

BUS STRIKE: ಸರಕಾರ ಹಾಗೂ ಸಾರಿಗೆ ನಿಗಮ ನೌಕರರ ನಡುವೆ ಸಂಘರ್ಷ ತಾರಕಕ್ಕೇರಿದೆ. ನೌಕರರ ವೇತನ ಪರಿಷ್ಕರಣೆ- ಹಿಂಬಾಕಿ ವೇತನಕ್ಕೆ ಒಪ್ಪದ ರಾಜ್ಯ ಸರಕಾರದ, ಮನವೊಲಿಕೆಗೂ ರಾಜ್ಯ ಸಾರಿಗೆ ನೌಕರರು ಪಟ್ಟು ಸಡಿಲಿಸಲಿಲ್ಲ. ವೇತನ ಪರಿಷ್ಕರಣೆ ಹಾಗೂ ವೇತನ ಹಿಂಬಾಕಿ ನೀಡುವವರೆಗೆ ಮುಷ್ಕರ ವಾಪಸ್ ಇಲ್ಲ ಎಂದು ಎಚ್ಚರಿಸಿದ್ದಾರೆ.
ಮುಷ್ಕರ ಕೈಬಿಡಿ ಪ್ರಯಾಣಿಕರಿಗೆ ತೊಂದರೆ ಕೊಡಬೇಡಿ ಅಂತ ಸರ್ಕಾರ ಮನವಿ ಮಾಡಿದ್ರು, ರಾಜ್ಯ ಸಾರಿಗೆ ನೌಕರರು ಡೋಂಟ್ ಕೇರ್ ಅನ್ನದೆ, ಬಸ್ ಗಳನ್ನ ಡಿಪೋಗಳಲ್ಲೇ ನಿಲ್ಲಿಸಿ ಸಾರಿಗೆ ನೌಕರರ ಮುಷ್ಕರ ಮುಂದುವರೆಸಿದ್ದಾರೆ. ಸರ್ಕಾರ ಬೇಡಿಕೆ ಈಡೇರಿಸುವರೆಗೂ ನೌಕರರು ಕರ್ತವ್ಯಕ್ಕೆ ಹಾಜಾರಾಗೋದು ಅನುಮಾನ ಎಂದು ಹೇಳಲಾಗುತ್ತಿದ್ದು, ಸಮಯ ಕಳೆಯುತ್ತಿದ್ದಂತೆ ಬಿಎಂಟಿಸಿ ಬಸ್ ಗಳ ಸಂಚಾರ ಕಡಿಮೆಯಾಗ್ತಿದೆ. ಅಲ್ಲದೆ ಕಡಿಮೆ ಬಸ್ ಹಿನ್ನಲೆ ಬಿಎಂಟಿಸಿ ಬಸ್ ನಲ್ಲಿ ಫುಲ್ ರಶ್ ವಾತಾವರಣ ಸೃಷ್ಟಿಯಾಗಿದೆ.
ಕರ್ನಾಟಕದಲ್ಲಿ 24 ಸಾವಿರ ಬಸ್ ಗಳಿದ್ದು, ಎಲ್ಲಾ ಬಸ್‌ಗಳಿಗೆ ಹೊರ ಗುತ್ತಿಗೆ ಹಾಗೂ ತರಬೇತಿ ಪಡೆಯುತ್ತಿರುವ ಸಿಬ್ಬಂದಿಗಳನ್ನು ನಿಯೋಜಿಸಲು ಸಾಧ್ಯವೇ ಎಂದು ಮೈಸೂರಿನಲ್ಲಿರುವ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಪ್ರಶ್ನಿಸಿದರು.
ಕೋಟ್ಯಾಂತರ ವೆಚ್ಚದ ಮನೆಯಲ್ಲಿ ವಾಸ ಮಾಡುವವರಿಗೆ ಗೃಹಜ್ಯೋತಿ ಗ್ಯಾರಂಟಿ ಯೋಜನೆಯಡಿ ಉಚಿತ ವಿದ್ಯುತ್ ಸಂಪರ್ಕ ಸೌಲಭ್ಯ ನೀಡುತ್ತಾರೆ. ಲಕ್ಷಾಂತರ ರೂಪಾಯಿ ಸರ್ಕಾರದ ವೇತನ ಪಡೆಯುವ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಿದ್ದಾರೆ. ಆದರೆ ಕಡಿಮೆ ವೇತನ ಪಡೆಯುವ ನಮಗೆ ಬಾಕಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊರ ಊರು ಹಾಗೂ ಹೊರ ರಾಜ್ಯಕ್ಕೆ ಹೋದಾಗ ಬಸ್‌ನಲ್ಲೇ ಮಲಗುತ್ತೇವೆ. ಸೊಳ್ಳೆ ಕಚ್ಚಿಸಿಕೊಂಡು ನಿದ್ರೆ ಇಲ್ಲದೆ ಬವಣೆ ಪಡುತ್ತೇವೆ. ಬೆಳಗ್ಗೆ ಶೌಚಾಲಯದ ವ್ಯವಸ್ಥೆ ಇಲ್ಲದೆ ಪರದಾಡುತ್ತೇವೆ. ಇಷ್ಟೆಲ್ಲ ಕಷ್ಟಪಡುವ ನಮಗೆ ಬಾಕಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾವು ರಾಜ್ಯ ಹಾಗೂ ಕೇಂದ್ರ ಸರ್ಕಾರಿ ನೌಕರರಂತೆ 7ನೇ ವೇತನ ಆಯೋಗದಂತೆ ವೇತನ ನೀಡಿ ಎಂದು ಕೇಳುತ್ತಿಲ್ಲ. ನೀಡುತ್ತಿರುವ ಕಡಿಮೆ ವೇತನದ ಬಾಕಿ ನೀಡುವಂತೆ ಕೇಳುತ್ತಿದ್ದೇವೆ. ಈ ಸಂಬಂಧ ನಮ್ಮ ಮುಷ್ಕರದ ನಂತರ ಸರ್ಕಾರ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕು ಎಂದು ತಿಳಿಸಿದರು. ಮುಷ್ಕರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರುತ್ತೇವೆ. ಈ ಮೂಲಕ ನಮ್ಮ ಬೇಡಿಕೆ ಈಡೇರುವ ತನಕ ಹೋರಾಟ ಮುಂದುವರೆಸುತ್ತೇವೆ ಎಂದು ಶಿವಕುಮಾರ್ ಹೇಳಿದರು.













