ಕನ್ನಡದ ಚಿತ್ರರಂಗದ ಹೊಸಕಿರಣ ಉದಯೋನ್ಮುಖ ಕಲಾವಿದೆ ವೆನ್ಯಾ ರೈ

Share the Article

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಬಂಟ ಮನೆತನವಾದ ಬೆಳ್ಳಿಪ್ಪಾಡಿ ಕುಟುಂಬದ ಕೀರ್ತಿಶಾಲಿ ಪುತ್ರಿ ವೆನ್ಯಾ ರೈ ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಕಿರಣವಾಗಿ ಅರಳಿರುವ ಪ್ರತಿಭಾವಂತ ನಟಿ. ಬಾಲ್ಯದಿಂದಲೇ ಕಲೆಯ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಈಕೆ, ಇಂದು ತನ್ನ ನೈಸರ್ಗಿಕ ಅಭಿನಯದಿಂದ ಪ್ರೇಕ್ಷಕರ ಹೃದಯದಲ್ಲಿ ಅಚ್ಚಳಿಯಿಲ್ಲದ ಗುರುತು ಮೂಡಿಸಿದ್ದಾಳೆ.

ವೆನ್ಯಾ ರೈ ಅವರ ತಂದೆ ಚೇತನ್ ರೈ ಮಾಣಿ ಅವರು ಪ್ರಸಿದ್ಧ ರಂಗನಟ, ರಂಗ ನಿರ್ದೇಶಕ ಮತ್ತು ಕನ್ನಡ ಹಾಗೂ ತುಳು ಚಿತ್ರರಂಗದ ಹೆಸರಾಂತ ನಟರಾಗಿದ್ದಾರೆ. ತಾಯಿ ಶ್ರೀಮತಿ ಬಿ. ರಶ್ಮಿ ಚೇತನ್ ರೈ ಅವರು ಸದಾ ತಮ್ಮ ಮಗಳ ಬೆಂಬಲದ ಶಕ್ತಿ ಆಗಿದ್ದಾರೆ. ತಂಗಿ ಬಿ. ಮಾನ್ಯ ರೈ ಕೂಡಾ ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸಿಕೊಂಡು ಆರಾಟ ಹಾಗೂ ದಿಗಿಲ್ ಚಲನಚಿತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆ ಗಳಿಸಿದ್ದಾಳೆ. ತಂದೆ-ತಾಯಿಯ ಪ್ರೇರಣೆ ಮತ್ತು ಮಾರ್ಗದರ್ಶನದ ಸವಿನೆನಪಿನಲ್ಲಿ ಬೆಳೆದ ವೆನ್ಯಾ ರೈ ಅವರ ಕಲಾ ಪಯಣವು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.

ವೆನ್ಯಾ ರೈ ಅವರು ಈಗಾಗಲೇ ಮೂರು ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಪ್ರಥಮ ಸಿನಿಮಾ ಭಾವಪೂರ್ಣ, ರಾಷ್ಟ್ರ ಪ್ರಶಸ್ತಿ ಹಾಗೂ ಎರಡು ಬಾರಿ ರಾಜ್ಯ ಪ್ರಶಸ್ತಿ ಪಡೆದ ನಿರ್ದೇಶಕ ಚೇತನ್ ಮುಂಡಾಡಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಈ ಚಿತ್ರದಲ್ಲಿ ಅವರು ನೀಡಿದ ಭಾವಪೂರ್ಣ ಅಭಿನಯಕ್ಕಾಗಿ “ಅತ್ಯುತ್ತಮ ಪೋಷಕ ನಟಿ” ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.

ಅವರ ದ್ವಿತೀಯ ಸಿನಿಮಾ ಆರಾಟ, ನಿರ್ದೇಶಕ ಮಲಾರ್ ಪುಷ್ಪರಾಜ್ ರೈ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಈ ಸಿನಿಮಾ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡು ಸುಮಾರು ನಾಲ್ಕುನೂರು ಚಿತ್ರಗಳಲ್ಲಿ ಟಾಪ್ 5 ಚಿತ್ರಗಳಲ್ಲಿ ಸ್ಥಾನ ಪಡೆದಿದೆ. ಈ ಚಿತ್ರದಲ್ಲಿ ವೆನ್ಯಾ ರೈ ಅವರ ಅಭಿನಯ ಕೌಶಲ್ಯಕ್ಕೆ ಅಂತರಾಷ್ಟ್ರೀಯ ಜ್ಯೂರಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು. ಮೂರನೇ ಸಿನಿಮಾ ಎಲ್ಲೋ ಜೋಗಪ್ಪ ನಿನ್ನ ಅರಮನೆ, ನಿರ್ದೇಶಕ ಹಯವದನ ಅವರ ನಿರ್ದೇಶನದಲ್ಲಿ ಮೂಡಿ ಬಂದ ಯಶಸ್ವಿ ಚಿತ್ರವಾಗಿದ್ದು, ಈ ಚಿತ್ರದಲ್ಲಿಯೂ ವೆನ್ಯಾ ರೈ ಅವರ ನೈಸರ್ಗಿಕ ಅಭಿನಯ ಪ್ರೇಕ್ಷಕರ ಮನಸ್ಸು ಗೆದ್ದಿದೆ.

ವೆನ್ಯಾ ರೈ ಅವರು ವಿವೇಕಾನಂದ ಸ್ವಾಯತ್ತ ಕಾಲೇಜು, ಪುತ್ತೂರು ಇಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಬಾಲ್ಯದಿಂದಲೇ ತಂದೆಯೊಂದಿಗೆ ನಾಟಕ ವೀಕ್ಷಣೆ ಮಾಡುತ್ತಿದ್ದ ಹುಡುಗಿಯಾಗಿದ್ದ ಅವರು, ನಾಟಕವೇ ಜೀವನದ ಭಾಗವಾಗಿದ್ದು, ತಂದೆ ಚೇತನ್ ರೈ ಮಾಣಿ ಅವರೇ ಇವರ ಮೊದಲ ಗುರು ಹಾಗೂ ಪ್ರೇರಣಾ ಶಕ್ತಿ. ಅಭಿನಯದ ಜೊತೆಗೆ ಸಂಗೀತ ಕ್ಷೇತ್ರದಲ್ಲಿಯೂ ಆಸಕ್ತಿ ತೋರಿದ ವೆನ್ಯಾ ರೈ ಅವರ ಮೊದಲ ಗೀತಾ ಸಾಹಿತ್ಯ “ನಮಸ್ತೆ ಸಿಂಧೂರ”, ನಿರ್ಮಾಪಕ ಹರ್ಷ ರೈ ಮಾಡಾವು ಅವರ ನಿರ್ಮಾಣದಲ್ಲಿ ಮೂಡಿ ಬಂದಿದೆ.

ಈ ಗೀತೆ ಆಗಸ್ಟ್ 15ರಂದು ನವದೆಹಲಿಯ ಕೆಂಪುಕೋಟೆಯ ಧ್ವಜಾರೋಹಣದ ದಿನ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಹಾಗೂ ವಿ. ಸೋಮಣ್ಣ ಅವರಿಂದ ಬಿಡುಗಡೆಗೊಂಡಿತು. “ಅಪರೇಷನ್ ಸಿಂಧೂರಕ್ಕೆ ನಮ್ಮ ಅರ್ಪಣೆ” ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾದ ಈ ಗೀತೆಗೆ ಅಪಾರ ಮೆಚ್ಚುಗೆ ದೊರೆತಿತು. ಆ ಸಂದರ್ಭದಲ್ಲಿ ಕೆಂಪುಕೋಟೆಯ ಆವರಣದಲ್ಲಿ ವೆನ್ಯಾ ರೈ ಅವರ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು ಎಂಬುದು ಎಲ್ಲರಿಗೂ ಹೆಮ್ಮೆಯ ವಿಷಯವಾಯಿತು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತನ್ನ ನಾಲ್ಕನೇ ತರಗತಿಯಲ್ಲಿ ಇರುವಾಗ ಶಾಲಾ ವಾರ್ಷಿಕೋತ್ಸವದಲ್ಲಿ ಪ್ರಥಮ ಬಾರಿಗೆ ನಾಟಕದ ಪಾತ್ರವೊಂದರಲ್ಲಿ ಮುಖಕ್ಕೆ ಬಣ್ಣ ಹಚ್ಚಿ ಅಭಿನಯಿಸಿದ ವೆನ್ಯಾ ರೈ ಅವರ ಪ್ರತಿಭೆ, ಸಭಿಕರು ಹಾಗೂ ಶಾಲಾ ಗುರುವೃಂದದವರ ಮೆಚ್ಚುಗೆಗೆ ಪಾತ್ರವಾಯಿತು. ಅಂದಿನ ಅಪ್ಪಟ ಬಾಲಕಿಯ ಮುಖದಲ್ಲಿ ಮೂಡಿದ್ದ ಕಲೆಯ ಕಿಂಚಿತ್ತೂ ಇಂದು ಬೆಳಕಿನ ಶಿಖರವಾಗಿ ಬೆಳೆದಿದೆ. ಪೌರಾಣಿಕ, ಚಾರಿತ್ರಿಕ ಹಾಗೂ ಜಾನಪದ ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂಬುದು ಈಕೆಯ ಹೃದಯದ ಕನಸು. ಅದು ಶೀಘ್ರದಲ್ಲೇ ಈಡೇರಲಿ ಎಂಬ ಆಶಯ ಎಲ್ಲರದಲ್ಲಿಯೂ ಇದೆ. “ನಾನು ಯಾವತ್ತೂ ನಿರ್ದೇಶಕನ ನಟಿ. ನನಗೆ ದೊರಕಿದ ಪಾತ್ರಕ್ಕೆ ಜೀವ ತುಂಬಿ ನ್ಯಾಯ ಒದಗಿಸುವುದು ನನ್ನ ಮೊದಲ ಆದ್ಯತೆ” ಎಂಬ ಆತ್ಮವಿಶ್ವಾಸದ ಮಾತುಗಳು, ಈಕೆಯ ದೃಢ ನಂಬಿಕೆಯು ಮತ್ತು ಶ್ರಮದ ಬಲವನ್ನು ವ್ಯಕ್ತಪಡಿಸುತ್ತವೆ. ಇದು ಈಕೆಯ ಮುಂದಿನ ಭವಿಷ್ಯದ ಸ್ಪಷ್ಟ ಕನ್ನಡಿ ಆಗಿದೆ.

ತಾಯಿ ರಶ್ಮಿ ಚೇತನ್ ರೈ ಅವರ ಪ್ರೋತ್ಸಾಹ ಮತ್ತು ತಂದೆ ಚೇತನ್ ರೈ ಮಾಣಿ ಅವರ ಮಾರ್ಗದರ್ಶನದಿಂದ ಪ್ರೇರಿತಳಾದ ವೆನ್ಯಾ ರೈ, ಚಲನಚಿತ್ರ ಕ್ಷೇತ್ರದಲ್ಲಿಯೇ ತಮ್ಮ ಭವಿಷ್ಯ ಕಟ್ಟಿಕೊಳ್ಳುವ ದೃಢನಿಶ್ಚಯ ಮಾಡಿಕೊಂಡಿದ್ದಾರೆ. ತಂದೆಯಂತೆಯೇ ವಿಭಿನ್ನ ರೀತಿಯ ಪಾತ್ರಗಳಲ್ಲಿ ಅಭಿನಯಿಸುವ ಆಸೆ ಮತ್ತು ಅಭಿಲಾಷೆ ಇವರದು. ತನ್ನ ಪ್ರತಿಭೆ, ಪರಿಶ್ರಮ ಮತ್ತು ನಿಸ್ವಾರ್ಥ ನಿಷ್ಠೆಯಿಂದ ಕನ್ನಡ ಚಿತ್ರರಂಗದಲ್ಲಿ ಹೊಸ ಚೈತನ್ಯವನ್ನು ತುಂಬುತ್ತಿರುವ ವೆನ್ಯಾ ರೈ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶ್ರೇಷ್ಠ ಸಾಧನೆಗಳನ್ನು ಮಾಡುವರೆಂಬ ವಿಶ್ವಾಸ ಎಲ್ಲರ ಮನದಲ್ಲೂ ಮೂಡಿಸಿದೆ. ವೆನ್ಯಾ ರೈ ನಿಜಕ್ಕೂ ಕನ್ನಡ ಚಿತ್ರರಂಗದ ಭವಿಷ್ಯದ ನಕ್ಷತ್ರ.

ಇದನ್ನೂ ಓದಿ:Bhramanda Guruji: ‘ಈ ವರ್ಷವೇ ಕೊನೆ, ಮುಂದಿನ ವರ್ಷದಿಂದ ಇರಲ್ಲ ಹಾಸನಾಂಬೆ ಸಾನಿಧ್ಯ’ – ಕುರಿತು ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ

ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ

Comments are closed.