Mysore Dasara: ದಸರಾ ಮಹೋತ್ಸವ – ಎಲ್ಲಾ ಫಲಕ, ಮುದ್ರಿತ ಸಾಮಗ್ರಿಗಳು ಶೇ.60ರಷ್ಟು ಕನ್ನಡದಲ್ಲಿರಲಿ – ಜಿಲ್ಲಾಡಳಿತ, ಸರ್ಕಾರಕ್ಕೆ ಕನ್ನಡ ಕ್ರಿಯಾ ಸಮಿತಿ ಆಗ್ರಹ

Mysore Dasara: ದಸರಾ ಮಹೋತ್ಸವದಲ್ಲಿ ಎಲ್ಲಾ ಫಲಕಗಳು, ಮುದ್ರಿತ ಸಾಮಗ್ರಿಗಳು, ಪಾಸ್‌ಗಳು, ಬ್ಯಾಡ್ಜ್‌ಗಳು ರಾಜ್ಯ ಭಾಷಾ ಅಧಿನಿಯಮದಂತೆ ಶೇ.60ರಷ್ಟು ಕನ್ನಡ ಭಾಷೆಯಲ್ಲಿಯೇ ಇರುವಂತೆ ಕ್ರಮ ವಹಿಸಲು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಕನ್ನಡ ಕ್ರಿಯಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಮೈಸೂರಿನ ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆ ಸಭಾಂಗಣದಲ್ಲಿ ಕನ್ನಡ ಕ್ರಿಯಾ ಸಮಿತಿ ವತಿಯಿಂದ ರಾಜ್ಯದಲ್ಲಿ ಕನ್ನಡ ಭಾಷೆಯ ಬಳಕೆ ಹಾಗೂ ಬೆಳವಣಿಗೆ ಕುರಿತು ಗುರುವಾರ ಹಮ್ಮಿಕೊಂಡಿದ್ದ ಸಮಿತಿ ಪದಾಧಿಕಾರಿಗಳು ಹಾಗೂ ಕನ್ನಡ ಭಾಷಾಭಿಮಾನಿಗಳ ಸಭೆಯಲ್ಲಿ ಈ ನಿರ್ಣಯ ಸೇರಿದಂತೆ ಹಲವು ನಿರ್ಣಯಗಳನ್ನು ಮಾಡಲಾಯಿತು.
ರಾಜ್ಯ ಭಾಷೆಯಾದ ಕನ್ನಡವನ್ನು ಪೂರ್ವ ಪ್ರಾಥಮಿಕದಿಂದ 12ನೇ ತರಗತಿವರೆಗೂ ಕಡ್ಡಾಯವಾಗಿ ಪ್ರಥಮ ಭಾಷೆಯಾಗಿ ವಿದ್ಯಾರ್ಥಿಗಳಿಗೆ ಕಲಿಸಬೇಕು. ಸಂವಹನ ಭಾಷೆಯಲ್ಲದೇ ಯಾವುದೇ ಭಾಷೆ ಪ್ರಥಮ ಭಾಷೆಯಾಗಬಾರದು. ಈ ಕುರಿತು ಸಂಬಂಧಿಸಿದವರ ಗಮನ ಸೆಳೆಯಲು ನಿರ್ಧಾರ ಕೈಗೊಳ್ಳಲಾಯಿತು. ಸಂಚಾರ ನಿಯಮಕ್ಕೆ ಸಂಬಂಧಿಸಿದ ಫಲಕಗಳು, ಅಡ್ಡಗಟ್ಟೆ (ಬ್ಯಾರಿಕೇಡ್) ಗಳಲ್ಲಿ ಪೊಲೀಸ್ ಇಲಾಖೆಯು ಕಡ್ಡಾಯವಾಗಿ ಕನ್ನಡ ಬಳಸಬೇಕು. ಅಂತೆಯೇ ಮೈಸೂರು ಮಹಾನಗರ ಪಾಲಿಕೆ ಸಹ ನಗರದಲ್ಲಿ ಅಳವಡಿಸುವ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು. ಈ ಕುರಿತು ಸಂಬಂಧಿಸಿದವರನ್ನು ಭೇಟಿ ಮಾಡಿ ಒತ್ತಾಯಿಸಲು ನಿರ್ಣಯಿಸಲಾಯಿತು.
ಸರ್ಕಾರಿ ವಾಹನಗಳಲ್ಲಿ ಹಿಂದಿನಂತೆ ಇಂಗ್ಲಿಷ್ ಸಂಖ್ಯಾ ಫಲಕದ ಜೊತೆಗೆ ಕನ್ನಡ ಅಂಕಿಗಳನ್ನು ಬಳಸಬೇಕು. ಸಾರ್ವಜನಿಕ ವಾಹನಗಳಲ್ಲೂ ಕನ್ನಡ ಅಂಕಿ ಬಳಸಲು ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಪ್ರಾಧಿಕಾರದ ಗಮನ ಸೆಳೆಯಲು ನಿರ್ಧರಿಸಲಾಯಿತು. ಸಹಕಾರ ಸಂಘಗಳು ಬ್ಯಾಂಕುಗಳಲ್ಲಿ ಇತ್ತೀಚೆಗೆ ಬಳಕೆಯನ್ನು ಕಡಿಮೆ ಮಾಡಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಹಕಾರ ಇಲಾಖೆ ಗಮನ ಸೆಳೆಯಲು ನಿರ್ಧರಿಸಲಾಯಿತು.
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಕನ್ನಡ ಬಳಸುವ ಬಗ್ಗೆ ಜಾಗೃತಿ ಮೂಡಿಸಲು ‘ಕನ್ನಡ ಬಳಸಿ ಸಂವಾದ’ ಕಾರ್ಯಕ್ರಮವನ್ನು ಕನ್ನಡ ಕ್ರಿಯಾ ಸಮಿತಿಯಿಂದ ಕನಿಷ್ಠ ಎರಡು ತಿಂಗಳಿಗೊಮ್ಮೆ ಏರ್ಪಡಿಸಲು ನಿರ್ಧರಿಸಲಾಯಿತು. ಇದೇ ವೇಳೆ ಈಗಿರುವ ಪದಾಧಿಕಾರಿಗಳ ಜೊತೆಗೆ ಕನ್ನಡ ಕ್ರಿಯಾ ಸಮಿತಿಗೆ ಸಂಚಾಲಕರಾಗಿ ಅರವಿಂದ ಶರ್ಮ ಅವರನ್ನು ನೇಮಿಸಲಾಯಿತು.
ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಮ.ಗು.ಸದಾ ನಂದಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಸ.ರ.ಸುದರ್ಶನ, ಹಿರಿಯ ಸಾಹಿತಿಗಳಾದ ಪ್ರೊ.ಕೆ.ಎಸ್.ಭಗವಾನ್, ಹೊರೆಯಾಲ ದೊರೆಸ್ವಾಮಿ, ಮುಖಂಡರಾದ ಜಿ.ಪ್ರಕಾಶ್, ಡಾ.ಕೆ.ಕಾಳ ಚನ್ನೇಗೌಡ, ಪಂಡಿತಾರಾಧ್ಯ, ಹೆಚ್.ಎನ್.ಲೋಕೇಶಪ್ಪ, ವಿ.ಆನಂದ, ಎಂ.ಮಂಜುನಾಥ್, ಜಯಕುಮಾರ್, ಬೋಗಾದಿ ಸಿದ್ದೇಗೌಡ, ಈ.ಧನಂಜಯ ಎಲಿಯೂರು ಮತ್ತಿತರರು ಭಾಗವಹಿಸಿದ್ದರು.
Comments are closed.