ಉಳ್ಳಾಲ ರಾಣಿ ಅಬ್ಬಕ್ಕ ಅರಮನೆ, ಕೋಟೆ ಕೊತ್ತಲ ಸರ್ವನಾಶ: ಉಪನ್ಯಾಸಕ, ಸಾಹಿತಿ, ಸಂಶೋಧಕ ಬಿ.ಎ.ಲೋಕಯ್ಯ ಶಿಶಿಲ ವಿಷಾದ!

Share the Article

Mangalore: ಮಂಗಳೂರು: ಉಳ್ಳಾಲವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸುತ್ತಲೇ ಪೋರ್ಚುಗೀಸರ ವಿರುದ್ಧ ಸಮರ ಸಾರಿದ ಭಾರತದ ಮೊದಲ ಸ್ವಾತಂತ್ರ ಹೋರಾಟಗಾರ್ತಿಯಾದ ವೀರರಾಣಿ ಅಬ್ಬಕ್ಕನ ರಾಜಧಾನಿ ಉಳ್ಳಾಲದಲ್ಲಿ ಆಕೆ ನಿರ್ಮಿಸಿದ ಅರಮನೆ ಕೋಟೆ ಕೊತ್ತಲಗಳೇ ನಾಶಗಯ್ಯಲ್ಪಟ್ಟು ಹೇಳಹೆಸರೆಲ್ಲದಂತಾ ಗಿರುವುದು ಭಾರತದ ಪ್ರಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯಾದ ವೀರರಾಣಿ ಅಬ್ಬಕ್ಕನಿಗೆ ಮತ್ತು ಇತಿಹಾಸಕ್ಕೆ ಮಾಡಿದ ಘೋರಾತಿ ಘೋರ ದ್ರೋಹವಾಗಿದೆ ಎಂದು ಉಪನ್ಯಾಸಕರೂ,ಸಾಹಿತಿಗಳೂ, ಸಂಶೋಧಕರೂ ಆದ ಬಿ.ಎ ಲೋಕಯ್ಯಶಿಶಿಲ ವಿಷಾದ ವ್ಯಕ್ತಪಡಿಸಿದರು.

ಅವರು ದಿನಾಂಕ 9.9. 2025ರ ಸೋಮವಾರ ಕರ್ನಾಟಕ ರಾಜ್ಯ ಮಹಾವಿದ್ಯಾನಿಲಯಗಳ ಶಿಕ್ಷಕ: ಉಪನ್ಯಾಸಕರ ಸಂಘ.ರಿ. ಮಂಗಳೂರು ವಲಯ ಹಾಗೂ ಉಳ್ಳಾಲದ ಪಾಂಡ್ಯರಾಜ ಬಲ್ಲಾಳ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವತಿಯಿಂದ ಆಯೋಜಿಸಲಾದ ಅಬ್ಬಕ್ಕ ರಾಣಿಯ 500 ನೇ ವರ್ಷದ ವರ್ಷಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ ಉಪನ್ಯಾಸಮಾಲಿಕೆಯನ್ನು ಉದ್ದೇಶಿಸಿಮಾತನಾಡುತ್ತಿದ್ದರು.

ಅವರು ಮಾತನಾಡುತ್ತಾ, ಉಳ್ಳಾಲವೆಂಬ ಕಡಲತಡಿಯ ಸಿಡಿಲಾಗಿ, ಓಡುವ ಕುದುರೆಗಳಿಗೂ ಲಗಾಮು ಹಾಕಿ ಹಿಡಿದಿಡುವ ಛಲಗಾತಿಯಾಗಿ, ಮದವೇರಿದ ಗಜಗಳಿಗೂ ಅಂಕುಶ ಹಾಕಿ ಹತೋಟಿಗೆಯ್ಯುವ ದಿಟ್ಟೆಯಾಗಿ, ಸಮುದ್ರದ ಅಲೆಗಳಿಗೂ ಕೂಡ ಹುಚ್ಚಿನ ಕೆಚ್ಚು ಹತ್ತಿಸಿ ಹಿಂದಕಟ್ಟಬಲ್ಲ ಗಂಡೆದೆಯ ಧೀರೆಯಾಗಿ, ವೀರಗಚ್ಚೆ ಹಾಕಿ ರಣರಂಗದಲ್ಲಿ ಯುದ್ಧಕ್ಕೆ ನಿಂತು ಶತ್ರು ಪಾಳೆಯದ ರುಂಡವನ್ನು ಚಂಡಾಡುತ್ತಿದ್ದ ಬೆಂಕಿಯ ಸಿಡಿಗುಂಡಾಗಿ, ಸ್ವತಹ ತನಗೆ ತಾಳಿ ಕಟ್ಟಿದ ಗಂಡನೇ ಶತ್ರು ಪಾಳೆಯದ ಜೊತೆ ಸೇರಿ ತನ್ನ ವಿರುದ್ಧ ಪಿತೂರಿ ನಡೆಸಿದಾಗಲೂ ತಾನು ಯಾವುದಕ್ಕೂ ಅಂಜದೆ ವೀರಾವೇಶದಿಂದ ಯುದ್ಧಕ್ಕೆ ಮುಂದಾದ ರಣಚಂಡಿಯಾಗಿ, ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ತುಳುನಾಡ ರಾಣಿಯಾಗಿ ಮೆರೆದ ಅಪ್ರತಿಮ ಛಲಗಾತಿಯೇ ಅಕ್ಕಪಕ್ಕದ ಗಡಿ ಪ್ರದೇಶಗಳನ್ನು ಅತಿಕ್ರಮಿಸಿಕೊಳ್ಳಲು ತಮ್ಮ ತಮ್ಮೊಳಗೆ ಯುದ್ಧಕ್ಕೆ ಮುಂದಾಗಿ ಕಚ್ಚಾಡಿಕೊಳ್ಳುತ್ತಿದ್ದರೆ, ವೀರರಾಣಿ ಅಬ್ಬಕ್ಕ ಮಾತ್ರ ಎಂದೂ ತನ್ನ ಸ್ವಾರ್ಥಕ್ಕಾಗಿ ಹೋರಾಡದೇ ತುಳುನಾಡು ಸೇರಿದಂತೆ ಇಡೀ ಭಾರತದ ವಿರುದ್ಧ ದಬ್ಬಾಳಿಕೆ ನಡೆಸಲು ಮುಂದಾದ ಪೋರ್ಚುಗೀಸರ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದರಿಂದ ಓರ್ವ ಹೆಣ್ಣು ಮಗಳಾಗಿ ತುಳುನಾಡಿನ ಅಸ್ಮಿತತೆ ಹಾಗೂ ಸ್ವಾತಂತ್ರ ಹೋರಾಟದ ನೆಲೆಯಲ್ಲಿ ರಾಣಿ ಅಬ್ಬಕ್ಕ ತುಳುನಾಡು ಸೇರಿದಂತೆ ಭಾರತದ ಇತರೆಲ್ಲ ಬಹುತೇಕ ರಾಜರುಗಳಿಂದ ಭಿನ್ನ ನೆಲೆಯಲ್ಲಿ ಪರಿಗಣಿಸಲ್ಪಡುತ್ತಾಳೆ. ಹೀಗಾಗಿಯೇ ಈಕೆ ತುಳುನಾಡು ಮಾತ್ರವಲ್ಲ ಇಡೀ ಭಾರತ ಅಷ್ಟೇ ಏಕೆ ಇಡೀ ಜಗತ್ತೇ ಮೆಚ್ಚಿಕೊಳ್ಳುವಂತಹ ಸಾಹಸ, ಪರಾಕ್ರಮ, ಗೌರವಾದರಗಳಿಗೆ ಪಾತ್ರಳಾಗಿದ್ದಾಳೆ.

ಆದರೆ ಇಡೀ ಜಗತ್ತೇ ಮೆಚ್ಚಿದ ರಾಣಿ ಅಬ್ಬಕ್ಕನ ರಾಜಧಾನಿ ಉಳ್ಳಾಲದಲ್ಲಿ ಆಕೆಯೇ ನಿರ್ಮಿಸಿದ್ದ ಭವ್ಯವಾದ ಅರಮನೆ, ಕೋಟೆ ಕೊತ್ತಲಗಳೆಲ್ಲವನ್ನೂ ಕೆಡವಿ ಹೇಳ ಹೆಸರಿಲ್ಲದಂತೆ ಮಾಡಿ ಅದರ ಸಮಾಧಿಯ ಮೇಲೆ ನಾವು ನಮ್ಮ ಅಟ್ಟಹಾಸದ ಸೌಧವನ್ನು ಕಟ್ಟಿ ಮೆರೆದಾಡುತ್ತಿರುವುದು ಮತ್ತು ಅವಳ ಸಾಹಸ, ಪರಾಕ್ರಮಗಳನ್ನು ವೇದಿಕೆಗಳಲ್ಲಿ ಹೊಗಳುವುದಕಷ್ಟೇ ಸೀಮಿತಗೊಳಿಸಿಕೊಂಡು ವ್ಯರ್ಥ ಕಾಲಹರಣ ಮಾಡುತ್ತಿರುವುದು ಅತ್ಯಂತ ದುಃಖದಾಯಕ ವಿಚಾರವಾಗಿದೆ.

ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರಜ್ಞಾವಂತರಾದ ನಾವೆಲ್ಲರೂ ಸ್ಥಳೀಯ ಜನಪ್ರತಿನಿಧಿಗಳ ಮೂಲಕ ರಾಣಿ ಅಬ್ಬಕ್ಕದೇವಿ ಹಿಂದೆ ಎಲ್ಲಿ ಅರಮನೆ, ಕೋಟೆ, ಕೊತ್ತಲಗಳನ್ನು ನಿರ್ಮಿಸಿಕೊಂಡಿದ್ದಳೋ ಅದೇ ಸ್ಥಳದಲ್ಲಿ ಮತ್ತೆ ಅರಮನೆ ಕೋಟೆ ಕೊತ್ತಲಗಳನ್ನು ಪುನರ್ ನಿರ್ಮಿಸಿ ರಾಷ್ಟ್ರೀಯ ಸ್ಮಾರಕವನ್ನಾಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಮೂಲಕ ಮುಂದಿನ ಪೀಳಿಗೆಗೂ ಕೂಡ ಸಹ ವೀರರಾಣಿ ಅಬ್ಬಕ್ಕನ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡುವ ಅಗತ್ಯವಿದೆ ಎಂದರಲ್ಲದೆ ಅಬ್ಬಕ್ಕನ ಕುರಿತಾಗಿ ಈವರೆಗೆ ಎಲ್ಲಿಯೂ ಕಂಡು ಕೇಳರಿಯದ ಹಲವು ರೋಚಕ ವಿಚಾರಗಳ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ತುಳು ಪೀಠದ ಮಾಜಿ ಸಂಯೋಜಕ, ಉಪನ್ಯಾಸಕ ಮಾಧವ ಎಂ ಕೆ. ಪಾಂಡಿರಾಜ ಬಲ್ಲಾಳ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಮ್ಯಾನೇಜ್ ಟ್ರಸ್ಟಿ ಡಾ. ಪ್ರಿಯ ಬಲ್ಲಾಳ್, ಪಾಂಡ್ಯರಾಜ ಬಲ್ಲಾಳ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಪ್ರಾಂಶುಪಾಲೆ ಡಾ.ಶರ್ಮಿಳಾ ಮುಖೇಶ್ ರಾವ್, ಕರ್ನಾಟಕ ರಾಜ್ಯ ಮಹಾ ವಿದ್ಯಾನಿಲಯಗಳ ಶಿಕ್ಷಕ ಉಪನ್ಯಾಸಕರ ಒಕ್ಕೂಟದ ಕಾರ್ಯಕ್ರಮ ಸಂಯೋಜಕಿ ಉಪನ್ಯಾಸಕಿ ಕಾಜಲ್ ಮತ್ತು ಕವಿತಾ ಎಂ ಶೆಟ್ಟಿ ಉಪಸ್ಥಿತರಿದ್ದರು.

Comments are closed.