Karkala : ಪರಶುರಾಮನ ಮೂರ್ತಿ ಪ್ರಕರಣ: ಕಾರ್ಕಳ ಶಾಸಕ ಸುನಿಲ್ ಕುಮಾರ್ ಟ್ವೀಟ್ ಮಾಡಿ ಹೇಳಿದ್ದೇನು?

Karkala: ಕಳೆದ ವರ್ಷದಿಂದಲೂ ಕರಾವಳಿಯಲ್ಲಿ ಬಾರಿ ಸದ್ದು ಮಾಡುತ್ತಿರುವ ಕಾರ್ಕಳ ಪರಶು ರಾಮ್ ಮೂರ್ತಿ ವಿವಾದದ ಕುರಿತು ಇದೀಗ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಶಿಲ್ಪಿಕೃಷ್ಣ ನಾಯ್ಕ ಹಿತ್ತಾಳೆಯಿಂದ ಪರಶುರಾಮ ಮೂರ್ತಿ ನಿರ್ಮಿಸಿರುವುದೇ ಹೊರತು ಕಂಚಿನಿಂದ ಅಲ್ಲ ಎಂಬುದು ಸಾಬೀತಾಗಿದೆ. ಈ ಮೂಲಕ ಕಾರ್ಕಳದ ಪರಶುರಾಮನ ಮೂರ್ತಿ ಕಾಂಗ್ರೆಸ್ ಹೇಳಿದಂತೆ ಫೈಬರ್ ನಿಂದ ಮಾಡಿದ್ದೂ ಅಲ್ಲ, ಬಿಜೆಪಿ ಹೇಳಿದಂತೆ ಕಂಚಿನದ್ದೂ ಅಲ್ಲ. ಬದಲಿಗೆ ಹಿತ್ತಾಳೆಯದ್ದು ಎಂಬುದು ಬಯಲಾಗಿದೆ.

ಹೌದು, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಉಮಿಕಲ್ ಬೆಟ್ಟದಲ್ಲಿ ಪರಶುರಾಮನ ಕಂಚಿನ ಪ್ರತಿಮೆ ರಚನೆಯಲ್ಲಿನ ಅಕ್ರಮದ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ. ಪರಶುರಾಮ ಪ್ರತಿಮೆಯನ್ನು ಪೈಬರ್ ನಿಂದ ನಿರ್ಮಿಸಲಾಗಿದೆ ಎಂದು ಕಾಂಗ್ರೆಸಿಗರು ನಡೆಸುತ್ತಿದ್ದ ಆರೋಪಕ್ಕೆ ಭಾರೀ ಹಿನ್ನಡೆ ಉಂಟಾಗಿದೆ.ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಪ್ರತಿಮೆಯನ್ನು ಹಿತ್ತಾಳೆಯಿಂದ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಇನ್ನು, ಪ್ರತಿಮೆ ಫೈಬರ್ನದ್ದು ಎಂಬ ಕಾಂಗ್ರೆಸ್ ನಾಯಕರ ಆರೋಪ ಸುಳ್ಳಾಗಿದೆ.
ಏನಿದು ಪರಶುರಾಮ ಥಿಂ ಪಾರ್ಕ್ ವಿವಾದ
2023ರ ಜನವರಿ 27 ರಂದು ಪರಶುರಾಮ ಥೀಂ ಪಾರ್ಕ್ ಅನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ್ದರು. ನಂತರದ ದಿನಗಳಲ್ಲಿ ಅಲ್ಲಿ ಸ್ಥಾಪಿಸಲಾಗಿದ್ದ ಪರಶುರಾಮ ಮೂರ್ತಿಯನ್ನು ಫೈಬರ್ನಿಂದ ನಿರ್ಮಿಸಲಾಗಿದೆ ಹೊರತು ಕಂಚಿನ ಪ್ರತಿಮೆ ಅಲ್ಲ ಎಂದು ಕಾಂಗ್ರೆಸ್ ನಾಯಕರು ಮತ್ತು ಸ್ಥಳೀಯರು ಆರೋಪ ಮಾಡಿದ್ದರು.
ಈ ಸಂಬಂಧ 2024 ರ ಜೂನ್ 21 ಕೃಷ್ಣ ಶೆಟ್ಟಿ ಎಂಬುವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ “ಕ್ರಿಶ್ ಆರ್ಟ್ ವರ್ಲ್ಡ್ ಸಂಸ್ಥೆಯು ಕಂಚಿನ ಪರಶುರಾಮ್ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ ಹಣ ಪಡೆದಿತ್ತು. ಆದರೆ, ಆರೋಪಿ ಶಿಲ್ಪಿ ಕೃಷ್ಣ ನಾಯ್ಕ ಕಂಚಿನ ಮೂರ್ತಿ ಮಾಡದೇ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪರಶುರಾಮ ಮೂರ್ತಿಯ ಶಿಲ್ಪಿ ಕೃಷ್ಣ ನಾಯ್ಕ ಕಂಚಿನ ಲೋಹದಿಂದ ಪರಶುರಾಮ ಮೂರ್ತಿಯನ್ನು ನಿರ್ಮಾಣ ಮಾಡದೇ, ಹಿತ್ತಾಳೆ ಲೋಹದಿಂದ ಪರಶುರಾಮ ಮೂರ್ತಿಯನ್ನು ನಿರ್ಮಾಣ ಮಾಡಿರುವುದು ತಜ್ಞರ ಪರಿಶೀಲನಾ ವರದಿಯಿಂದ ಹಾಗೂ ತನಿಖೆಯಿಂದ ಸಾಬೀತಾಗಿದೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾರ್ಕಳ ಶಾಸಕ ಸುನೀಲ್ ಕುಮಾರ್, ‘ಪರಶುರಾಮ ಥೀಂ ಪಾರ್ಕ್ ಹಾಗೂ ಪ್ರತಿಮೆಯ ಬಗ್ಗೆ ಕಾಂಗ್ರೆಸಿಗರು ನಡೆಸುತ್ತಿದ್ದ ನಿರಂತರ ಅಪಮಾನಕ್ಕೆ ಸೋಲಾಗಿದೆ. ಪ್ರತಿಮೆ ಫೈಬರ್‌ನದ್ದು ಎಂದು ನಡೆಸುತ್ತಿದ್ದ ಟೂಲ್ ಕಿಟ್ ಅಪಪ್ರಚಾರ ಸುಳ್ಳು ಎಂಬುದು ಪೊಲೀಸ್ ತನಿಖೆಯಿಂದಲೇ ಸಾಬೀತಾಗಿದೆ. ಪ್ರತಿಮೆಯನ್ನು ಹಿತ್ತಾಳೆಯಿಂದ ನಿರ್ಮಿಸಲಾಗಿದೆ ಎಂದು ಕಾರ್ಕಳ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಪರಶುರಾಮನ ಪ್ರತಿಮೆಯ ಸೊಂಟದ ಮೇಲ್ಭಾಗವನ್ನು ಮರು ವಿನ್ಯಾಸ ಉದ್ದೇಶದಿಂದ ತೆಗೆದಿದ್ದು ಎಂಬುದನ್ನೂ ನ್ಯಾಯಲಯಕ್ಕೆ ಸ್ಪಷ್ಟಪಡಿಸಿದ್ದಾರೆ. ಇನ್ನಾದರೂ ರಾಜ್ಯ ಸರ್ಕಾರ ಪರಶುರಾಮ ಥೀಂ ಪಾರ್ಕ್ ಗೆ ನಿಗದಿ ಮಾಡಿದ್ದ ಅನುದಾನವನ್ನು ಬಿಡುಗಡೆ ಮಾಡುವ ಜತೆಗೆ ಈ ತಾಣವನ್ನು ಪ್ರವಾಸೋದ್ಯಮಕ್ಕೆ ಮತ್ತೆ ತೆರೆಯಬೇಕು. ಅಭಿವೃದ್ಧಿ ವಿಚಾರದಲ್ಲಿ ನಡೆಸುವ ದ್ವೇಷದ ರಾಜಕಾರಣಕ್ಕೆ ತೆರೆ ಬೀಳಬೇಕೆಂದು ಒತ್ತಾಯಿಸುತ್ತೇನೆ’ ಎಂದು ಬರೆದಿದ್ದಾರೆ.
Comments are closed.