Share the Article

Jagadeep Dhankar: ಭಾರತದ ಉಪರಾಷ್ಟ್ರಪತಿ ಜಗದೀಪಿ ಧನಕರ್ ಅವರು ತಮ್ಮ ಅನಾರೋಗ್ಯದ ಕಾರಣ ಜವಾಬ್ದಾರಿಯನ್ನು ನಿರ್ವಹಿಸಲಾಗುವುದಿಲ್ಲ ಎಂದು ಹೇಳಿ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದಾರೆ. ಆದರೆ ಇದರ ಬೆನ್ನಲ್ಲೇ ಕಾಂಗ್ರೆಸ್ ಧನಕರ್ ರಾಜೀನಾಮೆಗೆ ಅನಾರೋಗ್ಯ ಕಾರಣವಲ್ಲ, 1 ಗಂಟೆಯಿಂದ ಸಂಜೆ 4:30ರ ನಡುವೆ ಏನೋ ನಡೆದಿದೆ ಇಂದು ಗಂಭೀರ ಆರೋಪವನ್ನು ಮಾಡಿದೆ. ಹೀಗಾಗಿ ಸದನದಲ್ಲಿ ವಿವಾದ ಭುಗಿಲೆದ್ದಿದೆ.

ಹೌದು, ಉಪ ರಾಷ್ಟ್ರಪತಿ ಹುದ್ದೆಗೆ ಜಗದೀಪ್‌ ಧನಕರ್‌ ರಾಜೀನಾಮೆ ನೀಡಿರುವುದು ಅಚ್ಚರಿಗೊಳಿಸಿದೆ ಎಂದು ಹೇಳಿರುವ ಕಾಂಗ್ರೆಸ್‌, ರಾಜೀನಾಮೆಗೆ ಆರೋಗ್ಯ ಸಮಸ್ಯೆಗಿಂತಲೂ ಬಲವಾದ ಕಾರಣ ಇರುವ ಸಾಧ್ಯತೆಯಿದೆ ಎಂದು ಅನುಮಾನಿಸಿದೆ. ಕೇಂದ್ರ ಸರ್ಕಾರದ ಪ್ರಮುಖ ಸಚಿವರಾದ ಜೆ.ಪಿ. ನಡ್ಡಾ ಮತ್ತು ಕಿರಣ್ ರಿಜಿಜು ಅವರು ನಿರ್ಣಾಯಕ ವ್ಯವಹಾರ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಗೈರುಹಾಜರಾಗಿರುವುದು ಮತ್ತು ಮೇಲ್ಮನೆಯಲ್ಲಿ ನಡ್ಡಾ ಅವರ ಹೇಳಿಕೆಗಳೇ ರಾಜೀನಾಮೆಗೆ ಕಾರಣ ಎಂದು ಹೇಳಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್‌ ರಮೇಶ್‌, ‘ನಿನ್ನೆ(ಸೋಮವಾರ) ಮಧ್ಯಾಹ್ನ 1 ಗಂಟೆಯಿಂದ ಸಂಜೆ 4:30ರ ನಡುವೆ ಬಹಳ ಗಂಭೀರವಾದದ್ದೇನೋ ಸಂಭವಿಸಿದೆ. ಧನಕರ್ ಅವರು ಸೋಮವಾರ ಮಧ್ಯಾಹ್ನ 12:30ಕ್ಕೆ ಕಲಾಪ ಸಲಹಾ ಸಮಿತಿ(ಬಿಎಸಿ) ಸಭೆ ಕರೆದಿದ್ದರು. ಈ ಸಭೆಯಲ್ಲಿ ಜೆ.ಪಿ.ನಡ್ಡಾ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು. ಕೆಲವು ಚರ್ಚೆಗಳ ನಂತರ ಸಂಜೆ 4.30ಕ್ಕೆ ಮತ್ತೆ ಸಭೆ ಸೇರಲು ನಿರ್ಧರಿಸಲಾಯಿತು’

‘ಸಂಜೆ 4.30ಕ್ಕೆ ಧನಕರ್ ಅವರ ಅಧ್ಯಕ್ಷತೆಯಲ್ಲಿ ಬಿಎಸಿ ಮತ್ತೆ ಸಭೆ ಸೇರಿತು. ನಡ್ಡಾ ಮತ್ತು ರಿಜಿಜು ಸಭೆಗೆ ಬಾರದಿದ್ದರಿಂದ ಅವರ ಆಗಮನಕ್ಕಾಗಿ ಕಾದೆವು. ಆದರೆ, ಅವರು ಸಭೆಗೆ ಬರಲೇ ಇಲ್ಲ. ತಾವು ಗೈರಾಗುತ್ತೇವೆ ಎಂಬುದನ್ನು ಧನಕರ್‌ ಅವರಿಗೆ ವೈಯಕ್ತಿಕವಾಗಿ ತಿಳಿಸಿಯೂ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಧನಕರ್‌ ಅವರು ಇಂದು(ಮಂಗಳವಾರ) ಮಧ್ಯಾಹ್ನ 1 ಗಂಟೆಗೆ ಸಭೆ ನಡೆಸುವುದಾಗಿ ತಿಳಿಸಿದರು’ ಎಂದು ಜೈರಾಮ್‌ ರಮೇಶ್‌ ತಿಳಿಸಿದ್ದಾರೆ.

ಅಲ್ಲದೆ ‘ನಿನ್ನೆ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4:30 ರ ನಡುವೆ ಬಹಳ ಗಂಭೀರವಾದದ್ದೇನೋ ಸಂಭವಿಸಿದೆ. ಇದೇ ಕಾರಣಕ್ಕೆ ಸಂಜೆ ನಡೆದ ಬಿಎಸಿ ಸಭೆಗೆ ನಡ್ಡಾ ಮತ್ತು ರಿಜಿಜು ಉದ್ದೇಶಪೂರ್ವಕವಾಗಿಯೇ ಗೈರಾಗಿದ್ದರು’ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Bengaluru: ಮನೆ ಖಾಲಿ ಮಾಡುವಾಗ ಬಾಡಿಗೆದಾರನಿಗೆ ಮನೆ ಮಾಲೀಕನಿಂದ ಸಿಕ್ತು ಭರ್ಜರಿ ಗಿಫ್ಟ್!!

Comments are closed.