Glass Bridge: ಅವೈಜ್ಞಾನಿಕ ಗ್ಲಾಸ್ ಬ್ರಿಡ್ಜ್ ನಿರ್ಮಾಣ – ರಾಜಾಸೀಟು ಉಳಿಸಿ ಆಂದೋಲನದ ಎಚ್ಚರಿಕೆ

Glass Bridge: ಪ್ರಸಿದ್ಧ ಪ್ರವಾಸಿ ತಾಣ ರಾಜಾ ಸೀಟಿನಲ್ಲಿ ಅವೈಜ್ಞಾನಿಕವಾದ ಗ್ಲಾಸ್ ಬ್ರಿಡ್ಜ್ ನಿರ್ಮಿಸುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಜನರ ವಿರೋಧದ ನಡುವೆಯೂ ಯೋಜನೆ ಜಾರಿಗೆ ಮುಂದಾದಲ್ಲಿ ರಾಜಾಸೀಟು ಉಳಿಸಿ ಆಂದೋಲನಕ್ಕೆ ಮುಂದಾಗಬೇಕಾಗುತ್ತದೆ ಎಂದು ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಸಮಿತಿಯ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಎಚ್ಚರಿಕೆ ನೀಡಿದ್ದಾರೆ.

ಈ ನಾಡಿನ ಸುಂದರ ಪರಿಸರ, ವಿಶಿಷ್ಟ ಸಂಸ್ಕೃತಿ, ಪರಂಪರೆಗಳನ್ನು ಬದಿಗೆ ಸರಿಸಿ, ಗ್ಲಾಸ್ ಬ್ರಿಡ್ಜ್ ಯೋಜನೆಯನ್ನು ಜಾರಿಗೆ ತರಲು ಮುಂದಾಗಿರುವುದು ದುಡ್ಡು ಹೊಡೆಯುವ ಷಡ್ಯಂತ್ರವಾಗಿದೆ. ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದು ಯಾರೂ ಕನಸಿನಲ್ಲಿಯೂ ಯೋಚಿಸುವುದು ಬೇಡ ಎಂದು ಸ್ಪಷ್ಟಪಡಿಸಿದರು. ಕೇವಲ ಪ್ರವಾಸೋದ್ಯಮ ಅಭಿವೃದ್ಧಿಯ ನೆಪದಲ್ಲಿ ಇಂತಹ ಪರಿಸರ ವಿರೋಧಿ ಯೋಜನೆಗಳನ್ನು ಜಾರಿಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ. ಈಗಾಗಲೆ ಭಾಗಮಂಡಲ ರಸ್ತೆಯಲ್ಲಿ, ಅಬ್ಬಿಫಾಲ್ಸ್ ರಸ್ತೆಯಲ್ಲಿ ಗ್ಲಾಸ್ ಬ್ರಿಡ್‌ಗಳು ನಿರ್ಮಾಣವಾಗಿ ಪ್ರಸ್ತುತ ಸ್ಥಗಿತವಾಗಿದೆ. ಇವುಗಳು ಇರುವ ಪ್ರದೇಶಗಳಲ್ಲಿ ಪ್ರವಾಸಿಗರ ಬೀಡು, ವಾಹನಗಳ ದಟ್ಟಣೆಯಿಂದ ಆ ಪ್ರದೇಶಗಳಲ್ಲಿನ ಸ್ಥಳೀಯರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ತಿಳಿಸಿದರು.
ಯೋಜನೆಗೆ ರೂ. 15 ಕೋಟಿ : ರಾಜಾಸೀಟಿನಲ್ಲಿ ಉದ್ದೇಶಿತ
ಗ್ಲಾಸ್ ಬ್ರಿಡ್ಜ್ ಅಂದಾಜು 15 ಕೋಟಿ ರೂ. ವೆಚ್ಚದ್ದಾಗಿದೆ. ಕನಿಷ್ಟ ಮೂಲಭೂತ ಸೌಲಭ್ಯಗಳೇ ಇಲ್ಲದೆ ಇಂತಹ ಯೋಜನೆಗಳ ಜಾರಿಯ ಔಚಿತ್ಯವೇನು ಎಂದು ರವಿ ಕುಶಾಲಪ್ಪ ಪ್ರಶ್ನಿಸಿದರು. ನಾವೆಂದಿಗೂ ಅಭಿವೃದ್ಧಿಯ ವಿರೋಧಿಗಳಲ್ಲ. ಸಾಧ್ಯವಾದಲ್ಲಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲಿ. ಪರಿಶಿಷ್ಟ ಸಮುದಾಯದ ಕಾಲೋನಿಗಳ ಅಭಿವೃದ್ಧಿಗೆ ಮುಂದಾಗಲಿ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಗಳ ಸಂದರ್ಭ ಇದರ ಅಧ್ಯಯನಕ್ಕೆ ಬಂದಿದ್ದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ತಂಡ ಮಡಿಕೇರಿ, ಗಾಳಿಬೀಡು, ಗರ್ವಾಲೆ, ಮಾದಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೃಹತ್ ನಿರ್ಮಾಣ ಕಾಮಗಾರಿಗಳು ನಡೆಯಬಾರದು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಜಾಸೀಟಿನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯ ನೆಪದಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಬಾರದು ಎಂದು ರವಿ ಕುಶಾಲಪ್ಪ ಆಗ್ರಹಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಜಿ.ಪಂ ಮಾಜಿ ಸದಸ್ಯ ಡಿ.ಬಿ.ಧರ್ಮಪ್ಪ, ಜಿಲ್ಲಾ ವೀರಶೈವ ಲಿಂಗಾಯಿತ ಮಹಾ ಸಭಾದ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಪ್ರಧಾನ ಕಾರ್ಯದರ್ಶಿ ಸಾಂಭಶಿವಯ್ಯ, ಖಜಾಂಚಿ ಹೆಚ್.ಬಿ.ಉದಯ ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Comments are closed.