Telangana: ‘ನನ್ನ ಕೋಳಿಗೆ ನ್ಯಾಯ ಕೊಡಿಸಿ ಸರ್’ – ಕೋಳಿ ಹಿಡಿದು ಪೊಲೀಸ್ ಠಾಣೆಗೆ ಬಂದ ಅಜ್ಜಿ

Telangana: ಇಂದು ಪೊಲೀಸ್ ಠಾಣೆಗಳಲ್ಲಿ ವಿಚಿತ್ರ ರೀತಿಯ ಪ್ರಕರಣಗಳು ದಾಖಲಾಗುವುದನ್ನು ನಾವು ನೋಡುತ್ತೇವೆ. ಇದೀಗ ಅಂತದ್ದೇ ಒಂದು ಘಟನೆ ನಡೆದಿದ್ದು ಅಜ್ಜಿ ಒಬ್ಬರು ಕೋಳಿಯನ್ನು ಹಿಡಿದುಕೊಂಡು ನನ್ನ ಕೋಳಿಗೆ ನ್ಯಾಯ ಕೊಡಿ ಎಂದು ಪೊಲೀಸ್ ಠಾಣೆಗೆ ಬಂದ ವಿಚಿತ್ರ ಘಟನೆ ನಡೆದಿದೆ.

ಹೌದು, ನಕ್ರೆಕಲ್ ಮೂಲದ ನಿವಾಸಿ ಗಂಗಮ್ಮ ಎಂಬುವವರು ಕೋಳಿಯನ್ನು ಹಿಡಿದ ಪೊಲೀಸ್ ಠಾಣೆಗೆ ಬಂದ ಮಹಿಳೆ. ಗಂಗಮ್ಮ ತುಂಬಾ ಇಷ್ಟವಾದ ಸಾಕು ಕೋಳಿ ಒಂದಿತ್ತು. ಅದು ಪ್ರತಿದಿನ ಹೊರಗೆ ಹೋಗಿ ಸಂಜೆ ಮನೆಗೆ ತಪ್ಪದೇ ಬರುತ್ತಿತ್ತು. ಇದೇ ಕೋಳಿ ಪಕ್ಕದ ರಾಕೇಶ್ ಮನೆಯ ಕೊಟ್ಟಿಗೆಯಲ್ಲಿ ಬೀಜಗಳನ್ನು ತಿನ್ನಲು ಪ್ರಾರಂಭಿಸಿತು. ಇದನ್ನು ನೋಡಿ ರಾಕೇಶ್ ಕೋಪಗೊಂಡು ಕೋಲಿನಿಂದ ಕೋಳಿಗೆ ಹೊಡೆದರು. ಇದರ ಪರಿಣಾಮ ಕೋಳಿಯ ಕಾಲುಗಳು ಮುರಿದವು. ಕೋಳಿಯ ಕಾಲುಗಳು ಮುರಿದಿರುವುದನ್ನು ಗಮನಿಸಿದ ಗಂಗಮ್ಮ, ನಕ್ರೆಕಲ್ ಪೊಲೀಸ್ ಠಾಣೆಗೆ ಹೋಗಿ ಅಳುತ್ತಾ ದೂರು ದಾಖಲಿಸಿದ್ದಾರೆ.
ನನ್ನ ಕೋಳಿಗೆ ನ್ಯಾಯ ಬೇಕು. ರಾಕೇಶ್ ಅದನ್ನು ಕೋಲಿನಿಂದ ಹೊಡೆದಿದ್ದಾನೆ. ಹೀಗಾಗಿ ನನ್ನ ಕೋಳಿಗೆ ನಡೆಯಲು ಆಗುತ್ತಿಲ್ಲ. ನನಗೆ ಹಣ ಬೇಡ. ರಾಕೇಶ್‌ಗೆ ಶಿಕ್ಷೆಯಾಗಬೇಕು ಎಂದು ಗಂಗಮ್ಮ ಆಗ್ರಹಿಸಿದ್ದಾರೆ. ಆರಂಭದಲ್ಲಿ ಪೊಲೀಸರು ಗಂಗಮ್ಮರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಗಂಗಮ್ಮರ ಒತ್ತಾಯದಿಂದ ಗೊಂದಲಕ್ಕೊಳಗಾದ ಪೊಲೀಸರು, ಕೊನೆಗೆ ಗ್ರಾಮಕ್ಕೆ ಬಂದು ಪಂಚಾಯತಿ ನಡೆಸುವುದಾಗಿ ಭರವಸೆ ನೀಡಿದರು.
Comments are closed.