Bomb threat: ಬೆಂಗಳೂರಿನ 40ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ – ಅಧಿಕಾರಿಗಳಿಂದ ಪರಿಶೀಲನೆ

Bomb threat: ಬೆಂಗಳೂರಿನ ವಿವಿಧ ಸ್ಥಳಗಳಲ್ಲಿರುವ 40ಕ್ಕೂ ಹೆಚ್ಚು ಶಾಲೆಗಳಲ್ಲಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಇ-ಮೇಲ್ ಬಂದಿದ್ದು, ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಸೇರಿ ಹಲವು ತಂಡಗಳು ಪರಿಶೀಲನೆ ನಡೆಸುತ್ತಿವೆ. Roadkill333atomic@mail.com ಎಂಬ ಐಡಿಯಿಂದ ಸಂದೇಶ ಬಂದಿದ್ದು, ಆರ್ ಆರ್ ನಗರ, ಕೆಂಗೇರಿ ಭಾಗದ ಶಾಲೆಗಳಿಗೆ ಮೇಲ್ ಮಾಡಲಾಗಿದೆ.


“ಕ್ಲಾಸ್‌ರೂಮ್‌ನಲ್ಲಿರುವ ಮಕ್ಕಳ ಬ್ಯಾಗ್‌ಗಳಲ್ಲಿ ಸ್ಫೋಟಕಗಳನ್ನು ಇಡಲಾಗಿದೆ. ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್‌ನಲ್ಲಿ ಬಾಂಬ್ ಇರಿಸಲಾಗಿದೆ. ನಾನು ಪ್ರಪಂಚದ ಪ್ರತಿಯೊಬ್ಬರ ಹತ್ಯೆ ಮಾಡುತ್ತೇನೆ, ಯಾರೂ ಉಳಿಯಲು ಸಾಧ್ಯವಿಲ್ಲ” ಎಂದು ಇ-ಮೇಲ್ ಬಂದಿರುವುದಾಗಿ ವರದಿಯಾಗಿದೆ. ಅಲ್ಲದೆ ನಾನು ಪ್ರಪಂಚದ ಪ್ರತಿಯೊಬ್ಬರನ್ನು ಅಳಿಸಿ ಹಾಕುತ್ತೇನೆ. ಈ ಸುದ್ದಿ ಕಂಡು ನಾನು ಸಂತೋಷ ಪಡುತ್ತೇನೆ ಹಾಗೂ ನಗುತ್ತೇನೆ. ಮಕ್ಕಳು ಅಂಗವಿಕಲರಾಗೋದನ್ನ ಪೋಷಕರು ನೋಡಬೇಕು. ನೀವೆಲ್ಲರೂ ಕಷ್ಟ ಅನುಭವಿಸಲು ಅರ್ಹರು ಆಗಿದ್ದೀರಿ. ಈ ಸುದ್ದಿ ಕೇಳಿದ ನಂತರ ನಾನು ಸಹ ಅತ್ಮಹತ್ಯೆ ಮಾಡಿಕೊಳ್ತಿನಿ ಎಂದು ಅಪರಿಚಿತ ವ್ಯಕ್ತಿ ಶಾಲೆಗಳಿಗೆ ಮೇಲ್ ಮಾಡಿದ್ದಾನೆ.
ಪದೇ ಪದೇ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ ಮೇಲ್ ವಿಚಾರ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬೆಂಗಳೂರಿನಾದ್ಯಂತ 40 ಶಾಲೆಗಳಿಗೆ ಬಾಂಬ್ ಬೆದರಿಕೆ ಬಗ್ಗೆ ನನಗೆ ಗೊತ್ತಿಲ್ಲ, ಇದ್ರ ಬಗ್ಗೆ ನಾನು ಉತ್ತರ ಕೊಡೋದಿಲ್ಲ, ಅದ್ರ ಬಗ್ಗೆ ನನಗೆ ಗೊತ್ತಿಲ್ಲ ನಾನು ಮಾತಾಡೋದು ಇಲ್ಲ, ಇದ್ರ ಬಗ್ಗೆ ಗಮನ ಹರಿಸೋಕೆ ಕಾನೂನು ಇದೆ ನೋಡಿ ಕೊಳ್ಳುತ್ತೆ ಎಂದಷ್ಟೆ ಹೇಳಿಕೆ ನೀಡಿದ್ದಾರೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ .ಜಿ ಪರಮೇಶ್ವರ್, ಈ ಹಿಂದೆಯೂ ಕೂಡ ಬಾಂಬ್ ಬೆದರಿಕೆ ಬಂದಿತ್ತು. ಅನೇಕ ಬೆದರಿಕೆ ಮೇಲ್ ಬಂದಿದ್ದು ಸ್ಮರಿಸುತ್ತೇನೆ. ನಾವು ಮೊದಲು ವೆರಿ ಫೈ ಮಾಡ್ತೇವೆ. ಯಾವುದನ್ನೂ ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಈ ಘಟನೆ ಯಾಕೆ ನಡೆದಿದೆ ಅಂತ ನೋಡ್ತೇವೆ ಎಂದು ಹೇಳಿದರು.
Comments are closed.