Physical Asult: ರಾಜ್ಯದಲ್ಲಿ 2 ವರ್ಷಗಳಲ್ಲಿ ಬರೋಬ್ಬರಿ 1,888 ಅತ್ಯಾ*ಚಾರ ಪ್ರಕರಣಗಳು ದಾಖಲು – ಶಿಕ್ಷೆಯಾದ ಪ್ರಕರಣಗಳ ಲೆಕ್ಕ ನೋಡಿದ್ರೆ ಬೆಚ್ಚಿ ಬೀಳ್ತೀರಿ!

Share the Article

Physical Asult: ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಲೈಂಗಿಕ ದೌರ್ಜನ್ಯ, ಗಂಡನಿಂದ ಕಿರುಕುಳ ಪ್ರಕರಣಗಳ ಸಂಖ್ಯೆ ಯಾವುದೇ ರೀತಿಯಲ್ಲಿ ಕಡಿಮೆಯಾಗುತ್ತಿಲ್ಲ. ರಾಜ್ಯದಲ್ಲಿ ಪ್ರತಿದಿನ ಸರಾಸರಿ 3 ಅತ್ಯಾಚಾರ ಪ್ರಕರಣಗಳು ಮತ್ತು ಪ್ರತಿದಿನ ಸರಾಸರಿ 16 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವಾಗುತ್ತಿದೆ ಎಂದು ಗೃಹ ಇಲಾಖೆ ನೀಡಿದ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.

ಕಳೆದ ಎರಡೂವರೆ ವರ್ಷಗಳಲ್ಲಿ ದಾಖಲಾಗಿರುವ 1,888 ಅತ್ಯಾಚಾರ ಪ್ರಕರಣಗಳಲ್ಲಿ 2,143 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ, ಆದರೆ ಶಿಕ್ಷೆಯ ಪ್ರಮಾಣ ಮಾತ್ರ ಶೂನ್ಯ ಎಂಬುದು ಗಮನಾರ್ಹ. ದಾಖಲಾಗುವ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತೆಯ ಸಂಬಂಧಿ ಅಥವಾ ಪರಿಚಯಸ್ಥರು ಎಂದು ವರದಿ ಹೇಳಿದೆ.

2025ರ ಜುಲೈ ತಿಂಗಳ ಕೊನೆಗೆ ರಾಜ್ಯದಲ್ಲಿ 549 ಪ್ರಕರಣಗಳಲ್ಲಿ 407 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 2024ರಲ್ಲಿ 739 ಪ್ರಕರಣಗಳಿಂದ 969 ಹಾಗೂ 2023ರಲ್ಲಿ 600 ಪ್ರಕರಣಗಳಿಂದ 767 ಮಂದಿ ಆರೋಪಿಗಳನ್ನು ಬಂಧನ ಮಾಡಲಾಗಿತ್ತು. ಸದ್ಯ ಒಟ್ಟು ದಾಖಲಾಗಿರುವ 1,888 ಪ್ರಕರಣಗಳಲ್ಲಿ 2,143 ಮಂದಿ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಇದರಲ್ಲಿ 83 ಪ್ರಕರಣಗಳು ಖುಲಾಸೆಗೊಂಡಿದ್ದು, ಇನ್ನುಳಿದ ಪ್ರಕರಣಗಳು ವಿಚಾರಣೆಯ ಹಂತದಲ್ಲಿದೆ ಎಂದು ಗೃಹ ಇಲಾಖೆ ನೀಡಿದ ಅಂಕಿ-ಅಂಶದಿಂದ ತಿಳಿದು ಬಂದಿದೆ.

ಲೈಂಗಿಕ ಕಿರುಕುಳ ಮತ್ತು ಗಂಡನಿಂದ ಕಿರುಕುಳ ಪ್ರಕರಣ ಸಂಖ್ಯೆಯಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಬರೋಬ್ಬರಿ 16,273 ಪ್ರಕರಣಗಳಲ್ಲಿ 19,312 ಆರೋಪಿಗಳನ್ನು ಬಂಧನ ಮಾಡಲಾಗಿದೆ. ದಿನಕ್ಕೆ ಸರಾಸರಿ 16 ಮಂದಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಇದರಲ್ಲಿ ಪೊಲೀಸರು ಕೇವಲ 189 ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ವೇಳೆ ಪತಿಯಿಂದ ಪತ್ನಿಗೆ ಕಿರುಕುಳ ಪ್ರಕರಣಗಳು ಕೂಡ ದಾಖಲಾಗಿವೆ. ಇದರಲ್ಲೂ ಎರಡೂವರೆ ವರ್ಷಗಳಲ್ಲಿ 7,516 ಕೇಸ್ಗಳು ದಾಖಲಾಗಿದೆ. ಇದರಲ್ಲಿ 7,930 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರತಿನಿತ್ಯ 8 ಕೇಸ್ಗಳು ಗಂಡನಿಂದ ಪತ್ನಿಗೆ ಕಿರುಕಳ ಪ್ರಕರಣಗಳು ವರದಿಯಾಗುತ್ತಿವೆ. ಇದರಲ್ಲಿ ಒಟ್ಟು 16 ಮಂದಿ ಅಪರಾಧಿಗಳಿಗೆ ಮಾತ್ರ ಈ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಇನ್ನುಳಿದ ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆಚ್ಚಾಗಿ ಅತ್ಯಾಚಾರ ಆರೋಪಿಗಳು ಸಂತ್ರಸ್ತೆಗೆ ಸಂಬಂಧಿಗಳು ಹಾಗೂ ಪರಿಚಯಸ್ಥರಾಗಿರುತ್ತಾರೆ. ಅಲ್ಲದೆ ಹದಿ ಹರೆಯದ ಯುವ ಜೋಡಿಗಳು ಮದುವೆಯಾಗುವುದಾಗಿ ನಂಬಿಸಿ ಒಟ್ಟಿಗೆ ಸುತ್ತಾಡುವ ಜೊತೆಗೆ ದೈಹಿಕ ಸಂಪರ್ಕ ನಂತರ ವಿವಾಹವಾಗದೆ, ದೂರಾಗುವ ಪ್ರಸಂಗಗಳು ಜಾಸ್ತಿಯಾಗುತ್ತಿದೆ. ನಂತರ ಠಾಣೆಗೆ ಹೋಗಿ ಸಂತ್ರಸ್ತೆ ಪ್ರೇಮಿಯ ವಿರುದ್ಧ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ನೀಡುವುದು ಈ ವರ್ಷಗಳಲ್ಲಿ ಸಾಮಾನ್ಯವಾಗಿದೆ.

ಸಿನಿಮಾ ಹಾಗೂ ಸಾಮಾಜಿಕ ಜಾಲತಾಣಗಳಿಂದ ಪ್ರೇರೆಪಿತರಾಗಿ ಆನ್ಲೈನ್ ಮೂಲಕ ಸಂಪರ್ಕವಾಗಿ, ಆರಂಭವಾಗುವ ಸ್ನೇಹ ಕಾಲ ಕ್ರಮೇಣ ಆತ್ಮೀಯತೆಗೆ ತಿರುಗಿ ನಂತರ ಸಂಬದ್ದ ಕೃತ್ಯಗಳಲ್ಲಿ ಯುವ ಸಮುದಾಯ ಭಾಗಿಯಾಗುತ್ತಿವೆ. ದಾಖಲಾಗಿರುವ ಅತ್ಯಾಚಾರ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ ಸಿಂಹಪಾಲು. ಇಂಥ ಪ್ರಕರಣಗಳ ತಡೆಗೆ ಸೇಫ್ ಸಿಟಿ ಯೋಜನೆಯಡಿ ಕೇಂದ್ರದ ಸಹಭಾಗಿತ್ವದೊಂದಿಗೆ ರಾಜ್ಯ ಸರ್ಕಾರ ನಗರದ 3000 ಸ್ಥಳಗಳಲ್ಲಿ 7,500 ಸಿಸಿಟಿವಿ ಕ್ಯಾಮರಾಗಳನ್ನು 496.57 ಕೋಟಿ ವೆಚ್ಚದಲ್ಲಿ ಅಳವಡಿಸಿದೆ. ಇನ್ನು ಮುಂದುವರೆದು ಹೆಚ್ಚುವರಿ 635 ಕೋಟಿ ರೂ. ವೆಚ್ಚದಲ್ಲಿ 1,376 ಕ್ಯಾಮರಾ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ.

Comments are closed.