ವರದಿ ಘೋಷಿಸಿದೆ.

ಆತಂಕಕಾರಿ ವಿಷಯವೆಂದರೆ, ಈ ಕಳಪೆ ಔಷಧಿಗಳ ಪಟ್ಟಿಯಲ್ಲಿ ಕರ್ನಾಟಕದ ಪ್ರಮುಖ ಔಷಧಿ ತಯಾರಿಕಾ ಕಂಪನಿಯೊಂದರ ಮಧುಮೇಹಕ್ಕೆ ಬಳಸುವ ‘ಗ್ಲೈಮ್‌ಪ್ರೈಡ್’ ಮಾತ್ರೆಯೂ ಸೇರಿದೆ. ಇದರ ನಿರ್ದಿಷ್ಟ ಬ್ಯಾಚ್‌ನ ಮಾದರಿಯು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ ಎಂದು ವರದಿ ತಿಳಿಸಿದೆ.

ದೇಶಾದ್ಯಂತ ನಡೆಸಿದ ಪರೀಕ್ಷೆಯಲ್ಲಿ ಒಟ್ಟು 112 ಔಷಧಿ ಮಾದರಿಗಳು ಕಳಪೆ ಎಂದು ಸಾಬೀತಾಗಿದ್ದು, ಇವುಗಳಲ್ಲಿ 52 ಔಷಧಿಗಳು ಕೇಂದ್ರ ಸರ್ಕಾರದ ಲ್ಯಾಬ್‌ಗಳಲ್ಲಿ ಮತ್ತು ಉಳಿದ 60 ಔಷಧಿಗಳು ರಾಜ್ಯಮಟ್ಟದ ಲ್ಯಾಬ್‌ಗಳಲ್ಲಿ ನಡೆದ ಪರೀಕ್ಷೆಯಲ್ಲಿ ಫೇಲ್ ಆಗಿವೆ.

ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿರುವ ಈ ಔಷಧಿಗಳ ನಿರ್ದಿಷ್ಟ ಬ್ಯಾಚ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಸೂಚಿಸಲಾಗಿದೆ. ಪಟ್ಟಿಯಲ್ಲಿರುವ ಕೆಲವು ಜನಪ್ರಿಯ ಔಷಧಿಗಳೆಂದರೆ:

* ಪ್ಯಾಂಟೊಪ್ರಜೋಲ್ (Pantoprazole):** ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಬಳಸುವ ಸಾಮಾನ್ಯ ಮಾತ್ರೆ.

* ಅಮೊಕ್ಸಿಲಿನ್ ಮತ್ತು ಪೊಟ್ಯಾಸಿಯಮ್ ಕ್ಲಾವುಲನೇಟ್ (Amoxicillin and Potassium Clavulanate): ಬ್ಯಾಕ್ಟೀರಿಯಾ ಸೋಂಕಿಗೆ ಬಳಸುವ ಪ್ರಮುಖ ಆಯಂಟಿಬಯೋಟಿಕ್.

* ಡಿಕ್ಲೋಫೆನಾಕ್ ಸೋಡಿಯಂ ಮತ್ತು ಪ್ಯಾರಾಸೆಟಮಾಲ್ (Diclofenac and Paracetamol): ನೋವು ಮತ್ತು ಜ್ವರ ನಿವಾರಕ.

* ಅಲ್ಬೆಂಡಜೋಲ್ (Albendazole): ಹೊಟ್ಟೆಯ ಹುಳುವಿನ ನಿವಾರಣೆಗೆ ಬಳಸುವ ಮಾತ್ರೆ.

* ಫೋಲಿಕ್ ಆಸಿಡ್ (Folic Acid): ಗರ್ಭಿಣಿಯರು ಮತ್ತು ರಕ್ತಹೀನತೆ ಇರುವವರಿಗೆ ನೀಡುವ ವಿಟಮಿನ್.

* ಟ್ಯಾಮೋಕ್ಸಿಫೆನ್ (Tamoxifen): ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಔಷಧಿ.

* ಕ್ಯಾಲ್ಸಿಯಂ ಕಾರ್ಬೋನೇಟ್ (Calcium Carbonate): ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಲು ಬಳಸುವ ಮಾತ್ರೆ.

Comments are closed.