Dead Body: ಅಂತಿಮ ಸಂಸ್ಕಾರಕ್ಕೆ ಮೃತ ದೇಹ ಸಾಗಿಸಲು ಹರ ಸಾಹಸ – ಕನ್ನoಡ ಬಾಣೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ

Dead Body: ಕೊಡಗು ಜಿಲ್ಲೆ ಹೇಗಿದೆ ಎಂದರೆ ದೀಪದ ಕೆಳಗೆ ಕತ್ತಲು ಆವರಿಸಿದಂತೆ ಇಲ್ಲಿನ ಜನ ಅ ರೀತಿ ಬದುಕುತ್ತಿದ್ದಾರೆ ಎಂಬ ಮಾತು ಈ ಹಿಂದೆ ಕೊಡಗು ಉಪ ವಿಭಾಗಾಧಿಕಾರಿಯಾಗಿದ್ದವರು ಹೇಳಿದ ಮಾತು ಅಕ್ಷರ ಸತ್ಯ ಎಂಬುದಕ್ಕೆ ಇಂದು ಮಡಿಕೇರಿಯ ಕನ್ನಂಡ ಬಾಣೆಯಲ್ಲಿ ನಡೆದ ಘಟನೆ ಮತ್ತಷ್ಟು ಪುಷ್ಟಿಯನ್ನು ನೀಡಿದೆ.

ಕೊಡಗು ಜಿಲ್ಲಾ ಕೇಂದ್ರದಲ್ಲಿ ಮನೆಗೆ ರಸ್ತೆ ಇಲ್ಲದೆ ಮೃತದೇಹ ಹೊತ್ತು ಹೋಗುವ ಪರಿಸ್ಥಿತಿ ಸೂಚನೀಯವಾಗಿದೆ. ಮಡಿಕೇರಿ ನಗರ ಸಭೆಯ ವ್ಯಾಪ್ತಿಯ ನಗರದೊಳಗೆ ಹಲವು ಮನೆಗಳಿಗೆ ಇನ್ನು ಸಮರ್ಪಕವಾದ ರಸ್ತೆ ಇಲ್ಲ. ಅದರಲ್ಲಿ ಒಂದು ಕನ್ನಂಡಬಾಣೆ ವಾರ್ಡ್. ಇಲ್ಲಿನ ಸುಮಾರು 50 ಕುಟುಂಬಗಳ ಮನೆಗಳಿಗೆ ರಸ್ತೆ ಇಲ್ಲ, ಮೆಟ್ಟಿಲು ಏರಿ ಹೋಗ್ಬೇಕು, ಗರ್ಭಿಣಿ ಸ್ತ್ರೀಯರು ಹೆರಿಗೆಗೆ ಆಸ್ಪತ್ರೆಗೆ ತೆರಳಲು, ಮೃತದೇಹ ಮನೆಗೆ ತರಲು, ವಾಪಾಸ್ ರುದ್ರ ಭೂಮಿಗೆ ಕೊಂಡೊಯ್ಯಲು ಇಲ್ಲಿನವರು ಭಾರೀ ಸಂಕಟಪಡುತ್ತಾರೆ.
ಇದಕ್ಕೆ ಸಾಕ್ಷಿ ನಿನ್ನೆ ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದ ಕನ್ನಂಡಬಾಣೆಯ ಧರ್ಮಣ್ಣ(55) ಆಸ್ಪತ್ರೆಯಿಂದ ಮೃತದೇಹ ಮನೆಗೆ ತರುವಾಗ ಕುಟುಂಬಸ್ಥರು ನರಕಯಾತನೆ ಅನುಭವಿಸಿದರು. ಧರ್ಮಣ್ಣನವರ ಶವವನ್ನು ಮನೆಗೆ ತರಲು ಹರಸಾಹಸಪಟ್ಟ ಕುಟುಂಬಸ್ಥರು, ಮೃತದೇಹವನ್ನು ಹೊತ್ತುಕೊಂಡೇ 100ಕ್ಕೂ ಅಧಿಕ ಮೆಟ್ಟಿಲು ಏರಿ ಇಳಿಯುವ ಪರಿಸ್ಥಿತಿ ಇಲ್ಲಿ ಕಂಡು ಬಂತು.
ನಮ್ಮ ಸರಕಾರ 1992ರಲ್ಲೇ ಕನ್ನಂಡಬಾಣೆ ಭಾಗದ ಜನರಿಗೆ ಹಕ್ಕುಪತ್ರವನ್ನೂ ನೀಡಿದ್ದರೂ, ರಸ್ತೆ ವ್ಯವಸ್ಥೆ ಸಮರ್ಪಕವಾಗಿ ಮಾಡಿಲ್ಲ. ಕನ್ನಂಡಬಾಣೆಗೆ ರಸ್ತೆ ನಿರ್ಮಾಣಕ್ಕೆ 25 ಲಕ್ಷ ಹಣ ಮೀಸಲಾಗಿ ಇಟ್ಟು ಟೆಂಡರ್ ಕೂಡ ಆಗಿದೆ. ಆದರೆ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವುದರಿಂದ ರಸ್ತೆ ಮಾಡಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ಅರಣ್ಯ ಇಲಾಖೆ ತಡೆ ಒಡ್ಡಿದ್ದರಿಂದ ಹಾಗು ಅನುಮತಿ ಕೊಡದ ಕಾರಣ ರಸ್ತೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಂಬಂಧಿಸಿದವರು ಹೇಳುತ್ತಾರೆ.
ರಸ್ತೆಗೆ ಹಣ ಬಿಡುಗಡೆಯಾದರೂ ಕೂಡ ರಸ್ತೆ ಮಾಡಲು ಬಿಡದ ಅರಣ್ಯ ಇಲಾಖೆಯಿಂದ ಮೆಟ್ಟಿಲು ಏರಿಯೇ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದಾರೆ ಇಲ್ಲಿನ ಜನ. ಇಲ್ಲಿನ ನಗರ ಸಭಾ ಸದಸ್ಯರು ಈ ಬಗ್ಗೆ ಪ್ರಯತ್ನಿಶೀಲರಾಗಿದ್ರೂ ಕೂಡ ಇದುವರೆಗೂ ಯಾವುದೇ ಪ್ರಯೋಜನ ಕಂಡಿಲ್ಲ.
ಈ ಸಮಸ್ಯೆ ಸರ್ಕಾರದ ಉನ್ನತ ಮಟ್ಟದಲ್ಲಿ ಬಗೆಹರಿಯಬೇಕಾಗಿದೆ. ಮಾನವೀಯ ನೆಲಗಟ್ಟಿನಲ್ಲಿ ಕೊಡಗಿನ ಇಬ್ಬರು ಶಾಸಕರು ಹಾಗೂ ಉಸ್ತುವಾರಿ ಸಚಿವರು, ಇಲ್ಲಿ ಉಂಟಾಗಿರುವ ಕಾನೂನಾತ್ಮಕ ತೊಡಕನ್ನು ಬಗೆಹರಿಸಿ, ಜನರ ಮೂಲಭೂತ ಸೌಕರ್ಯಕ್ಕೆ ಅಡ್ಡಿಯಾಗದ ರೀತಿಯಲ್ಲಿ ಇಲ್ಲಿನ ನಿವಾಸಿಗಳ ಸಂಕಷ್ಟವನ್ನು ಬಗೆಹರಿಸಬೇಕಾಗಿದೆ ಎಂಬುದು ನಗರಸಭಾ ಸದಸ್ಯರ ಕೋರಿಕೆ ಕೂಡ ಆಗಿದೆ.
Comments are closed.