Farmer suicide: ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷದಲ್ಲಿ 2,422 ರೈತರ ಆತ್ಮಹತ್ಯೆ – ಎಷ್ಟು ಕುಟುಂಬಗಳಿಗೆ ಪರಿಹಾರ ವಿತರಣೆಯಾಗಿದೆ?

Share the Article

Farmer suicide: ಕರ್ನಾಟಕದಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ 2,422 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ 2067 ರೈತರ ಕುಟುಂಬಗಳಿಗೆ ಒಟ್ಟು ₹98.10 ಕೋಟಿ ಪರಿಹಾರ ನೀಡಲಾಗಿದೆ ಎಂದು ಕಂದಾಯ ಇಲಾಖೆಯ ಜುಲೈ ಅಂತ್ಯದವರೆಗಿನ ಅಂಕಿಅಂಶಗಳು ಹೇಳಿವೆ. ಈ ಅಂಕಿಅಂಶಗಳ ಪ್ರಕಾರ, ಹಾವೇರಿಯಲ್ಲಿ ಅತಿ ಹೆಚ್ಚು ರೈತರು (260) ಆತ್ಮಹತ್ಯೆ ಮಾಡಿಕೊಂಡಿದ್ದು, ಎರಡನೇ ಸ್ಥಾನದಲ್ಲಿ ಬೆಳಗಾವಿ (218) ಇದೆ. ಬೆಂಗಳೂರು ನಗರ ಹಾಗೂ ಕೋಲಾರದಲ್ಲಿ ತಲಾ ಒಬ್ಬ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:Modi-Trump: ರಾಗ ಬದಲಿಸಿದ ಟ್ರಂಪ್: ಪ್ರಧಾನಿ ಮೋದಿ ಜತೆ ಸದಾ ಸ್ನೇಹಿತನಾಗಿರುತ್ತೇನೆ – ವಿಶ್ವಸಂಸ್ಥೆಯ ಅಧಿವೇಶನಕ್ಕೆ ಮೋದಿ ಗೈರು

ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 10 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಹೇಳುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಏರುಗತಿಯಲ್ಲಿದೆ. ಅಂಕಿ-ಅಂಶದ ಪ್ರಕಾರ, ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ ವಾರ್ಷಿಕ ಸರಾಸರಿ 1 ಸಾವಿರದಂತೆ 10,371 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರವಾಹ, ಬರ ಮತ್ತಿತರ ಕಾರಣಗಳಿಂದ ರೈತರು ಆರ್ಥಿಕ ಸಂಕಷ್ಟಕ್ಕೊಳಗಾಗಿ ವರ್ಷದಿಂದ ವರ್ಷಕ್ಕೆ ಸಾವಿನ ದಾರಿ ಕಂಡುಕೊಳಳುತ್ತಿದ್ದಾರೆ.

ಹವಾಮಾನ ವೈಪರಿತ್ಯದಿಂದ ರೈತರು ಬೆಳೆದ ಬೆಳೆ ಕೈ ಸೇರದ ಹಿನ್ನೆಲೆ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಉಳಿದಂತೆ ದಕ್ಷಿಣ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆ. ಅದರಲ್ಲೂ ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ಕೇವಲ ಒಬ್ಬ ರೈತರ ಮಾತ್ರ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಚಿಕ್ಕಬಳ್ಳಾಪುರದಲ್ಲಿ 4, ಚಾಮರಾಜನಗರದಲ್ಲಿ 6, ರಾಮನಗರ (ಬೆಂಗಳೂರು ದಕ್ಷಿಣ) 10, ದಕ್ಷಿಣ ಕನ್ನಡ 11, ಕೊಡಗು 12 ರೈತರು ಸಾವಿಗೆ ಶರಣಾಗಿದ್ದಾರೆ.

98 ಕೋಟಿ ರು. ಪರಿಹಾರ:
ಆತ್ಮಹತ್ಯೆಗೆ ಶರಣಾದ ಎಲ್ಲಾ ರೈತರ ಕುಟುಂಬಕ್ಕೆ ಪರಿಹಾರ ಸಿಗಲ್ಲ. ವರು ಸಾಲಬಾಧೆ, ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಿಖರವಾದರೆ ಮಾತ್ರ ಸರ್ಕಾರ ಅವರ ಕುಟುಂಬಗಳಿಗೆ ಪರಿಹಾರ ನೀಡುತ್ತದೆ. ಒಟ್ಟಾರೆ ಅಷ್ಟು ಪ್ರಮಾಣದ ರೈತ ಕುಟುಂಬಗಳಿಗೆ ತಲಾ 5 ಲಕ್ಷ ರು.ನಂತೆ 98.10 ಕೋಟಿ ರು. ಪರಿಹಾರ ವಿತರಿಸಲಾಗಿದೆ.

Comments are closed.