Swine flu: ಆಫ್ರಿಕನ್ ಹಂದಿ ಜ್ವರದ ಭೀತಿ – 50-60 ಸತ್ತ ಹಂದಿಗಳನ್ನು ಕೆರೆಗೆ ಎಸೆದ ಫಾರ್ಮ್ ಮಾಲೀಕ

Share the Article

Swine flu: ಚಿಕ್ಕಬಳ್ಳಾಪುರದಾದ್ಯಂತ ಹಂದಿ ಜ್ವರದ ಭೀತಿ ಎದುರಾಗಿದೆ. ಆರೋಗ್ಯ ಇಲಾಖೆ ಈ ಬಗ್ಗೆ ಹೆಚ್ಚಿನ ಕ್ರಮಗಳನ್ನು ಕೈಗೊಂಡಿದ್ದು, ಜ್ವರ ಇರುವ ಹಂದಿಗಳನ್ನು ಹಾಗೂ ಅದರ ಜೊತೆ ಇದ್ದ ಹಂದಿಗಳನ್ನು ಸಾಯುಸುವ ವ್ಯವಸ್ಥೆಯನ್ನು ಮಾಡುತ್ತಿದೆ. ಆದರೆ ಈ ಮಧ್ಯೆ, ಚಿಂತಾಮಣಿ ತಾಲೂಕಿನ ಹೆಬ್ಬರಿ ಗ್ರಾಮದಲ್ಲಿ ಫಾರ್ಮ್ ನಡೆಸುತ್ತಿದ್ದ ಮಾಲೀಕರೊಬ್ಬರು 50-60 ಸತ್ತ ಹಂದಿಗಳನ್ನು ಕೆರೆಗೆ ಎಸೆದ ಘಟನೆ ನಡೆದಿದೆ.

ಆಫ್ರಿಕನ್ ಹಂದಿ ಜ್ವರದ ಭೀತಿಯ ನಡುವೆಯೇ ಇದು ಬೆಳಕಿಗೆ ಬಂದಿದೆ. ವೈದ್ಯರ ತಂಡ ಶುಕ್ರವಾರ ಹೆಬ್ಬರಿ ಗ್ರಾಮಕ್ಕೆ ಆಗಮಿಸಿ ಜನರನ್ನು ಪರೀಕ್ಷಿಸಿದೆ. “ಗ್ರಾಮಸ್ಥರಿಗೆ ಜ್ವರದ ಲಕ್ಷಣ ಕಂಡುಬಂದಿಲ್ಲ. ಆದರೆ, ಮುಂದಿನ ಒಂದು ವಾರ ಗ್ರಾಮಸ್ಥರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುವುದು”. ಗ್ರಾಮದಲ್ಲಿ 206 ಮನೆಗಳಿದ್ದು, ಸುಮಾರು 700 ಜನಸಂಖ್ಯೆ ಇದೆ. ಈ ಗ್ರಾಮವು ಕೆರೆಯಿಂದ 3 ಕಿ.ಮೀ ದೂರದಲ್ಲಿದ್ದರೂ, ಜನರಿಗೆ ಇದರಿಂದ ಯಾವುದೇ ಸಮಸ್ಯೆ ಆಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು DHO ಡಾ. ಎಸ್.ಎಸ್.ಮಹೇಶ್ ಹೇಳಿದರು.

ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಹಸ್ಬೆಂಡರಿ ಮತ್ತು ವೆಟರ್ನರಿ ಬಯೋಲಾಜಿಕಲ್ (IAH and VB) ಪ್ರಕಾರ ಇದು ಹಂದಿ ಜ್ವರ ಬಂದ ಹಂದಿಗಳೆಂದು ದೃಢಪಡಿಸಿದೆ. ಅಲ್ಲದೆ, ವೆಂಕಟರೆಡ್ಡಿ ಮಾಲೀಕತ್ವದ ಜಮೀನಿನಲ್ಲಿ ಅಧಿಕಾರಿಗಳ ತಂಡ ತಂಗಿದ್ದು, ಫಾರ್ಮ್‌ನಲ್ಲಿದ್ದ ಎಲ್ಲಾ ಹಂದಿಗಳನ್ನು ಕೊಂದು ಸರ್ಕಾರದ ನಿಯಮಗಳ ಪ್ರಕಾರ ವಿಲೇವಾರಿ ಮಾಡಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ರಂಗಪ್ಪ ಮಾಹಿತಿ ನೀಡಿದ್ದಾರೆ.

ವೆಂಕಟರೆಡ್ಡಿ, ಸೋಂಕು ತಗುಲಿ ಸಾವನ್ನಪ್ಪಿದ್ದ ಹಂದಿಗಳ ಶವವನ್ನು ಕೆರೆಗೆ ಎಸೆದಿದ್ದರು. ಮೃತದೇಹಗಳು ಕೊಳೆತು ದುರ್ವಾಸನೆ ಬೀರುವಾಗ ಗ್ರಾಮಸ್ಥರು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ನಂತರ ಹಂದಿಗಳ ಮಾದರಿಗಳನ್ನು ಸಂಗ್ರಹಿಸಿ IAH ಮತ್ತು VB ಗೆ ಕಳುಹಿಸಿ, ಇದು ಆಫ್ರಿಕನ್ ಜ್ವರ ಎಂದು ಲ್ಯಾಬ್ ವರದಿ ನೀಡಿದೆ ಎಂದು ರಂಗಪ್ಪ ತಿಳಿಸಿದರು.

ಇದೀಗ ಅಧಿಕಾರಿಗಳು ನೇತೃತ್ವದಲ್ಲಿ ಕೆರೆಯನ್ನು ಸ್ವಚ್ಛಗೊಳಿಸಿ ಕ್ಲೋರಿನೇಷನ್ ಮಾಡಲಾಗಿದ್ದು, ಮುಂದಿನ ಸೂಚನೆ ಬರುವವರೆಗೂ ಕೆರೆಯ ನೀರನ್ನು ಯಾವುದೇ ಕಾರಣಕ್ಕೂ ಬಳಸದಂತೆ ಕಂದಾಯ ಅಧಿಕಾರಿಗಳು ನಾಮಫಲಕ ಅಳವಡಿಸಿ ನಿಗ ವಹಿಸಿದ್ದಾರೆ. ವೆಂಕಟ ರೆಡ್ಡಿ ವಿರುದ್ಧ ದೂರು ದಾಖಲಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಹಾಗೂ ಕೆರೆ ಸ್ವಚ್ಛತೆ ಬಗ್ಗೆ ಮೀನುಗಾರಿಕೆ ಇಲಾಖೆ ಮತ್ತಿತರ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ರಂಗಪ್ಪ ತಿಳಿಸಿದ್ದಾರೆ.

Stampede: RCB: ಕಾಲ್ತುಳಿತದ ಸಂತ್ರಸ್ತರ ಕುಟುಂಬಗಳಿಗೆ 25 ಲಕ್ಷ ರೂ. ನೀಡಿದ RCB!

Comments are closed.