Govt Hospital: ಬಾಗಿಲು ಮುಚ್ಚುವ ಸ್ಥಿತಿಯಲ್ಲಿ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರ – ಇದ್ದ ಇಬ್ಬರೂ ಖಾಯಂ ವೈದ್ಯರುಗಳು ವರ್ಗಾವಣೆ

Govt Hospital: ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇದೀಗ ಇಬ್ಬರೂ ವೈದ್ಯರ ವರ್ಗಾವಣೆಯಿಂದ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕಳೆದ ಒಂದು ವಾರಗಳ ಹಿಂದೆ ಇಲ್ಲಿ ಖಾಯಂ ಆಗಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ವೈದ್ಯರುಗಳನ್ನು ಹುದಿಕೇರಿ ಹಾಗೂ ಮತ್ತೊಬ್ಬರು ವಿರಾಜಪೇಟೆಗೆ ವರ್ಗಾವಣೆಗೊಳಿಸಿದರಿಂದ ಅವರ ಸ್ಥಾನಕ್ಕೆ ಯಾವುದೇ ವೈದ್ಯಧಿಕಾರಿಗಳು ನೇಮಕಗೊಳ್ಳದರಿಂದ ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆ ಸದ್ಯದಲ್ಲೇ ಮುಚ್ಚುವ ಪರಿಸ್ಥಿತಿ ತಂದುಕೊಂಡಿದೆ.

ದಕ್ಷಿಣ ಕೊಡಗಿನ ಪ್ರಮುಖ ನಗರವಾದ ಗೋಣಿಕೊಪ್ಪಲಿನಲ್ಲಿ ಇರುವ ಸರ್ಕಾರಿ ಆಸ್ಪತ್ರೆಗೆ ಕುಟ್ಟ ಬಾಳಲೆ, ಬಿರುನಾಣಿ, ತಿತಿಮತಿ, ಪೊನ್ನಂಪೇಟೆ, ಮಾಯಮಾಡಿ, ಹಾತೂರು ಹಾಗೂ ಗೋಣಿಕೊಪ್ಪಲು ಸುತ್ತ ಮುತ್ತಲಿನ ಜನತೆಗೆ ಈ ಆಸ್ಪತ್ರೆ ಆಶ್ರಯವಾಗಿತ್ತು. ಇದೀಗ ಇಬ್ಬರು ವೈದ್ಯರು ವರ್ಗಾವಣೆಗೊಂಡಿದ್ದರಿಂದ ಹಗಲಿನ ವೇಳೆ ತಾತ್ಕಾಲಿಕವಾಗಿ ಇರುವ ಆಯುರ್ವೇದ ವೈದ್ಯರು, ಹಾಗೂ ಮಕ್ಕಳ ತಜ್ಞ ವೈದ್ಯರು ಇಲ್ಲಿಗೆ ಬರುವ ಹೊರರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ರಾತ್ರಿ ಪಾಳ್ಯದಲ್ಲಿ ವೈದ್ಯರು ಇಲ್ಲದೆ ಈ ಭಾಗದ ಸುತ್ತಮುತ್ತಲಿನ ಜನತೆ ಸಂಕಷ್ಟಕ್ಕೆ ಈಡಾಗಿದ್ದಾರೆ. ರಾತ್ರಿ ವೇಳೆ ಅಪಘಾತ, ಮತ್ತಿತರ ಅನಾರೋಗ್ಯ ಒಳಗಾದವರು ಪ್ರಥಮ ಚಿಕಿತ್ಸೆಗೆ ಇಲ್ಲಿಗೆ ಆಗಮಿಸಿದರೆ ವೈದ್ಯರಿಲ್ಲದೆ ದೂರದ ಮೈಸೂರಿಗೆ ಕರೆದುಕೊಂಡು ಹೋಗುವ ಸಂದರ್ಭ ಒದಗಿದೆ. ಇನ್ನು ಮರಣೋತ್ತರ ಪರೀಕ್ಷೆ ಸೇವೆ ಇಲ್ಲಿ ನಿಲುಗಡೆಗೊಂಡಿದ್ದು ಇನ್ನೂ ಮಡಿಕೇರಿಗೆ ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಪೊನ್ನಂಪೇಟೆ ತಾಲೂಕಿನ ಕುಟ್ಟ ಸರ್ಕಾರಿ ಆಸ್ಪತ್ರೆಯಲ್ಲೂ ಕೂಡ ಕಳೆದ ಒಂದು ತಿಂಗಳಿಂದ ವೈದ್ಯರಿಲ್ಲದಾಗಿದೆ. ಇದುವರೆಗೆ ಇದ್ದ ಒಬ್ಬ ವೈದ್ಯರು ನಿವೃತ್ತಿ ಹೊಂದಿದ್ದರಿಂದ ಅವರ ಸ್ಥಾನಕ್ಕೆ ಬೇರೆ ಯಾರನ್ನು ನೇಮಿಸಿಲ್ಲ. ಹುದಿಕೇರಿ ಆಸ್ಪತ್ರೆಗೆ ಇದೀಗ ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಡಾ. ಗ್ರೀಷ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ 12 ವರ್ಷಗಳಿಂದ ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ಸುರೇಶ್ ವಿರಾಜಪೇಟೆ ತಾಲೂಕ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದಾರೆ.
ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಹೆಚ್ಚಿನ ರೀತಿಯಲ್ಲಿ ಅನುಷ್ಠಾನಗೊಳಿಸಿ ರಾಜ್ಯದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಈ ಇಬ್ಬರು ವೈದ್ಯರು, ಹಾಗೂ ಇಲ್ಲಿನ ದಾರಿಯರು ಕಾರಣರಾಗಿದ್ದರು. ಪರಸ್ಪರ ಹೊಂದಾಣಿಕೆಯಿಂದ ರಾತ್ರಿ ಹಗಲು ಬಡಜನರ ಸೇವೆಯನ್ನು ಮಾಡುತ್ತಿದ್ದರು. ಈ ಸರ್ಕಾರಿ ಆಸ್ಪತ್ರೆ ಹಲವು ಬಡ ಜನತೆಗೆ ಹಾಗೂ ಮಧ್ಯಮ ವರ್ಗದವರಿಗೆ ಹೆರಿಗೆ ಮಾಡಿಸಲು ಇಲ್ಲಿನ ವೈದ್ಯರುಗಳ ಸೇವೆಯಿಂದ ಹೆಚ್ಚಿನ ಉಪಯೋಗವಾಗುತ್ತಿತ್ತು. ಆರೋಗ್ಯ ಕಾರ್ಯಕ್ರಮ, ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ, ಬಾಣಂತಿ ಮತ್ತು ಗರ್ಭಿಣಿ ಮರಣ ಪ್ರಮಾಣ ತಗ್ಗಿಸುವಲ್ಲಿ ಈ ಆಸ್ಪತ್ರೆಯಲ್ಲಿದ್ದ ಇಬ್ಬರೂ ವೈದ್ಯರು ಶ್ರಮಿಸಿದ್ದು ದಾಖಲೆಗೆ ಒಳಗಾಗಿದೆ.
ಇದುವರೆಗೆ ಪ್ರತಿದಿನ 200ಕ್ಕೂ ಹೆಚ್ಚು ಹೊರರೋಗಿಗಳು ಪ್ರತೀ ದಿನ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿರುವ ದಾಖಲೆಯ ಪ್ರಕಾರ ಜಿಲ್ಲೆಯ ಹೊರಬಾಗದ ಪಿರಿಯಾಪಟ್ಟಣ, ಎಚ್ ಡಿ ಕೋಟೆ ಭಾಗದಿಂದಲೂ ರೋಗಿಗಳು ಇಲ್ಲಿಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದಾರೆ. ಇದೀಗ ಇಬ್ಬರು ನುರಿತ ವೈದ್ಯರ ವರ್ಗಾವಣೆಯಿಂದ ಪೊನ್ನಂಪೇಟೆ ತಾಲೂಕಿನಲ್ಲಿ ಸರಕಾರಿ ಆಸ್ಪತ್ರೆಯ ಸೇವೆ ಬಾಗಿಲು ಮುಚ್ಚಿದಂತಾಗಿದೆ. ಈ ಭಾಗದ ಬಡ ಜನರು ಇದೀಗ ತೀವ್ರ ರೂಪದಲ್ಲಿ ಸಂಕಷ್ಟಿಕೀಡಾಗಿದ್ದು ಹಲವರು ಆಸ್ಪತ್ರೆಯಲ್ಲಿ ಸೇವೆ ಲಭ್ಯವಿಲ್ಲದೆ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹೋಗುತ್ತಿರುವ ದೃಶ್ಯ ಇದೀಗ ಕಂಡು ಬರುತ್ತಿದೆ.
ಸಮಸ್ಯೆಗೆ ಕಾರಣ…
ಕರ್ನಾಟಕ ರಾಜ್ಯದಲ್ಲಿ, ಹತ್ತು ವರ್ಷಗಳಿಗಿಂತ್ತ ಹೆಚ್ಚಾಗಿ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ವೈದ್ಯರು, ದಾದಿಯರು, ಆಡಳಿತಾತ್ಮಕ ಸಿಬ್ಬಂದಿಗಳು, ಡಿ ಗ್ರೂಪ್ ನೌಕರರನ್ನು ವರ್ಗಾವಣೆಗೊಳಿಸುವ ಕಾನೂನು ಇದ್ದರೂ ಇದುವರೆಗೆ ಇದು ಜಾರಿ ಆಗಿರಲಿಲ್ಲ. ಆದರೆ ಇದೀಗ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಹರ್ಷಗುಪ್ತ ರವರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಿಯಮ ಪಾಲಿಸಲು ಆದೇಶ ಹೊರಡಿಸಿದ ಅನ್ವಯ ರಾಜ್ಯದಲ್ಲಿ ಈ ನಿಯಮ ಜಾರಿಗೆ ಬಂದಿದೆ.
ಹತ್ತು ವರ್ಷ ಮೇಲ್ಪಟ್ಟು ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಮೊದಲ ಹಂತದಲ್ಲಿ 15ರಷ್ಟು ಸರ್ಕಾರಿ ಉದ್ಯೋಗಸ್ಥರನ್ನು ಕೌನ್ಸಿಲಿಂಗ್ ಮೂಲಕ ಸ್ಥಳ ಬದಲಾವಣೆ ಮಾಡಲಾಗಿದೆ. ಕೊಡಗು ಜಿಲ್ಲೆಯ ಸಿದ್ದಾಪುರ, ವಿರಾಜಪೇಟೆ, ಸೋಮವಾರಪೇಟೆ, ಮತ್ತಿತರ ಕಡೆ ಕೂಡ ವೈದ್ಯರು ವರ್ಗಾವಣೆಗೊಂಡಿದ್ದಾರೆ. ಆದರೆ ಅಂತಹ ಕಡೆಗಳಲ್ಲಿ ಉಳಿದ ವೈದ್ಯರು ಸೇವೆ ಸಲ್ಲಿಸುತ್ತಿರುವದರಿಂದ ಸಾರ್ವಜನಿಕರಿಗೆ ಏನು ತೊಂದರೆ ಆ ಭಾಗದಲ್ಲಿ ಉಂಟಾಗಿಲ್ಲ. ಆದರೆ ಸಿದ್ದಾಪುರ ಮತ್ತು ಗೋಣಿಕೊಪ್ಪಲು ಆಸ್ಪತ್ರೆಗೆ ಇದರ ಬಿಸಿ ತಟ್ಟಿದೆ.
ಪ್ರಧಾನ ಕಾರ್ಯದರ್ಶಿಗಳು ಹೊರಡಿಸಿದ ಆದೇಶದಿಂದ ಗ್ರಾಮೀಣ ಪ್ರದೇಶ ಹಾಗೂ ಗುಡ್ಡಗಾಡು ಪ್ರದೇಶದ ಆಸ್ಪತ್ರೆಗಳಿಗೆ ತೊಂದರೆ ಉಂಟಾಗಿದೆ. ಸೋಜಿಗದ ವಿಚಾರವೇನೆಂದರೆ ಕೌನ್ಸಿಲಿಂಗ್ ನಲ್ಲಿ ಯಾವುದೇ ವೈದ್ಯರು ಕೊಡಗಿಗೆ ಬರಲು ಹಿಂದೇಟು ಹಾಕಿದ್ದರಿಂದ ಇದೀಗ ವರ್ಗಾವಣೆಗೊಂಡ ಸ್ಥಳಕ್ಕೆ ವೈದ್ಯರಿಲ್ಲದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ವಿರಾಜಪೇಟೆ ತಾಲೂಕು ಆಸ್ಪತ್ರೆಯಲ್ಲೂ ಕೂಡ ಫಾರ್ಮಸಿಸ್ಟ್ ಗಳು ವರ್ಗಾವಣೆಗೊಂಡು ರೋಗಿಗಳಿಗೆ ಔಷಧಿ ನೀಡಲು ಕೂಡ ಸಿಬ್ಬಂದಿಯ ಕೊರತೆ ಎದುರಿಸುತ್ತಿದ್ದಾರೆ.
ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆಗೊಳಿಸುವಾಗ, ಗೋಣಿಕೊಪ್ಪಲು ಸಿದ್ದಾಪುರದಂತಹ ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿರುವ ಪ್ರದೇಶಕ್ಕೆ ನುರಿತ ವೈದ್ಯರನ್ನು ನೇಮಿಸಿ ವರ್ಗಾವಣೆಗೊಳಿಸಿದ್ದರೆ ಒಳಿತಾಗುತ್ತಿತ್ತು. ಗೋಣಿಕೊಪ್ಪಲು ಆಸ್ಪತ್ರೆಗೆ ನೂತನ ವೈದ್ಯರುಗಳು ಬರುವವರೆಗೆ ಇದುವರೆಗೆ ಇಲ್ಲಿ ಸೇವೆ ಸಲ್ಲಿಸಿದ ವೈದ್ಯರುಗಳನ್ನು ಕೂಡಲೇ ಒ. ಒ.ಡಿ ಮೂಲಕ ಆಸ್ಪತ್ರೆಗೆ ನೇಮಿಸಿ ಈ ಭಾಗದ ಜನರ ಸಂಕಷ್ಟವನ್ನು ಪರಿಹರಿಸುವಂತೆ ಸಾರ್ವಜನಿಕರು ಕೋರಿಕೊಂಡಿದ್ದಾರೆ. ಇನ್ನು ಒಂದು ವಾರದೊಳಗೆ ಖಾಯಂ ವೈದ್ಯರ ಸೇವೆ ಲಭ್ಯವಾಗದಿದ್ದರೆ ಈ ಭಾಗದ ಎಲ್ಲಾ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಒಳಗೊಂಡಂತೆ ಸಾರ್ವಜನಿಕರು ಪ್ರತಿಭಟನೆ ನಡೆಸುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ.
ಇದನ್ನೂ ಓದಿ: Kodagu Rain: ಕೊಡಗು ಜಿಲ್ಲೆಯಲ್ಲಿ ಹೇಗಿದೆ ಮಳೆ ಪ್ರಮಾಣ? ಹಾರಂಗಿ ಜಲಾಶಯದ ನೀರಿನ ಮಟ್ಟ ಎಷ್ಟಿದೆ?
Comments are closed.