State Legal Serivice Authority: ಅರೆಕಾಲಿಕ ಕಾನೂನು ಸ್ವಯಂ ಸೇವಕರ ಹುದ್ದೆ: ಅರ್ಜಿ ಆಹ್ವಾನಿಸಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರ

State Legal Serivice Authority: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಕಾನೂನು ಸೇವೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಸಲುವಾಗಿ ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು (ಅಧಿಕಾರ ಮಿತ್ರರು) ನೇಮಿಸಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ಧಾರ ಮಾಡಿದೆ.

ಅರೆಕಾಲಿಕ ಕಾನೂನು ಸ್ವಯಂ ಸೇವಕರ ಯೋಜನೆಯಡಿ ಈ ಕಾನೂನು ಸ್ವಯಂ ಸೇವಕರ ನೇಮಕ ಮಾಡಿ ತರಬೇತಿ ನೀಡಲಾಗುವುದು ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್ ಶಶಿಧರ ಶೆಟ್ಟಿ ಹೇಳಿದ್ದಾರೆ.
”ಪ್ರತಿಯೊಂದು ತಾಲೂಕು ಕಾನೂನು ಸೇವೆಗಳ ಸಮಿತಿ, ಗರಿಷ್ಠ 25-50 ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ 50 ರಿಂದ 100 ಸಕ್ರಿಯ ಅರೆಕಾಲಿಕ ಕಾನೂನು ಸ್ವಯಂ ಸೇವಕರುಗಳನ್ನು ಹೊಂದಬಹುದಾಗಿದ್ದು, ಹೊಸದಾಗಿ ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು 2025ರ ಅಕ್ಟೋಬರ್ 20ರ ಅಂತ್ಯದ ವೇಳೆಗೆ ಅರ್ಜಿ ಸಲ್ಲಿಸಬಹುದು” ಎಂದರು.
ಸ್ವಯಂ ಸೇವಕರಾಗಿ ಶಿಕ್ಷಕರು, ನಿವೃತ್ತ ಶಿಕ್ಷಕರು, ಹಿರಿಯ ನಾಗರಿಕರು, ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ಕಾನೂನು ವಿದ್ಯಾರ್ಥಿಗಳು, ಸ್ವಸಹಾಯ ಗುಂಪಿನವರು, ನಿವೃತ್ತ ಸೈನಿಕರು ಹೀಗೆ ಎಲ್ಲಾ ಕ್ಷೇತ್ರದ ಜನರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಜಿಲ್ಲಾ ಹಾಗೂ ತಾಲೂಕು ಹಂತದಲ್ಲಿ ಆಯಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ಆಯ್ಕೆಯಾದವರಿಗೆ ಒಂದು ವರ್ಷ ಸೇವಾವಧಿ ಇರಲಿದ್ದು, ದಿನಕ್ಕೆ ರೂ. 750/- ಗೌರವಧನ ನಿಡಲಾಗುವು ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ:ECINet: ಇ-ಸೈನ್ ವ್ಯವಸ್ಥೆ ಆರಂಭಿಸಿದ ಚುನಾವಣಾ ಆಯೋಗ
ಆಯ್ಕೆಯಾದ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಜನರಿಗೆ ಕಾನೂನು ಅರಿವು ಮೂಡಿಸುವುದು, ಬಾಲ್ಯ ವಿವಾಹ ತಡೆ, ಮಾದಕ ವಸ್ತು ಕಳ್ಳ ಸಾಗಣೆ ತಡೆ, ಮಾಹಿತಿ ಸಂಗ್ರಹ ಲೋಕ ಅದಾಲತ್ ಮಧ್ಯಸ್ಥಿಕೆ ಮಾಹಿತಿ, ಜೀತಪದ್ಧತಿ ನಿವಾರಣೆ ಹೀಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇವರನ್ನು ಜಿಲ್ಲೆ, ತಾಲೂಕು, ಹಳ್ಳಿಗಳಲ್ಲಿ ನೇಮಕ ಮಾಡಿಕೊಳ್ಳುವುದರಿಂದ ಜನರ ಕಾನೂನು ಸಮಸ್ಯೆಗಳು ಅತಿ ಶೀಘ್ರವಾಗಿ ಬಗೆಹರಿಸಯುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
Comments are closed.