Nimisha Priya: ಯೆಮನ್ ನಲ್ಲಿ ನಿಮಿಷ ಪ್ರಿಯಾಗೆ ಮರಣದಂಡನೆ ವಿಚಾರ – ಏನಿದು ಪ್ರಕರಣ? 2017 ರಿಂದ ಇಲ್ಲಿವರೆಗೂ ಆಗಿದ್ದೇನು?

Nimisha Priya: ದೇಶಾದ್ಯಂತ ಸಾಕಷ್ಟು ಸದ್ದು ಮಾಡುತ್ತಿರುವ, ಕೇರಳದ ನರ್ಸ್ ನಿಮಿಷ ಪ್ರಿಯ ಅವರಿಗೆ ಯೆಮನ್ ನಲ್ಲಿ ನೀಡಿದ ಮರಣದಂಡನೆಯ ಪ್ರಕರಣ ಇತ್ಯರ್ಥವಾಗುತ್ತದೆಯೋ? ಇಲ್ಲವೋ? ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಸದ್ಯ ನಿಮಿಷ ಅವರ ಮರಣದಂಡನೆಯನ್ನು ಮುಂದೂಡಲಾಗಿದೆ. ಹಾಗಿದ್ರೆ ಏನಿದು ಪ್ರಕರಣ? 2017ರಿಂದ ಇಲ್ಲಿಯವರೆಗೂ ಆಗಿದ್ದೇನು? ಇಲ್ಲಿದೆ ನೋಡಿ ಡೀಟೇಲ್ಸ್.

ಹೌದು, ವ್ಯವಹಾರ ಪಾಲುದಾರನನ್ನು ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿ ಜುಲೈ 16 ರಂದು ನಿಗದಿಯಾಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಯೆಮನ್‌ನ ಸ್ಥಳೀಯ ಅಧಿಕಾರಿಗಳು ಮುಂದೂಡಿದ್ದಾರೆ ಎಂದು ಪಿಟಿಐ ವರದಿ ಮಾಡಿವೆ. ಈ ನಡುವೆ ಭಾರತೀಯ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಮಧ್ಯಸ್ಥಿಕೆಯೊಂದಿಗೆ ಸೂಫಿ ವಿದ್ವಾಂಸರು ಮಹ್ದಿ ಕುಟುಂಬದೊಂದಿಗೆ ಮಾತುಕತೆ ನಡೆಸಿ ಕ್ಷಮೆಯ ಬದಲಾಗಿ ಹಣವನ್ನು ಸ್ವೀಕರಿಸುವಂತೆ ಮನವೊಲಿಸುವ ಪ್ರಯತ್ನಗಳನ್ನೂ ನಡೆಸುತ್ತಿದೆ. ಈ ಇಡೀ ಪ್ರಕರಣದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್ ಮೂಲದ ನಿಮಿಷಾ ಪ್ರಿಯಾ, ತಮ್ಮ ಪತಿ ಮತ್ತು ಮಗನೊಂದಿಗೆ 2012ರಲ್ಲಿ ಯೆಮೆನ್‌ಗೆ ತೆರಳಿದ್ದರು. ನರ್ಸ್ ಆಗಿದ್ದ ನಿಮಿಷಪ್ರಿಯಾ ಯೆಮನ್ ನಲ್ಲಿಯೇ ಕೆಲಸ ಮುಂದುವರೆಸಿದರು. ಅವರ ಪತಿ ಟಾಮಿಗೆ ಖಾಸಗಿ ಕಂಪೆನಿಯಲ್ಲಿ ಕೆಲಸವೂ ಸಿಕ್ಕಿತು. ಈ ಮಧ್ಯೆ, ಅವರು ಯೆಮೆನ್ ಪ್ರಜೆ ತಲಾಲ್ ಅಬ್ದುಲ್ ಮಹ್ದಿ ಅವರನ್ನು ಭೇಟಿಯಾದರು. ತಲಾಲ್ ಅವರ ಸಹಾಯವನ್ನು ಪಡೆದು ವ್ಯಾಪಾರ ಪಾಲುದಾರಿಕೆಯಲ್ಲಿ ಕ್ಲಿನಿಕ್ ಅನ್ನು ಪ್ರಾರಂಭಿಸಲು ನಿರ್ಧರಿಸಿದರು. ಆ ದೇಶದ ಯಾರೊಬ್ಬರ ಸಹಾಯವಿಲ್ಲದೆ ಯೆಮೆನ್‌ನಲ್ಲಿ ಕ್ಲಿನಿಕ್ ಅನ್ನು ಪ್ರಾರಂಭಿಸುವುದು ಅಸಾಧ್ಯವಾಗಿತ್ತು.
ಕ್ಲಿನಿಕ್ ಅನ್ನು ಪ್ರಾರಂಭಿಸಿದ ನಂತರ, ತಲಾಲ್ ನಿಮಿಷಪ್ರಿಯಾ ತನ್ನ ಹೆಂಡತಿ ಎಂದು ಎಲ್ಲರನ್ನೂ ನಂಬುವಂತೆ ಮಾಡಿದರು ಎಂದು ಆರೋಪಿಸಲಾಗಿದೆ. ಅದಕ್ಕಾಗಿ ಆತ ನಕಲಿ ವಿವಾಹ ಪ್ರಮಾಣಪತ್ರವನ್ನು ಮಾಡಿದ್ದರು. ನಂತರ, ನಿಮಿಷಾರನ್ನು ಬೆದರಿಸುವ ಮೂಲಕ, ಧಾರ್ಮಿಕ ಪದ್ಧತಿಗಳ ಪ್ರಕಾರ ಅವರನ್ನು ವಿವಾಹವಾಗಿದ್ದರು ಎನ್ನಲಾಗಿದೆ.
ತಲಾಲ್, ನಿಮಿಷಾ ಪಾಲುದಾರಿಕೆಯಲ್ಲಿ ಪ್ರಾರಂಭಿಸಿದ ಕ್ಲಿನಿಕ್ ನಿಂದ ಎಲ್ಲಾ ಆದಾಯವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದರು. ಅಲ್ಲದೇ ನಿಮಿಷಾರ ಪಾಸ್‌ಪೋರ್ಟ್ ತನ್ನ ವಶಕ್ಕೆ ತೆಗೆದುಕೊಂಡು ಆಕೆಯ ಬಳಿ ಇದ್ದ ಚಿನ್ನವನ್ನು ಮಾರಾಟ ಮಾಡಿದ್ದರು ಎಂದು ಆರೋಪಿಸಲಾಗಿದೆ. ಒಂದು ಹಂತದವರೆಗೆ ಎಲ್ಲವನ್ನೂ ಸಹಿಸಿದ ನಿಮಿಷಾ, ಮುಂದೆ ಸಹಿಸಲಾರದಿದ್ದಾಗ, ಅಲ್ಲಿನ ಅಧಿಕಾರಿಗಳಿಗೆ ದೂರು ನೀಡಿದರು. ತನ್ನ ಪಾಸ್ ಪೋರ್ಟ್ ಮರಳಿ ಪಡೆಯುವ ಪ್ರಯತ್ನದಲ್ಲಿ ನಿಮಿಷಾ, ತಲಾಲ್ ಗೆ ನೀಡಿದ ಅರವಳಿಕೆಯ ಪ್ರಮಾಣ ಹೆಚ್ಚಾದ್ದರಿಂದ ತಲಾಲ್ ಮೃತಪಟ್ಟಿದ್ದಾರೆ ಎಂದು ತನಿಖೆಯು ತಿಳಿಸಿದೆ.
2017ರಿಂದ ಏನಾಗಿತ್ತು?
2017 ಜುಲೈ 25: ಯೆಮೆನ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಗ ಸ್ವಂತ ಕ್ಲಿನಿಕ್ ತೆರೆಯಲು ಸಹಾಯ ಮಾಡುವುದಾಗಿ ಹೇಳಿ ಬಂದ ಯೆಮೆನ್ ಪ್ರಜೆ ತಲಾಲ್ ಅಬ್ದುಲ್ ಮಹದಿ ಎಂಬಾತನನ್ನ ನಿಮಿಷಾ ಪ್ರಿಯಾ ಕೊಲೆ ಮಾಡುತ್ತಾರೆ. ಪಾಸ್‌ಪೋರ್ಟ್ ವಶಪಡಿಸಿಕೊಂಡು ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದೇ ಕೊಲೆಗೆ ಕಾರಣ ಎಂದು ನಿಮಿಷಾ ಪ್ರಿಯಾ ಹೇಳಿಕೆ ನೀಡಿದ್ದಾರೆ.
2018: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆ ವಿಧಿಸಲಾಯಿತು.
2022: ಮರಣದಂಡನೆ ವಿರುದ್ಧದ ಸಲ್ಲಿಕೆಯಾಗಿದ್ದ ಮೇಲ್ಮನವಿ ವಜಾ.
2024: ಯೆಮೆನ್ ಸುಪ್ರೀಂ ಕೋರ್ಟ್ ಮರಣದಂಡನೆಯನ್ನು ಎತ್ತಿಹಿಡಿಯಿತು. ಇದರೊಂದಿಗೆ ಕೊಲೆಯಾದ ವ್ಯಕ್ತಿಯ ಕುಟುಂಬ ಕ್ಷಮಿಸುವುದು ಮಾತ್ರ ಉಳಿದಿರುವ ಮಾರ್ಗ.
ಪರಿಹಾರ ಹಣ ಅಥವಾ ಬ್ಲಡ್ ಮನಿ ಬಗ್ಗೆ ಗೊಂದಲ ಮತ್ತು ಕೊಲೆಯಾದ ತಲಾಲ್ ಕುಟುಂಬದಲ್ಲಿ ಒಮ್ಮತದ ಕೊರತೆ ಚರ್ಚೆಗಳಿಗೆ ಅಡ್ಡಿಯಾಯಿತು.
2024 ಏಪ್ರಿಲ್: ಯೆಮೆನ್‌ಗೆ ಬಂದ ನಿಮಿಷಾ ಪ್ರಿಯಾ ಅವರ ತಾಯಿ ಪ್ರೇಮಕುಮಾರಿ ಅವರಿಗೆ ನಿಮಿಷಾ ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕಿತು.
2024 ಡಿಸೆಂಬರ್ ಅಂತ್ಯ: ಯೆಮೆನ್ ಅಧ್ಯಕ್ಷರು ನಿಮಿಷಾ ಪ್ರಿಯಾ ಅವರ ಮರಣದಂಡನೆಗೆ ಅನುಮತಿ ನೀಡಿದರು. ಸಾಮಾಜಿಕ ಕಾರ್ಯಕರ್ತ ಸ್ಯಾಮ್ಯುಯೆಲ್ ಜೆರೋಮ್ ಜೊತೆ ನಿಮಿಷಾ ಪ್ರಿಯಾ ಅವರ ತಾಯಿ ಯೆಮೆನ್‌ನಲ್ಲಿ ಬಿಡುಗಡೆ ಪ್ರಯತ್ನ ನಡೆಸುತ್ತಿದ್ದಾಗ ಮರಣದಂಡನೆಗೆ ಅನುಮತಿ ನೀಡಲಾಗಿದೆ ಎಂಬ ಸುದ್ದಿ ಹೊರಬಿತ್ತು. ಬಿಡುಗಡೆ ಬಗ್ಗೆ ಸಕಾರಾತ್ಮಕ ಸುಳಿವುಗಳಿವೆ ಎಂದು ಯೆಮೆನ್‌ನಲ್ಲಿ ಕೆಲಸ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ಯಾಮ್ಯುಯೆಲ್ ಜೆರೋಮ್ ಹೇಳಿದ್ದಾರೆ. ಮಾನವೀಯತೆಯ ಆಧಾರದ ಮೇಲೆ ಮಧ್ಯಪ್ರವೇಶಿಸಲು ಸಿದ್ಧ ಎಂದು ಇರಾನ್ ತಿಳಿಸಿದೆ. ಇರಾನ್ ವಿದೇಶಾಂಗ ಉಪ ಮಂತ್ರಿಯವರ ಭಾರತ ಭೇಟಿಯ ಸಂದರ್ಭದಲ್ಲಿ ಈ ವಿಷಯ ತಿಳಿದುಬಂದಿದೆ.
ಇನ್ನೂ ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ನರ್ಸ್ ನಿಮಿಷಾ ಪ್ರಿಯಾ ಅವರ ಬಿಡುಗಡೆಗೆ ವಿದೇಶಾಂಗ ಸಚಿವಾಲಯದೊಂದಿಗೆ ಮಾತುಕತೆ ನಡೆಸಿ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ತಡೆಹಿಡಿಯಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದರು. ದೇಶದಲ್ಲಿನ ಆಂತರಿಕ ಸಮಸ್ಯೆಗಳಿಂದಾಗಿ 2016 ರಿಂದ ಭಾರತದಿಂದ ಯೆಮೆನ್‌ಗೆ ಪ್ರಯಾಣ ನಿಷೇಧವಿರುವುದು ನಿಮಿಷಪ್ರಿಯ ಅವರನ್ನು ಬಿಡುಗಡೆ ಮಾಡಲು ತೆಗೆದುಕೊಂಡ ಕ್ರಮಗಳಿಗೆ ಸವಾಲಾಗಿ ಪರಿಣಮಿಸಿದೆ.
ಇದೀಗ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ನಾವು ಒಂದು ಹಂತದ ತನಕ ನಮ್ಮ ಪ್ರಯತ್ನ ಮಾಡಬಹುದು. ಅದರ ನಂತರ ಸಾಧ್ಯವಿಲ್ಲ. ನಮ್ಮ ಎಲ್ಲಾ ಪ್ರಯತ್ನಗಳನ್ನ ನಾವು ಮಾಡಿ ಆಗಿದೆ. ಹೆಚ್ಚು ಸಾರ್ವಜನಿಕವಾಗಿ ಹೇಳದೆ ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಆದರೆ ಸರ್ಕಾರದ ಕಾರ್ಯಗಳಿಗೆ ಒಂದು ಮಿತಿ ಇರುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಸೇವ್ ನಿಮಿಷ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್’ನ ವಕೀಲರ ಪ್ರಕಾರ ಕೊಲೆಯಾದ ವ್ಯಕ್ತಿಯ ಕುಟುಂಬ ಆರ್ಥಿಕ ಪರಿಹಾರವನ್ನ ಪಡೆಯಲು ಒಪ್ಪಿಗೆ ನೀಡಿದರೆ ನಿಮಿಷಾ ಅವರನ್ನ ಉಳಿಸಬಹುದು. ಇನ್ನು ವ್ಯಕ್ತಿಯ ಕುಟುಂಬಕ್ಕೆ 1 ಮಿಲಿಯನ್ ಡಾಲರ್ ಅಥವಾ 8.5 ಕೋಟಿ ರೂ. ನೀಡುವುದಾಗಿ ಘೋಷಿಸಲಾಗಿತ್ತು, ಆದರೆ ಇದುವರೆಗೆ ಕುಟುಂಬದವರು ಅದನ್ನು ಸ್ವೀಕರಿಸಿಲ್ಲ. ಇದು ಅವರ ಗೌರವದ ಪ್ರಶ್ನೆಯಾಗಿರುವುದರಿಂದ ಹಣವನ್ನು ನಿರಾಕರಿಸಿದೆ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.
ಇದನ್ನೂ ಓದಿ: Investment: ದೇವನಹಳ್ಳಿ ಭೂಸ್ವಾಧೀನ ಕೈಬಿಟ್ಟ ಸರ್ಕಾರ – ಬಂಡವಾಳ ಹೂಡಿಕೆ ವಲಯದಲ್ಲಿ ಭಾರೀ ಹಿನ್ನಡೆ
Comments are closed.