Urea Problem: ರಾಜ್ಯದಲ್ಲಿ ಯೂರಿಯಾ ಕೊರತೆ ವಿಚಾರ : ರೈತರು ಆತಂಕ ಪಡುವ ಅಗತ್ಯ ಇಲ್ಲ – ಯೂರಿಯಾ ಗೊಬ್ಬರ ಸ್ಟಾಕ್ ಇದೆ – ಕೃಷಿ ಸಚಿವ

Urea Problem: ರಾಜ್ಯದಲ್ಲಿ ಈ ಬಾರಿ ಮುಂಗಾರು ಚೆನ್ನಾಗಿ ಆಗಿದ್ದು, ರೈತರು ಖುಷಿ ಖುಷಿಯಿಂದ ಕೃಷಿ ಚಟುವಟೆಕೆಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಗೊಬ್ಬರ ಕೊರತೆ ಉಂಟಾಗಿದೆ ಎಂಬ ದೂರುಗಳು ಕೇಳಿ ಬರುತ್ತಿದ್ದು, ಕೆಲವೆಡೆ ಯೂರಿಯಾಕ್ಕಾಗಿ ರೈತರು ಪರದಾಡುತ್ತಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟನೆ ಕೊಟ್ಟ ಕೃಷಿ ಸಚಿವ ಚೆಲುವರಾಯಸ್ವಾಮಿ ಯೂರಿಯಾ ಕೊರತೆಯಾಗಿಲ್ಲ. ಹೆಚ್ಚುವರಿಯಾಗಿ ನಮ್ಮ ಬಳಿ ಯೂರಿಯಾ ಗೊಬ್ಬರ ಸ್ಟಾಕ್ ಇದೆ ಎಂದು ಹೇಳಿದ್ದಾರೆ.

ನಮ್ಮ ಬಳಿ ಏಪ್ರಿಲ್ ನಲ್ಲಿ 6,80,056 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರಕ್ಕಾಗಿ ಬೇಡಿಕೆ ಬಂದಿತ್ತು. ನಮ್ಮ ಬಳಿ 8 ಲಕ್ಷ ಮೆಟ್ರಿಕ್ ಟನ್ ಸ್ಟಾಕ್ ಇದೆ. ಬೇಡಿಕೆಗಿಂತ ಹೆಚ್ಚುವರಿಯಾಗಿ 1.9 ಲಕ್ಷ ಮೆಟ್ರಿಕ್ ಟನ್ ನಮ್ಮ ಬಳಿ ಸ್ಟಾಕ್ ಇದೆ. ಹೀಗಾಗಿ ಯಾವುದೇ ರೈತರು ಆತಂಕ ಪಡುವ ಅಗತ್ಯ ಇಲ್ಲ. ನಾಳೆ ನಾಡಿದ್ದು ಸಿಗಲ್ವೇನೋ ಎಂಬ ಭಾವನೆ ಯಾರಿಗೂ ಬೇಡ. ನಮ್ಮ ಬಳಿ ಅಗತ್ಯವಿರುವಷ್ಟು ಸ್ಟಾಕ್ ಇದೆ ಎಂದು ಹೇಳಿದ್ದಾರೆ.
ಹಾವೇರಿ, ಬೆಳಗಾವಿ, ಚಿತ್ರದುರ್ಗ ಕಡೆಗಳಲ್ಲಿ ಗೊಂದಲ ಉಂಟಾಗಿತ್ತು. ನೀವು ಮಾಧ್ಯಮಗಳು ಸ್ವಲ್ಪ ತಾಳ್ಮೆ ವಹಿಸಿ. ನಾಳೆ ಬೇಕಾಗಿದ್ದನ್ನ ಇವತ್ತೇ ಪಡೆಯೋಕೆ ಹೊರಟಿದ್ದಾರೆ. ಮುಂದಿನ ತಿಂಗಳು ಪಡೆಯೋರು ಈಗಲೇ ಹೋಗಿದ್ದಾರೆ. ಹಾಗಾಗಿ ಈ ರೀತಿಯ ಒತ್ತಡ ಆಗಿರಬಹುದು ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ.
ರೈತರು ಯಾರು ಆತಂಕ ಪಡುವುದು ಬೇಡ, ನಮ್ಮಲ್ಲಿ ರಸಗೊಬ್ಬರ ದಾಸ್ತಾನಿದೆ, ಅಡ್ವಾನ್ಸ್ ಆಗಿ ಬಿತ್ತನೆ ಪ್ರಾರಂಭವಾಗಿದೆ. ಸಿಗುತ್ತೋ ಇಲ್ವೋ ಎಂಬ ಆತಂಕ ಬೇಡ. ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡ್ತಿದ್ದಾರೆ. ನಾವು ಕೇಂದ್ರದ ಜೊತೆ ಸಂಪರ್ಕದಲ್ಲಿದ್ದೇವೆ. ಕೇಂದ್ರದ ಅಧಿಕಾರಿಗಳ ಜೊತೆ ನಮ್ಮವರು ಸಂಪರ್ಕದಲ್ಲಿದ್ದಾರೆ. ಸ್ಟಾಕ್ ಇಲ್ಲ ಅನ್ನೋದು ಬೇಡ. ಯಾವುದೇ ಆತಂಕ ಬೇಡ ಎಂದರು.
ಮಳೆ ಜಾರಾಗಿ ಸುರಿದ ಹಿನ್ನೆಲೆ ಕೆಲವೆಡೆ ಬೆಳೆ ಹಾನಿ ಆಗಿದೆ. ಅದರ ನಷ್ಟದ ಬಗ್ಗೆ ಜಿಲ್ಲಾಧಿಕಾರಿಗಳು ನೋಡ್ತಾರೆ. ಅತಿವೃಷ್ಠಿ, ಅನಾವೃಷ್ಠಿಯಿಂದ ಆಗುತ್ತೆ. ಎಸ್ ಡಿಆರ್ ಎಫ್, ಎನ್ ಡಿಆರ್ ಎಫ್ ಗಳ ಅಡಿಯಲ್ಲಿ ಪರಿಹಾರ ಇದೆ. ಅಡ್ವಾನ್ಸ್ ಆಗಿಯೇ ಅದನ್ನ ಹೇಳೋಕೆ ಆಗಲ್ಲ. ಕೇಂದ್ರ ನಮ್ಮ ಇಲಾಖೆ ಪಾಸಿಟಿವ್ ಇದೆ. ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಸಹಕರಿಸ್ತಿದೆ. ಕೆಲವು ಇಲಾಖೆಗೆ ಸಹಕಾರ ಗೊತ್ತಿಲ್ಲ. ನಾವು ಏನು ಹೇಳ್ತೇವೆ ಅದನ್ನ ನೀಡ್ತಿದೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಮಾವಿನ ವಿಚಾರವಾಗಿ ಕೇಳಿದಾಗ, ತೊಂದರೆಯಾದಾಗ ಸಿಎಂ ಜವಾಬ್ದಾರಿ ಕೊಟ್ರು, ಕೇಂದ್ರದ ಜೊತೆ ಮಾತುಕತೆ ಮಾಡಿಸಿದ್ರು, ರಿಜಿಸ್ಟರ್ ಆಯ್ತು, ನೆರವನ್ನೂ ಕೊಡ್ತಿದ್ದೇವೆ. 5 ಎಕರೆಗೆ 100 ಕ್ವಿಂಟಾಲ್ ಆಗುತ್ತೆ. ಇದನ್ನ ಪರ್ಚೇಸ್ ಮಾಡೋಕೆ ಅದೇಶ ಮಾಡ್ತಿದ್ದೇವೆ. ಇಂದಿನಿಂದಲೇ ಪ್ರಕ್ಯೂರ್ ಮಾಡೋಕೆ ರೆಡಿ ಇದ್ದೇವೆ. ವಿಸ್ತರಿಸೋಕೆ ಕೇಂದ್ರಕ್ಕೆ ಪತ್ರ ಬರೆಯುತ್ತೇವೆ. ನಮ್ಮವರು ಮೂವರು ಕೇಂದ್ರ ಮಂತ್ರಿಗಳಿದ್ದಾರೆ. ಅವರು ಇದರ ಬಗ್ಗೆ ಗಮನಹರಿಸ್ತಾರೆ ಎಂದರು.
ಇಡೀ ದೇಶದಲ್ಲೇ ಗೊಬ್ಬರದ ಸಮಸ್ಯೆ ಇರೋದು ಸತ್ಯ, ಎಂದು ಕೃಷಿ ಸಚಿವರು ಗೊಬ್ಬರ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದು, ಇರಾನ್ ಯುದ್ಧದ ಕಾರಣಕ್ಕೆ ಗೊಬ್ಬರ ಆಮದು ಆಗ್ತಿಲ್ಲ. ಚೀನಾ ಸ್ಥಗಿತ ಮಾಡಿರೋದ್ರಿಂದ ಗೊಬ್ಬರ ಸಮಸ್ಯೆ ಇದೆ. ಕೇಂದ್ರದಿಂದ ಬರಬೇಕಿದ್ದ ಗೊಬ್ಬರ ಪೂರೈಕೆ ಸರಿಯಾಗಿಲ್ಲ ಎಂದು ಹೇಳಿದರು.
Comments are closed.