Mysore Dasara: ದಸರಾ ಗಜಪಡೆ ಮಾವುತರು, ಕಾವಾಡಿಗರ ಮಕ್ಕಳಿಗೆ ತಾತ್ಕಾಲಿಕ ಶಾಲೆ ಪ್ರಾರಂಭ – ಅಕ್ಷರ ದಾಸೋಹದಿಂದ ಮಧ್ಯಾಹ್ನದ ಬಿಸಿಯೂಟ

Share the Article

Mysore Dasara: ದಸರಾ ಮಹೋತ್ಸವದ ಗಜಪಡೆಯೊಂದಿಗೆ ಬಂದು, ಅರಮನೆ ಆವರಣ ದಲ್ಲಿ ಬೀಡು ಬಿಟ್ಟಿರುವ ಮಾವುತರು, ಕಾವಾಡಿಗರ ಮಕ್ಕಳಿಗೆ ಶಿಕ್ಷಣ ಮುಂದುವರೆಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಗಜಪಡೆ ಬಿಡಾರದ ಬಳಿ ಟೆಂಟ್ ಶಾಲೆ ಆರಂಭಿಸಿದ್ದು, ಮೊದಲ ದಿನವೇ 20 ಮಕ್ಕಳು ಹಾಜರಾಗಿ ಪಾಠ-ಪ್ರವಚನ ಆಲಿಸಿದರು.

ಈ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆ4ರಂದು ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ ಮೊದಲ ತಂಡದ 9 ಆನೆಗಳ ಮಾವುತರು, ಕಾವಾಡಿಗರ ಕುಟುಂಬ ಅರಮನೆ ಆವರಣದಲ್ಲಿ ಬೀಡು ಬಿಟ್ಟಿದೆ. ಶಾಲೆ ಬಿಟ್ಟು ಪೋಷಕರೊಂದಿಗೆ ಬಂದಿರುವ ಮಕ್ಕಳು ಪಠ್ಯಕ್ರಮದ ಕಲಿಕೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕಳೆದ ಹಲವು ವರ್ಷಗಳಿಂದ ಆನೆ ಬಿಡಾರದ ಬಳಿ ಟೆಂಟ್ ಶಾಲೆ ವ್ಯವಸ್ಥೆ ಮಾಡುತ್ತಾ ಬರಲಾಗಿದೆ. ಕಳೆದ ನಾಲೈದು ವರ್ಷದಿಂದ ಟೆಂಟ್ ಶಾಲೆ, ತಾತ್ಕಾಲಿಕ ಶಾಲೆಯಾಗಿ ಮಾರ್ಪಟ್ಟಿದೆ. ಈ ಸಾಲಿನ ತಾತ್ಕಾಲಿಕ ಶಾಲೆ ಔಪಚಾರಿಕವಾಗಿ ಇಂದಿನಿಂದ ಆರಂಭವಾಗಿದೆ.

ಸಾಮಾನ್ಯವಾಗಿ ದಸರಾ ಗಜಪಡೆ ಮಾವುತರು, ಕಾವಾಡಿಗರ ಮಕ್ಕಳು ನಾಚಿಕೆ ಸ್ವಭಾವದವರಾಗಿದ್ದು, ನಗರ ನಿವಾಸಿಗಳು, ಅಪರಿಚಿತರೊಂದಿಗೆ ಬೆರೆಯು ವುದಿಲ್ಲ. ಅದರಲ್ಲೂ ಟೆಂಟ್ ಶಾಲೆಗೆ ಕಲಿಯಲು ಬನ್ನಿ ಎಂದರೂ ಮಕ್ಕಳು ಬರುತ್ತಿರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾವುತರು, ಕಾವಾಡಿಗರ ಮಕ್ಕಳು ತಾತ್ಕಾಲಿಕ ಶಾಲೆಗೆ ಬರಲು ಆಸಕ್ತಿ ತೋರುತ್ತಿದ್ದಾರೆ. ಈ ಸಾಲಿನ ತಾತ್ಕಾಲಿಕ ಶಾಲೆಗಾಗಿ ಮೀಸಲಿಟ್ಟಿರುವ ಟೆಂಟ್‌ನಲ್ಲಿ ಶಿಕ್ಷಕರು ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಬೇಕಾದ ಫಲಕ(ಚಾರ್ಟ್) ಅಳವಡಿಸುತ್ತಿದ್ದಂತೆಯೇ 1ರಿಂದ 9ನೇ ತರಗತಿಯ 20 ಮಕ್ಕಳು ಸ್ವಯಂಪ್ರೇರಣೆಯಿಂದ ಪಾಠ ಕಲಿಯುವ ಆಸಕ್ತಿ ಪ್ರದರ್ಶಿಸಿದರು.

ಮೂವರು ಶಿಕ್ಷಕಿಯರ ನಿಯೋಜನೆ: ಮಾವುತರು, ಕಾವಾಡಿಗರ ಮಕ್ಕಳ ತಾತ್ಕಾಲಿಕ ಶಾಲೆಗೆ ಮೂವರು ಶಿಕ್ಷಕಿಯರ ನಿಯೋಜಿಸಲಾಗಿದೆ. ಡಿಡಿಪಿಐ ಜವರೇ ಗೌಡ ಮಾರ್ಗದರ್ಶನದಲ್ಲಿ ದಕ್ಷಿಣ ವಲಯ ಬಿಇಒ ಎಂ.ಆರ್.ಅನಂತರಾಜು, ಬಿಆರ್‌ಸಿ ಎಂ.ಬಿ.ಶ್ರೀಕಂಠ ಸ್ವಾಮಿ ನೇತೃತ್ವದಲ್ಲಿ ಶಾಲೆ ನಡೆಯಲಿದ್ದು, ಅದಕ್ಕಾಗಿ ದಕ್ಷಿಣ ಬಿಇಓ ಕಚೇರಿ ವತಿಯಿಂದ ವಿದ್ಯಾರಣ್ಯಪುರಂನ ರೆಹಮಾನಿಯಾ ಉರ್ದು ಶಾಲೆಯ ಶಿಕ್ಷಕಿ ನೂರ್ ಫಾತಿಮ, ಕುಕ್ಕರಹಳ್ಳಿ ಶಾಲೆಯ ದಿವ್ಯ ಪ್ರಿಯದರ್ಶಿನಿ, ಚಾಮುಂಡಿಪುರ ಎಎಂವಿ ಬಾಲಬೋಧಿನಿ ಶಾಲೆಯ ಮೋಸಿನ್ ತಾಜ್ ಅವರನ್ನು ಇಲ್ಲಿಗೆ ನಿಯೋಜಿಸಲಾಗಿದೆ.

ನಲಿ-ಕಲಿಗೆ ಆದ್ಯತೆ: ಕಾಡಿನ ಸುಂದರ ಪರಿಸರದ ಮಾವುತರು, ಕಾವಾಡಿಗರ ಮಕ್ಕಳಿಗೆ ಸಾಮಾನ್ಯ ಶೈಲಿಯಲ್ಲಿ ಪಾಠ ಮಾಡಿದರೆ ಮನಮುಟ್ಟುವುದಿಲ್ಲ. ಹಾಗಾಗಿ ಶಿಕ್ಷಣ ಇಲಾಖೆ ನಲಿ-ಕಲಿ ವಿಧಾನದ ಮೂಲಕ ವಿವಿಧ ಫಲಕ(ಚಾರ್ಟ್) ಪ್ರದರ್ಶಿಸಿ, ಪಾಠ ಕಲಿಸಲಾಗುತ್ತದೆ.

ಮಕ್ಕಳು ತಮ್ಮ ಶಾಲೆಯನ್ನು ಬಿಟ್ಟು ಪೋಷಕ ಗಜಪಡೆಯ ಮಾವುತರು, ಕಾವಾಡಿಗರ ರೊಂದಿಗೆ ಬಂದಿದ್ದಾರೆ. ಆ ಮಕ್ಕಳು ಪಠ್ಯಕ್ರಮ ದಿಂದ ದೂರವುಳಿದು, ಶಿಕ್ಷಣದಲ್ಲಿ ಹಿನ್ನಡೆ ಅನುಭವಿಸಬಾರದೆಂದು ತಾತ್ಕಾಲಿಕ ಶಾಲೆ ಆರಂಭಿಸಲಾಗಿದೆ. ಮಕ್ಕಳಿಗೆ ಇಲಾಖೆ ವತಿಯಿಂದ ಸಮವಸ್ತ್ರ, ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಮೂವರು ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಈ ವಾರ ದೊಳಗೆ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕೃತವಾಗಿ ತಾತ್ಕಾಲಿಕ ಶಾಲೆಯನ್ನು ಉದ್ಘಾಟಿಸಲಿದ್ದಾರೆ.

ಅಕ್ಷರ ದಾಸೋಹದಿಂದ ಊಟ: ತಾತ್ಕಾಲಿಕ ಶಾಲೆಗೆ ಬರುವ ಗಜಪಡೆಯ ಮಾವುತರು, ಕಾವಾಡಿಗರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ. ಅಕ್ಷರ ದಾಸೋಹ ಯೋಜನೆಯಡಿ ಇಸ್ಕಾನ್ ಸಂಸ್ಥೆ ಪೂರೈಸುವ ಮಧ್ಯಾಹ್ನದ ಬಿಸಿಯೂಟ ಮಾವುತರು, ಕಾವಾಡಿಗರ ಮಕ್ಕಳಿಗೂ ಸರಬರಾಜು ಮಾಡಲಾಗುತ್ತದೆ.

ಎರಡನೇ ತಂಡದೊಂದಿಗೆ ಮತ್ತಷ್ಟು ಮಕ್ಕಳು: ಗಜಪಡೆಯ ಎರಡನೇ ತಂಡದಲ್ಲಿ ಆ.25ರಂದು ಆಗಮಿಸುವ 5 ಆನೆಗಳು ಮಾವುತರು, ಕಾವಾಡಿಗರ ಮಕ್ಕಳೂ ಸೇರಿದಂತೆ ಇನ್ನಷ್ಟು ಮಕ್ಕಳು ಅರಮನೆಗೆ ಆಗಮಿಸಲಿದ್ದು, ಈ ಬಾರಿ 40 ಮಕ್ಕಳು ತಾತ್ಕಾಲಿಕ ಶಾಲೆಯಲ್ಲಿ ಕಲಿಯುವ ಸಾಧ್ಯತೆ ಇದೆ. ಇದಕ್ಕಾಗಿ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

Bandipura Forest: ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಬಂಡೀಪುರ ಅರಣ್ಯ – ತುಂಬಿ ಹರಿಯುತ್ತಿವೆ ಕೆರೆ-ಕಟ್ಟೆಗಳು, ಸ್ವಚ್ಚಂದವಾಗಿ ಓಡಾಡುತ್ತಿರುವ ವನ್ಯ ಜೀವಿಗಳ

Comments are closed.