Odanadi: ಒಡನಾಡಿ ಸೇವಾ ಸಂಸ್ಥೆಗೆ ವಿದೇಶಿ ದೇಣಿಗೆ ಬರುವುದು ಸತ್ಯ: ಈ ಸಂಬಂಧ ಇಡಿ ನಮಗೆ ನೋಟಿಸ್ ನೀಡಿಲ್ಲ – ಸಂಸ್ಥಾಪಕ ಸ್ಟ್ಯಾನ್ಲಿ ಸ್ಪಷ್ಟನೆ

Odanadi: ಒಡನಾಡಿ ಸೇವಾ ಸಂಸ್ಥೆಗೆ ಬರು ತಿರುವ ವಿದೇಶಿ ದೇಣಿಗೆ ಕುರಿ ತಂತೆ ಇಡಿ (ಜಾರಿ ನಿರ್ದೇಶ ನಾಲಯ) ನಮಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಸಂಸ್ಥೆಯ ಸಂಸ್ಥಾಪಕ ಸ್ಟ್ಯಾನ್ಲಿ ಸ್ಪಷ್ಟಪಡಿಸಿದರು.

ನಮ್ಮ ಸಂಸ್ಥೆಗೆ ವಿದೇಶಿ ದೇಣಿಗೆ ಬರುವುದು ಸತ್ಯ. ಆದರೆ ಯಾವ ಉದ್ದೇಶಕ್ಕೆ ನೀಡಲಾಗಿದೆಯೋ ಅದನ್ನು ಅದಕ್ಕೆ ಬಳಕೆ ಮಾಡುತ್ತಿದ್ದೇವೆ. ವಿದೇಶಿ ದೇಣಿಗೆಯನ್ನು ಮನ ಬಂದಂತೆ ಖರ್ಚು ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ವಿದೇಶಿ ದೇಣಿಗೆ ಬರುವುದು ಅಷ್ಟು ಸುಲಭದ ಕೆಲಸವಲ್ಲ. ಇಲ್ಲಿ ಕೆಲವರು ಬಡ್ಡಿ ವ್ಯವಹಾರ ಮಾಡಿದಂತೆ ವಿದೇಶಿ ದೇಣಿಗೆ ಬರುತ್ತದೆ ಎಂದು ಭಾವಿಸಿದ್ದಾರೆ. ಆದರೆ ವಿದೇಶಿ ದೇಣಿಗೆಯನ್ನು ಕಾನೂನು ಬದ್ದವಾಗಿ ನೀಡಲಾಗುತ್ತಿದೆ ಎಂದರು.
ಒಂದೇ ಬಾರಿಗೆ ಪೂರ್ಣ ಪ್ರಮಾಣದಲ್ಲಿ ವಿದೇಶಿ ದೇಣಿಗೆ ಬರುವುದಿಲ್ಲ. ಹಲವು ಕಂತುಗಳಲ್ಲಿ ನೀಡಲಾಗುತ್ತದೆ. ಜೊತೆಗೆ ಅವರು ಕೊಟ್ಟ ಹಣಕ್ಕೆ ಆಗಾಗ ನಾವು ಲೆಕ್ಕ ನೀಡಬೇಕು. ಇಲ್ಲವೆಂದರೆ ನಮ್ಮ ಲೈಸನ್ಸ್ ರದ್ದಾಗುತ್ತದೆ ಎಂದು ತಿಳಿಸಿದರು. ಇಷ್ಟೆಲ್ಲಾ ಪಾರದರ್ಶಕತೆ ಹಾಗೂ ಕಾನೂನು ನಿಯಮ ಇರುವಾಗ ನಮಗೆ ಸುಲಭವಾಗಿ ವಿದೇಶಿ ದೇಣಿಗೆ ಬರುತ್ತದೆ ಎಂದು ಹೇಳುವುದು ಶುದ್ಧ ಸುಳ್ಳು ಎಂದರು.
ಇಲ್ಲಿಯವರೆಗೆ ಇಡಿಯವರು ನಮಗೆ ಯಾವುದೇ ನೋಟಿಸ್ ನೀಡಿಲ್ಲ. ಒಂದು ವೇಳೆ ನಮ್ಮ ಸಂಸ್ಥೆಗೆ ಭೇಟಿ ನೀಡಿ, ಪರಿಶೀಲನೆ ಮಾಡಿದರೆ ಅದನ್ನು ಸ್ವಾಗತಿಸುತ್ತೇವೆ. ಯಾವುದೇ ತಪ್ಪು ಮಾಡದಿರುವಾಗ ನಾವೇಕೆ ಹೆದರಬೇಕು ಎಂದು ಸ್ಟ್ಯಾನ್ಲಿ ಹೇಳಿದರು.
ಜಾರಿ ನಿರ್ದೇಶನಾಲಯದವರು ಫೆಮಾ ಮತ್ತು ಫೆರಾ ಕಾಯ್ದೆಯಡಿ ಒಡನಾಡಿ ಮತ್ತು ಸಂವಾದ ಸಂಸ್ಥೆಗಳ ಹಣಕಾಸು ವ್ಯವಹಾರದ ಬಗ್ಗೆ ತನಿಖೆ ನಡೆಸುತ್ತಿದೆ ಎನ್ನಲಾಗಿದೆ. ಈ ಎನ್‌ಜಿಒಗಳ ಐದು ವರ್ಷದ ಬ್ಯಾಂಕ್ ವ್ಯವಹಾರ ಸೇರಿದಂತೆ ಇತರೆ ಆದಾಯ ಮೂಲವನ್ನು ಕೆದಕುತ್ತಿದೆ ಎಂದು ತಿಳಿದು ಬಂದಿದೆ.
ಆದರೆ ಈ ಆರೋಪವನ್ನು ಸಾರಾ ಸಗಟಾಗಿ ತಿರಸ್ಕರಿಸಿರುವ ಸ್ಟ್ಯಾನ್ಲಿ, ಯಾವ ಉದ್ದೇಶಕ್ಕೆ ವಿದೇಶಿ ದೇಣಿಗೆ ನೀಡಲಾಗಿದೆಯೋ ಅದಕ್ಕೆ ಮಾತ್ರ ಬಳಸುತ್ತಿದ್ದೇವೆ. ಈ ಮೂಲಕ ವಿದೇಶಿ ದೇಣಿಗೆಯನ್ನು ನಾವು ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ದೇಶದಲ್ಲಿ ಅನ್ಯಾಯ ನಡೆಯುವಾಗ ನ್ಯಾಯ ಕೇಳಿದರೆ ಅಂತಿಮವಾಗಿ ಧರ್ಮ ದಂಗಲ್ ನಡೆಸಲಾಗುತ್ತದೆ. ಜಾತೀಯತೆಯ ಬಣ್ಣ ಕಟ್ಟುತ್ತಾರೆ. ಆದರೆ ನಾವು ಯಾರ ಪರ ಅಥವಾ ಯಾರ ವಿರುದ್ಧವೂ ಇಲ್ಲ. ಅನ್ಯಾಯಕ್ಕೊಳಗಾದ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸುವುದೇ ನಮ್ಮ ಮೂಲ ಉದ್ದೇಶ ಎಂದು ಹೇಳಿದರು.
Comments are closed.