Karkala : ಕಾರ್ಕಳದ ಪರಶುರಾಮ ಪ್ರತಿಮೆ ವಿವಾದ – ಟ್ವೀಟ್ಟ್ ಮಾಡಿ ಕಾಂಗ್ರೆಸ್ ಕೈಗೆ ತಗಲಾಕ್ಕೊಂಡ ಶಾಸಕ ಸುನಿಲ್ ಕುಮಾರ್ !!

Karkala : ಕಾರ್ಕಳದ ಪರಶುರಾಮ ಪ್ರತಿಮೆ ವಿಚಾರ ಇದೀಗ ದೊಡ್ಡ ವಿವಾದವಾಗಿ ಪರಿಣಮಿಸಿದೆ.ವಿವಾದ ಶುರುವಾದ ಸಂದರ್ಭದಲ್ಲಿ ಕಾಂಗ್ರೆಸ್ ಈ ಪ್ರತಿಮೆಯು ಫೈಬರ್ ನದ್ದು ಎಂದು ಹೇಳಿ ದೂರು ದಾಖಲಿಸಿತ್ತು. ಆದರೆ ಪರಶುರಾಮ ಮೂರ್ತಿ ಸ್ಥಾಪನೆಯ ನೇತೃತ್ವ ವಹಿಸಿದ್ದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಮೂರ್ತಿ ಸಂಪೂರ್ಣ ಕಂಚಿನಿಂದ ಮಾಡಲ್ಪಟ್ಟಿದೆ ಎಂದು ವಾದಿಸಿದ್ದರು. ಈ ವಾದಗಳ ನಡುವೆ ಇದೀಗ ಚಾರ್ಜ್ ಸೀಟ್ ಸಲ್ಲಿಕೆಯಾಗಿದ್ದು ಇದರಲ್ಲಿ ಪರಶುರಾಮನ ಮೂರ್ತಿಯನ್ನು ಸಂಪೂರ್ಣವಾಗಿ ಹಿತ್ತಾಳೆಯಿಂದ ಮಾಡಲಾಗಿದೆ ಮಾಹಿತಿ ನೀಡಲಾಗಿದೆ.

ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಪ್ರತಿಮೆಯನ್ನು ಹಿತ್ತಾಳೆಯಿಂದ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಒಟ್ಟಿನಲ್ಲಿ ಕಾರ್ಕಳದ ಪರಶುರಾಮನ ಮೂರ್ತಿ ಕಾಂಗ್ರೆಸ್ ಹೇಳಿದಂತೆ ಫೈಬರ್ ನಿಂದ ಮಾಡಿದ್ದೂ ಅಲ್ಲ, ಬಿಜೆಪಿ ಹೇಳಿದಂತೆ ಕಂಚಿನದ್ದೂ ಅಲ್ಲ. ಬದಲಿಗೆ ಹಿತ್ತಾಳೆಯದ್ದು ಎಂಬುದು ಬಯಲಾಗಿದೆ. ಈ ವರದಿ ಬರುತ್ತಿದ್ದಂತೆ ಇದುವರೆಗೂ ಪರಶುರಾಮನ ಮೂರ್ತಿ ಕಂಚಿನದ್ದು ಎಂದು ಪ್ರತಿಪಾದಿಸುತ್ತಿದ್ದ ಶಾಸಕ ಸುನಿಲ್ ಕುಮಾರ್ ಅವರು ಇದೀಗ ಉಲ್ಟಾ ಹೊಡೆದಿದ್ದಾರೆ. ಪೋಸ್ಟ್ ಒಂದನ್ನು ಶೇರ್ ಮಾಡುವ ಮುಖಾಂತರ ಸಿಕ್ಕಿಬಿದ್ದಿದ್ದಾರೆ.
ಹೌದು, ರಾಜ್ಯ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಗೀತಾ ವಾಗ್ಳೆ ಸುನಿಲ್ ಕುಮಾರ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಅವರು ಸಿಕ್ಕಿಬೀಳುವಂತೆ ಮಾಡಿದ್ದಾರೆ. ಈ ಕುರಿತಾಗಿ ಮಾತನಾಡಿದ ಅವರು ಕಾರ್ಕಳದಲ್ಲಿ ಸ್ಥಾಪಿಸಿರುವ ಪರಶುರಾಮನ ಪ್ರತಿಮೆಯ ಕಾಲುಗಳು ಫೈಬರ್ ನಿಂದ ಮಾಡಲಾಗಿದೆ ಎಂದು ಹೇಳಿದ್ದ ಕಾಂಗ್ರೆಸ್ ಗೆ ಸೋಲಾಗಿದೆ ಎಂದು ಲೇವಡಿ ಮಾಡಿರುವ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಅವರ ಬಗ್ಗೆ ಅನುಕಂಪ ಮೂಡುತ್ತಿದೆ.
ಶಾಸಕರೇ, ಕಾಂಗ್ರೆಸ್ ಪಕ್ಷದ ಬಗ್ಗೆ ಹೇಳುವ ಮೊದಲೊಮ್ಮೆ ನ್ಯಾಯಾಲಯದ ಇನ್ನೊಂದು ತೀರ್ಪನ್ನು ನಿಮಗೆ ನೆನಪಿಸುತ್ತಿದ್ದೇವೆ. ಪರಶುರಾಮನನ್ನು ಕಾರ್ಕಳದ ಉಮಿಕಲ್ ಗುಡ್ಡದ ಮೇಲೆ ಪ್ರತಿಷ್ಠಾಪಿಸಿದಾಗ ನೀವು ಹೇಳಿದ್ದೇನು?ಈ ಮೂರ್ತಿಯನ್ನು ಪೂರ್ತಿಯಾಗಿ ಕಂಚಿನಿಂದ ತಯಾರಿಸಲಾಗಿದೆ ಎಂದಿದ್ದೀರಿ ತಾನೇ? ನಿಮ್ಮ ಹಿಂಬಾಲಕರೂ ಇದನ್ನೇ ಹೇಳಿಕೊಂಡು ತಿರುಗಿದ್ದರಲ್ಲವೇ? ಈಗ ಕೋರ್ಟ್ ಹೇಳಿರುವುದೇನು? ಈ ಪ್ರತಿಮೆ ಕಂಚಿನದ್ದಲ್ಲ ಎಂದಲ್ಲವೇ? ಕೋರ್ಟ್ ಇದನ್ನು ಸ್ಪಷ್ಟವಾಗಿ ಹೇಳಿದ್ದರೂ ಅಡಿಗೆ ಬಿದ್ದರೂ ಮೂಗು ಮೇಲೆ ಎಂಬ ಮಾತಿನಂತೆ ನಿಮಗಾದ ಸೋಲನ್ನು ಮುಚ್ಚಿಟ್ಟುಕೊಂಡು ನೀವು ಕಾಂಗ್ರೆಸ್ ಪಕ್ಷದ ನಾಯಕರನ್ನು ಲೇವಡಿ ಮಾಡಿರುವುದು ಎಷ್ಟು ಸರಿ? ಈಗ ಕಾಂಗ್ರೆಸ್ ಗೆದ್ದಿದೆ. ಸೋತಿದ್ದು ನೀವು ಎನ್ನುವುದನ್ನು ಒಪ್ಪಿಕೊಳ್ಳಿ ಎಂದು ಜಾಡಿಸಿದ್ದಾರೆ.
ಅಲ್ಲದೆ ಸುನಿಲ್ ಕುಮಾರ್ ಅವರೇ, ಕಾಂಗ್ರೆಸ್ ಪಕ್ಷದವರು ಪರಶುರಾಮ ಮೂರ್ತಿಯ ನಿರ್ಮಾಣದ ಬಗ್ಗೆ ಸಂಶಯ ವ್ಯಕ್ತಪಡಿಸಿರದಿದ್ದರೆ ನೀವು ಮಾಡಿದ ಭ್ರಷ್ಟಾಚಾರದ ವಾಸನೆಯೂ ನಮ್ಮ ಮುಗ್ಧ ಮತದಾರರ ಹತ್ತಿರ ಸುಳಿಯುತ್ತಿರಲಿಲ್ಲ. ಈಗ ನಿಮ್ಮೊಳಗಿನ ಇನ್ನೊಂದು ಕರಾಳ ಮುಖ ಎಲ್ಲಾ ಮತದಾರರಿಗೂ ತಿಳಿದಿದೆ. ಸುನಿಲ್ ಕುಮಾರ್ ಅವರೇ, ಆನೆ ಕದ್ದರೂ ಕಳ್ಳ,ಅಡಿಕೆ ಕದ್ದರೂ ಕಳ್ಳ ಎಂಬ ಗಾದೆಯ ಮಾತು ನೆನಪಿದೆಯೇ?ನೀವೆಂದದ್ದು ಕಂಚಿನ ಮೂರ್ತಿ,ಈಗ ಅದು ಕಂಚಿನ ಮೂರ್ತಿ ಅಲ್ಲ ಎಂದಾದ ಮೇಲೆ ಹಿತ್ತಾಳೆಯದ್ದಾಗಿರಲಿ ಅಥವಾ ಫೈಬರ್ ದ್ದಾಗಿರಲಿ, ಯಾವುದೇ ವ್ಯತ್ಯಾಸ ಸಿಗುವುದಿಲ್ಲ. ನೀವು ಹೇಳಿದ್ದು ಸುಳ್ಳು, ನೀವು ಮಾಡಿದ್ದು ಮೋಸ ಎಂಬುದು ಜಗಜ್ಜಾಹೀರಾಗಿದೆ. ಹೀಗಿರುವಾಗ ವೃಥಾ ಈ ಹೇಳಿಕೆ ಕೊಡಬೇಕಾದ ಅಗತ್ಯವೇನಿದೆ? ಅವಮಾನದಿಂದ ವಿಚಲಿತರಾಗಿರುವ ನೀವು ಹತಾಶರಾಗಿ ಈ ಹೇಳಿಕೆ ನೀಡಿದ್ದೀರಿ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
ಸುನಿಲ್ ಕುಮಾರ್ ಮಾಡಿದ ಟ್ವೀಟ್ ಏನು?
‘ಪರಶುರಾಮ ಥೀಂ ಪಾರ್ಕ್ ಹಾಗೂ ಪ್ರತಿಮೆಯ ಬಗ್ಗೆ ಕಾಂಗ್ರೆಸಿಗರು ನಡೆಸುತ್ತಿದ್ದ ನಿರಂತರ ಅಪಮಾನಕ್ಕೆ ಸೋಲಾಗಿದೆ. ಪ್ರತಿಮೆ ಫೈಬರ್‌ನದ್ದು ಎಂದು ನಡೆಸುತ್ತಿದ್ದ ಟೂಲ್ ಕಿಟ್ ಅಪಪ್ರಚಾರ ಸುಳ್ಳು ಎಂಬುದು ಪೊಲೀಸ್ ತನಿಖೆಯಿಂದಲೇ ಸಾಬೀತಾಗಿದೆ. ಪ್ರತಿಮೆಯನ್ನು ಹಿತ್ತಾಳೆಯಿಂದ ನಿರ್ಮಿಸಲಾಗಿದೆ ಎಂದು ಕಾರ್ಕಳ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಪರಶುರಾಮನ ಪ್ರತಿಮೆಯ ಸೊಂಟದ ಮೇಲ್ಭಾಗವನ್ನು ಮರು ವಿನ್ಯಾಸ ಉದ್ದೇಶದಿಂದ ತೆಗೆದಿದ್ದು ಎಂಬುದನ್ನೂ ನ್ಯಾಯಲಯಕ್ಕೆ ಸ್ಪಷ್ಟಪಡಿಸಿದ್ದಾರೆ. ಇನ್ನಾದರೂ ರಾಜ್ಯ ಸರ್ಕಾರ ಪರಶುರಾಮ ಥೀಂ ಪಾರ್ಕ್ ಗೆ ನಿಗದಿ ಮಾಡಿದ್ದ ಅನುದಾನವನ್ನು ಬಿಡುಗಡೆ ಮಾಡುವ ಜತೆಗೆ ಈ ತಾಣವನ್ನು ಪ್ರವಾಸೋದ್ಯಮಕ್ಕೆ ಮತ್ತೆ ತೆರೆಯಬೇಕು. ಅಭಿವೃದ್ಧಿ ವಿಚಾರದಲ್ಲಿ ನಡೆಸುವ ದ್ವೇಷದ ರಾಜಕಾರಣಕ್ಕೆ ತೆರೆ ಬೀಳಬೇಕೆಂದು ಒತ್ತಾಯಿಸುತ್ತೇನೆ’ ಎಂದು ಬರೆದಿದ್ದರು.
Comments are closed.