ಕಾಂತಾರ 1 ಸಿನೆಮಾದ ಆ 9 ಘೋರ ತಪ್ಪುಗಳು: ಅಂದುಕೊಂಡ ಹಾಗೆ ಚಿತ್ರ ಬಾರದೇ ಇದ್ದದ್ದಕ್ಕೆ ಅದೇ ಕಾರಣ?

ಕಾಂತಾರ 1 ಸಿನೆಮಾ ಚಿತ್ರಮಂದಿರಗಳಲ್ಲಿ ಸಾಕಷ್ಟು ತಪ್ಪುಗಳನ್ನು ವೀಕ್ಷಕರು ಪ್ರಕಾಶಕರು ಗುರುತಿಸಿದ್ದಾರೆ. ಅಂದುಕೊಂಡ ಮಟ್ಟಕ್ಕೆ ಭಾವನಾತ್ಮಕವಾಗಿ ಚಿತ್ರ ಬಾರದೇ ಇದ್ದದ್ದಕ್ಕೆ ಅದೇ ಕಾರಣ ಎನ್ನಲಾಗುತ್ತಿದೆ. ನಾವು ಚಿತ್ರದಲ್ಲಿ ತಪ್ಪು ಹುಡುಕುತ್ತಿದ್ದೇವೆ ಅಂದುಕೊಳ್ಳಬೇಡಿ. ಸಿನಿಮಾವನ್ನು ಇನ್ನಷ್ಟು ಒಳ್ಳೆಯದು ಮಾಡಲಿಕ್ಕೆ ಎಷ್ಟೆಲ್ಲಾ ಅವಕಾಶಗಳಿದ್ದವು, ಅದನ್ನು ಬಳಸಿಕೊಳ್ಳಲಿಲ್ಲವಲ್ಲ ಎಂಬುದಷ್ಟೇ ನಮ್ಮ ನೋವು. ಹಾಗಾದ್ರೆ ನೋಡೋಣ ಬನ್ನಿ, ಏನೆಲ್ಲಾ ಆ ಘೋರ ತಪ್ಪುಗಳು?

1) ಚಿತ್ರ ಶುರುವಾದ ನಂತರ ಸುಮಾರು 10 ನಿಮಿಷದ ಬಳಿಕ ನಾಯಕನಟ ಬೆರ್ಮೆ ಅಥವಾ ರಿಷಬ್ ಶೆಟ್ಟಿಯವರ ಪ್ರವೇಶವಾಗುತ್ತದೆ. ರಿಶಬ್ ಶೆಟ್ಟಿ ದೃಶ್ಯ ಒಂದರ ಮೂಲಕ ಎಂಟ್ರಿ ಆಗುತ್ತಲೇ, ‘ನಾನು ಬರೋದು ಸ್ವಲ್ಪ ಲೇಟ್ ಆಯ್ತಲ್ಲ?’ ಅಂತ ಕೇಳುತ್ತಾರೆ. ಅದು ಒಂದು ಸಾಮಾನ್ಯ ಮಾಸ್ ಚಿತ್ರದ ಡೈಲಾಗ್. ಕಾಂತಾರದಂತಹ ನಂಬಿಕೆ ಭಕ್ತಿ ಪ್ರಧಾನ ಆಗಬೇಕಿದ್ದ ಚಿತ್ರದಲ್ಲಿ ಈ ಎಂಟ್ರಿ ಡೈಲಾಗ್ ಬೇಕಿರಲಿಲ್ಲ. ಇದು ಸಿಲ್ಲಿ ಅನ್ನಿಸುತ್ತದೆ.
2) ಕಾಡಿನ (ಕಾoತಾರದ) ಹುಡುಗರ ತಂಡವೊಂದು ಒಂದು ರಾಜನೊಬ್ಬನ ಊರಲ್ಲಿ ಗದ್ದಲ ಎಬ್ಬಿಸಿ, ರಥ ಹಾಳುಮಾಡಿದರೂ ಕೂಡಾ ಯಾರೂ ಅವರನ್ನು ತಡೆಯುವವರಿಲ್ಲ. ಈ ಸನ್ನಿವೇಶಗಳು ಅತಿರೇಕದ, ನಿಜಕ್ಕೆ ದೂರವಾದ ಘಟನೆಗಳಾಗಿ ಕಂಡುಬರುತ್ತವೆ. ಕೇವಲ ನಾಯಕ ಬಿರ್ಮೆಯನ್ನು ಪ್ರೊಜೆಕ್ಟ್ ಮಾಡಲಷ್ಟೇ ಸೃಷ್ಟಿಸಿದ ಹಾಗಿವೆ ಈ ಸೀನ್ ಗಳು.
3) ಎಲ್ಲರೂ ನಾಯಕರಾಗಲು ಸಾಧ್ಯವಿಲ್ಲ. ತಾಳ್ಮೆ ಮತ್ತು ಸಂಯಮ ಇರುವವರು ಮಾತ್ರ ನಾಯಕರಾಗುತ್ತಾರೆ. ಎಲ್ಲೋ ಕಾಂತಾರ 1 ಚಿತ್ರದ ನಾಯಕ ಬಿರ್ಮೆಯಲ್ಲಿ ತಾಳ್ಮೆ ಮಿಸ್ ಆದಂತೆ ಭಾಸವಾಗುತ್ತದೆ. ಮಾತಿನಲ್ಲಿ ಕೆಲಸ ಮಾಡಿ ಮುಗಿಸುವ ಬದಲು ತಾನೇ ರಾಜ ಮನೆತನದವರ ಮೇಲೆ ದೌಲತ್ತು ತೋರುತ್ತಾನೆ. ಬಾoಗ್ರ ರಾಜ್ಯಕ್ಕೆ ಬಂದವನು ಬೆರ್ಮೆ. ಅಲ್ಲಿ ಕುದುರೆಗೆ ಚುಚ್ಚಿ ಅದು ಎಲ್ಲೆಡೆ ಓಡಿ ಹಾಳು ಮಾಡಿದ್ದು, ಪೇಟೆ ರಥ ಪುಡಿ ಮಾಡಿದ್ದು ಕಥಾನಾಯಕ ಬೆರ್ಮೆ ಮತ್ತವನ ತಂಡ. ಆತ ತಮ್ಮ ಊರನ್ನು ಹಾಳು ಮಾಡಿದರೂ ರಾಜ ಮನೆತನ ಸುಮ್ಮನಿರಬೇಕಾ? ರಾಜರನ್ನು ಕೆಣಕಿ ದ್ವೇಷ ಬರುವಂತಹ ನಡವಳಿಕೆ ತೋರಿದ್ದು ಬೆರ್ಮೆ ಮತ್ತವನ ಸಹವರ್ತಿಗಳು. ಒಟ್ಟಾರೆ ಚಿತ್ರದ ನಾಯಕ ದೈವತ್ವ ಹೊಂದಿದವನು ಎಂದು ನಿರೂಪಿಸಲು ಕಥೆ ಸೋತಿದೆ.
4 – 5 ನೆಯ ಶತಮಾನದಲ್ಲಿ ಆಪಲ್ ಇರಲೇ ಇಲ್ಲ
4) ಕಾಂತಾರ 1 ಚಿತ್ರದಲ್ಲಿ ರಾಣಿಯ ಆಸ್ತಾನದಿoದ ಅಲ್ಲಿ ಹರಿವಾಣದಲ್ಲಿ ಇಟ್ಟಿದ್ದ ಆಪಲ್ ಹಣ್ಣನ್ನು ಕೊಂಡೊಯ್ಯುತ್ತಾನೆ. ಆದರೆ 4 ಅಥವಾ 5ನೆಯ ಶತಮಾನದಲ್ಲಿ ಆಪಲ್ ಭಾರತಕ್ಕೆ ಕಾಲಿಟ್ಟಿರಲಿಲ್ಲ. ಆಪಲ್ ಬೆಳೆಯಾಗಿ ಕಾಶ್ಮೀರದಲ್ಲಿ ನೆಲೆ ಬೆಳೆ ಕಂಡು ಕೊಂಡದ್ದು ಕ್ರಿಸ್ತಶಕ 1850 ರ ನಂತರ. ಆದರೆ 13 ನೆಯ ಶತಮಾನದಲ್ಲಿ ಅರಬ್ಬರು ಭಾರತದಲ್ಲಿ ಆಪಲ್ ಬೆಳೆ ಬೆಳೆಯಲು ಉತ್ಸುಕತೆ ತೋರಿದ್ದರು ಎನ್ನಲಾಗುತ್ತಿದೆ. 4 ಅಥವಾ 5ನೆಯ ಶತಮಾನದಲ್ಲಿ ಬನವಾಸಿಯ ಕಾಡಿನಲ್ಲಿ ನಡೆದಿದೆ ಎನ್ನಲಾದ ಈ ಸಿನಿಮಾ ಕಥೆ ನಡೆದ ಸಂದರ್ಭ ದಕ್ಷಿಣ ಭಾರತದಲ್ಲಿ ಆಪಲ್ ಬಳಕೆ ಇರಲಿಲ್ಲ. ವ್ಯಾಪಾರಕ್ಕೆ ಅಲ್ಲಿಗೆ ಬಂದ ಅರಬ್ಬರು ತಂದಿದ್ದರು ಅಂತ ವಾದ ಹಾಕಿದ್ರೆ..ಇರಲೂ ಬಹುದು ಅನ್ನೋಣ. ಆದ್ರೆ ನಂಬಲು ಕಷ್ಟ. ಅಲ್ಲದೆ ಆ ಕಾಲಕ್ಕೆ ಇದ್ದ ಆಪಲ್ ಇವತ್ತಿನ ಥರ ಇರಲಿಲ್ಲ. ಅದಕ್ಕೆ ಬೇರೆಯೇ ಹೆಸರಿದ್ದು, ಅದೊಂದು ಸಣ್ಣ ಹಣ್ಣಿನ ಮಾದರಿಯಲ್ಲಿತ್ತು. ಸಿನಿಮಾದಲ್ಲಿ ಕಂಡ ರೀತಿ ಅದು ಇರಲಿಲ್ಲ ಎನ್ನಲಾಗುತ್ತಿದೆ.
5) ಎಲ್ಲಾ ಕಡೆಯಲ್ಲಿಯೂ ಹೀರೋಯಿಸಂ ತೋರ್ಪಡಿಸಲು ರಿಷಬ್ ಶೆಟ್ಟಿಗೆ ಅದ್ಯಾಕೋ ಕಾತುರ. ಎಲ್ಲ ಕಡೆಗಳಲ್ಲೂ ಅವರೇ ಆಕ್ರಮಿಸಿ ಕೊಂಡಿದ್ದಾರೆ. ಅದೆಲ್ಲ ಬೇಕಿರಲಿಲ್ಲ. ಈ ಚಿತ್ರವನ್ನು ಭಾವನಾತ್ಮಕವಾಗಿ ಮಾಡಲು ಯುದ್ಧದ, ಮತ್ತಿತರ ಹೊಡೆದಾಟದ ನಾಯಕತ್ವವನ್ನು ಬೇರೆಯವರಿಗೆ ವಹಿಸಿ, ಆಯ್ದ ದೊಡ್ಡ ಕದನವನ್ನು ಮಾತ್ರ ತಾನು ಮಾಡಬೇಕಿತ್ತು. ತನ್ನನ್ನು ತಾನು ಪ್ರೊಜೆಕ್ಟ್ ಮಾಡಿಕೊಳ್ಳುವ ಭರದಲ್ಲಿ ಎಲ್ಲೋ ಲೆಕ್ಕ ತಪ್ಪಿದ ಹಾಗಿದೆ. ಹೊಡೆದಾಟದ ಬದಲು ಬೇರೆ ವಿಧಾನದಿಂದ ಕೂಡಾ ಗೆಲ್ಲಬಹುದು ಎಂದು ಕನಕವತಿ ತೋರಿಸಿ ಕೊಟ್ಟಿದ್ದಾಳೆ. ಫೈಟ್ ಬದಲು ರಿಷಬ್ ಶೆಟ್ಟಿ ಪಾತ್ರ ಸ್ಟ್ರಾಟೆಜಿಕ್ ಆಗಬೇಕಿತ್ತು. ತಾನೇ ನಾಯಕ ಅಂತ ತಾನೇ ಹೇಳಿ, ಹೊಡೆದು ಬಡಿದು ತೋರಿಸಿಕೊಳ್ಳುವ ಬದಲು ಬೇರೆ ವಿಧಾನಗಳ ಮೂಲಕ ಎಲ್ಲರೂ ಬೆರ್ಮೆಯಲ್ಲಿ ನಾಯಕನನ್ನು ಕಾಣುವ ಅವಕಾಶ ಸೃಷ್ಟಿಸಬೇಕಿತ್ತು. ಬರಹದಲ್ಲಿ ಅಂತಹ ಹಲವಾರು ಅವಕಾಶಗಳನ್ನು ಸೃಷ್ಟಿಸಿ ಬಿಡಬಹುದು. ಇಲ್ಲಿ ಸ್ಕ್ರೀನ್ ಪ್ಲೇ ಬಡವಾಗಿರೋದು ಎದ್ದು ಕಾಣುತ್ತಿದೆ.
6) ಈ ಚಿತ್ರದಲ್ಲಿ ದಿಗ್ಗಜ ಹಾಸ್ಯ ಕಲಾವಿದರಿದ್ದಾರೆ. ನವೀನ್ ಡಿ ಪಡೀಲ್ ಎಂಥಾ ಪಾತ್ರಕ್ಕೂ ರಸ ತುಂಬಬಲ್ಲ ವ್ಯಕ್ತಿ. ಮೌಖಿಕವಾಗಿ ಪ್ರಬಲ ಭಾವ ಹೊರಡಿಸಬಲ್ಲ ನಟನಾತ. ಆತನಿಗೆ ಮೈಮ್ ಕೂಡಾ ಗೊತ್ತು. ಆದರೆ ಅದ್ಯಾವುದೋ ಸೇನಾಪತಿ ಇರಬೇಕು, ಅದರ ಗೆಟಪ್ ಹಾಕಿ ಆತನ ಮುಖ ಬಂದ್ ಮಾಡಲಾಗಿದೆ. ಯಾರಿಗೆ ಯಾವ ಪಾತ್ರವನ್ನು ಕೊಡಬೇಕು ಎನ್ನುವುದು ನಿರ್ದೇಶಕರಿಗೆ ಖಚಿತವಾಗಿ ಗೊತ್ತಿರಬೇಕು. ಮೇಕಪ್ ಹಾಕಿ ಮುಖ ಮುಚ್ಚಿ ಕಾಮಿಡಿ ಮಾಡಿ ಅಂದರೆ ಅದು ಎಲ್ಲಿ ಪಂಚ್ ಆಗುತ್ತದೆ? ಅದೇ ಆದದ್ದು ಕಾಂತಾರ 1 ರಲ್ಲಿ. ಅಲ್ಲದೆ, ಪೀಕ್ ಕ್ಲೈಮಾಕ್ಸ್ ನಲ್ಲಿ ಕಾಮಿಡಿ ಮಿಕ್ಸ್ ಮಾಡಲು ಹೋಗಿದ್ದು, ಅನುಭವದ ಕೊರತೆಯನ್ನು ಎತ್ತಿ ತೋರಿಸುತ್ತದೆ.
7) ಯುದ್ಧದ, ದೌರ್ಜನ್ಯದ ಹೊಡೆದಾಟದ ಸನ್ನಿವೇಶಗಳನ್ನು ಬಾಹುಬಲಿ, ಕೆಜಿಎಫ್, ಆರ್ ಆರ್ ಆರ್ ಮುಂತಾದ ಹಾಗಾಗೇ ಪಡೆದುಕೊಂಡದ್ದನ್ನು ಪ್ರೇಕ್ಷಕರು ಗಮನಿಸಿದ್ದಾರೆ. ಕಾಳ ಕೇಯ ಟ್ರೈಬಲ್ ರಾಜನ War cry ಮಾದರಿಯಲ್ಲಿಯೇ ಬೆರ್ಮೆ ಮತ್ತವನ ತಂಡ ಯುದ್ದ ಕೇಕೆ ಹಾಕಿದೆ. ಇದು ಜನರಿಗೆ ಇಷ್ಟ ಆಗಿಲ್ಲ.
8) ಭೂತಾರಾಧನೆ, ಭೂತ ಕೋಲ ದೈವಾರಾಧನೆಯಲ್ಲಿ ವಾದ್ಯ ಮತ್ತು ನಲಿಕೆ (ನಾಟ್ಯ) ಅತ್ಯಂತ ಪ್ರಮುಖ ಅಂಶ. ನಾಟ್ಯದ ಮತ್ತು ಕೈಯ ಮುಖದ ಹಾವ ಭಾವದ ಮೂಲಕ ಹತ್ತಾರು ಸಂವಾದಗಳನ್ನು ಸೃಷ್ಟಿಸುವ, ಭಾವಗಳನ್ನು ತಲುಪಿಸುವ ಕೆಲಸ ಆಗುತ್ತದೆ. ಆದರೆ ಅಲ್ಲಲ್ಲಿ ಒಂದೆರಡು ತುಂಡಾದ ನೃತ್ಯ ಬಿಟ್ಟರೆ ದೈವಾರಾಧನೆಯ ಜತೆಗೆ ಸದಾ ಸಾಗುವ ಸಾಂಸ್ಕೃತಿಕ ಅಂಶಗಳೇ ಚಿತ್ರದಲ್ಲಿ ಮಿಸ್ ಆಗಿವೆ.
ಕ್ಲೈಮಾಕ್ಸ್: ವಿಜೃಂಭಿಸಿ ತೋರಿಸುವ ಅವಕಾಶ ಮಿಸ್!
9) ಹೆಣ್ಣಿನ ಜತೆ ಯುದ್ದ ಮಾಡುವ ಅನಿವಾರ್ಯತೆ ನಾಯಕ ಬೆರ್ಮೆಗೆ ಬರುತ್ತದೆ. ಆತ ಕನಕವತಿಯ ಅಪ್ಪನ ಜತೆ ಯುದ್ದಕ್ಕೆ ನಿಂತು, ಇನ್ನೇನು ತನ್ನ ಅಪ್ಪನು ಬೆರ್ಮೆಯ ಕೈಯಲ್ಲಿ ಸಾಯಬೇಕು ಅನ್ನುವಷ್ಟರಲ್ಲಿ ಕನಕವತಿಯೇ ಅಡ್ಡ ಬಂದು ನಿಲ್ಲುತ್ತಾಳೆ. ಹೆಣ್ಣಿನ ಜತೆ ಯುದ್ದ ನಡೆಸಲು ಬೆರ್ಮೆ ಬರೋದಿಲ್ಲ ಅನ್ನೋದು ಕನಕವತಿಯ ಗಟ್ಟಿ ಅಭಿಪ್ರಾಯವಾಗಿತ್ತು. ಅದರಂತೆ ನಾಯಕ ಯುದ್ಧದಿಂದ ವಿಮುಖನಾಗುತ್ತಾನೆ. ಆಗ ಆತನ ಬದಲಿಗೆ ಸ್ತ್ರೀ ಪಾತ್ರಧಾರಿ- ಸಾಕ್ಷಾತ್ ಚಾಮುಂಡಿಯೇ ಬರುತ್ತಾಳೆ. ಎಲ್ಲರೂ ಊಹಿಸಿದಂತೆ ಬೆರ್ಮೆಯ ತಂಡದಿಂದ ಬೇರೆ ಹೆಣ್ಣೊಬ್ಬಳು ಯುದ್ಧವನ್ನು ವಹಿಸಿಕೊಳ್ಳುವ ಬಗ್ಗೆ ಊಹೆ ಮಾಡಲಾಗಿತ್ತು. ಆದರೆ, ಅಲ್ಲೂ ಬೇರೆಯವರಿಗೆ ರಿಷಬ್ ಶೆಟ್ಟಿ ಅವಕಾಶವನ್ನೇ ಕೊಟ್ಟಿಲ್ಲ. ಅಲ್ಲಿ ತಾನೇ ಚಾಮುಂಡಿಯಾಗಿ ಬದಲಾಗುವ ಸನ್ನಿವೇಶವಿದೆ. ಆದರೆ, ಚಾಮುಂಡಿಯಾಗಿ ರೂಪಾಂತರವಾಗುವ ಸನ್ನಿವೇಶವನ್ನು ಅತ್ಯಂತ ಪ್ರಖರವಾಗಿ ಕಟ್ಟಿ ಕೊಡುವ ಎಲ್ಲಾ ಅವಕಾಶಗಳು ನಿರ್ದೇಶಕ ರಿಷಬ್ ಶೆಟ್ಟಿಗೆ ಇದ್ದರೂ, ಆ ಸುಲಭದ ಅವಕಾಶವನ್ನು ಅವರು ಕೈ ಚೆಲ್ಲಿದ್ದಾರೆ. ಒಂದು ವೈಯಾರದ ನಾಟ್ಯಮಯ ಬದಲಾವಣೆಯ ಮೂಲಕ, ಹೆಣ್ಣಿನ ಧ್ವನಿಯ ಅನುಕರಣೆಯ ಮುಖೇನ, ಭೂತಾರಾಧನೆಯ ನಲಿಕೆಯ ಮೂಲಕವೇ ಚಾಮುಂಡಿ (ಬೆರ್ಮೆಯ ದೇಹದಲ್ಲಿ) ಯುದ್ಧಕ್ಕೆ ಎಂಟ್ರಿ ಆಗಬೇಕಿತ್ತು. ಜಸ್ಟ್ 10 ನಿಮಿಷದ ಕೊನೆಯ ಕ್ಲೈಮ್ಯಾಕ್ಸ್ ಅನ್ನು ವಿಜೃoಭಿಸಿ ಬಿಡುವ ಎಲ್ಲಾ ಅವಕಾಶವಿತ್ತು. ಆಗ ಕಾಂತಾರ 1 ಇನ್ನಷ್ಟು ಗಟ್ಟಿಯಾಗಿ ನಿಲ್ಲುತ್ತಿತ್ತು. ಆದರೆ ರಿಷಬ್ ಬೇರೆ ರೂಟ್ ಹಿಡಿದರು. ಕೊನೆಯ ಫೈಟಿಂಗ್ ಅನ್ನು ಇನ್ನಷ್ಟು ಹೊತ್ತು ಇರುತ್ತೆ ಅನ್ನುವಾಗಲೇ ಕನಕವತಿಯ ಕುತ್ತಿಗೆ ಮುರಿದು ಎಲ್ಲವೂ ಮುಗಿದು ಹೋಗಿತ್ತು! ಇವೆಲ್ಲ ತಪ್ಪುಗಳನ್ನು ನಾವು ಮಾತ್ರವಲ್ಲ ಹಲವಾರು ವೀಕ್ಷಕರು ವಿಮರ್ಶಕರು ಗುರುತಿಸಿದ್ದಾರೆ. ಚಿತ್ರ ತಂಡ ಪಟ್ಟ ಶ್ರಮ ದೊಡ್ಡದಿದೆ. ದಯವಿಟ್ಟು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಬನ್ನಿ.
ಸುದರ್ಶನ್ ಬಿ. ಪ್ರವೀಣ್, ಬೆಳಾಲು
Comments are closed.