Crime: ಬಂಜೆತನ ನಿವಾರಿಸ್ತಿನಿ ಅಂತ ಟಾಯ್ಲೆಟ್ ನೀರು ಕುಡಿಸಿದ ಮಾಂತ್ರಿಕ: ಮಹಿಳೆ ಸಾವು

Crime: ಮಹಿಳೆಗೆ ಮದುವೆಯಾಗಿ 10 ವರ್ಷವದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಆಕೆಯ ಕುಟುಂಬದವರು ಮಾಂತ್ರಿಕನ ಬಳಿ ಕರೆದೊಯ್ದಿದ್ದು, ಆಕೆಯ ಬಂಜೆತನಕ್ಕೆ ಔಷಧಿ ನೀಡುವಂತೆ ಕೇಳಿದ್ದಾರೆ. ಆದರೆ ಆ ಪಾಪಿ ಮಾಂತ್ರಿಕ ಮಾಡಿದ ಅವಾಂತರಕ್ಕೆ ಮಗುವಿನ ಆಸೆಯಿಂದ ಚಿಕಿತ್ಸೆಗೆ ಬಂದ 35 ವರ್ಷದ ಮಹಿಳೆಯ ಜೀವವೇ ಹೋಗಿದೆ.

ಮಾಹಿತಿ ಪ್ರಕಾರ, ಉತ್ತರ ಪ್ರದೇಶದಲ್ಲಿ ಅಝಂಗರ್‌ನ ಅನುರಾಧ ಎಂಬ ಮಹಿಳೆಗೆ 10 ವರ್ಷದ ಹಿಂದೆ ಮದುವೆಯಾಗಿತ್ತು. ಆದರೆ ಆಕೆಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಆಕೆಯ ಅತ್ತೆ ಹಾಗೂ ಅಮ್ಮ ಇಬ್ಬರು ಸೇರಿ ಆಕೆಯನ್ನು ಚಂದು ಎಂಬ ಮಾಂತ್ರಿಕ ಬಳಿ ಕರೆದುಕೊಂಡು ಬಂದಿದ್ದಾರೆ. ಆತ ಅನುರಾಧ ಅವರ ಕುಟುಂಬಕ್ಕೆ ಆಕೆಯ ಬಂಜೆತನವನ್ನು ನಿವಾರಿಸುವುದಾಗಿ ಭರವಸೆ ನೀಡಿದ್ದಾನೆ. ಇದಕ್ಕಾಗಿ 1 ಲಕ್ಷ ರೂಪಾಯಿ ವೆಚ್ಚವಾಗುವುದು ಎಂದು ಅವರ ಮನೆಯವರಿಗೆ ಹೇಳಿದ್ದಾನೆ. ಜೊತೆಗೆ ಅಡ್ವಾನ್ಸ್ ರೂಪದಲ್ಲಿ 22 ಸಾವಿರ ಹಣವನ್ನು ತೆಗೆದುಕೊಂಡಿದ್ದಾನೆ. ಉಳಿದ ಮೊತ್ತವನ್ನು ಚಿಕಿತ್ಸೆ ನೀಡಿದ ನಂತರ ನೀಡುವಂತೆ ಮನೆಯವರಿಗೆ ಮಾಂತ್ರಿಕ ಚಂದು ಹೇಳಿದ್ದ.
ಇದಾದ ನಂತರ ಇವರು ಮಾಂತ್ರಿಕ ಚಿಕಿತ್ಸೆ ಎಂದು ಹೇಳಿಕೊಂಡು ಮಹಿಳೆ ಅನುರಾಧರನ್ನು ಮಾಂತ್ರಿಕ ಚಂದು ಆತನ ಪತ್ನಿ ಶಭ್ನಂ ಹಾಗೂ ಇಬ್ಬರು ಸಹಾಯಕರು ಹಿಡಿದುಕೊಂಡಿದ್ದಾರೆ. ಅಲ್ಲದೇ ಆಕೆಯ ಕತ್ತನ್ನು ಗಟ್ಟಿಯಾಗಿ ಹಿಡಿದುಕೊಂಡು ಒತ್ತಾಯಪೂರ್ವಕವಾಗಿ ಟಾಯ್ಲೆಟ್ ನೀರನ್ನು ಕುಡಿಸಿದ ನಂತರ ಅನುರಾಧ ಸ್ಥಿತಿ ಚಿಂತಾಜನಕವಾಗಿದೆ. ಕೂಡಲೇ ಮಾಂತ್ರಿಕ ಚಂದು ಆಕೆಯನ್ನು ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾನೆ. ಆದರೆ ಅಲ್ಲಿ ಅನುರಾಧ ಸಾವಿಗೀಡಾಗಿದ್ದು, ಆಕೆಯ ಸಾವು ಖಚಿತವಾಗುತ್ತಿದ್ದಂತೆ ಮಾಂತ್ರಿಕ ಚಂದು ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯ ನಂತರ ಅನುರಾಧ ಅವರ ತಂದೆ ಬಲಿರಾಂ ಯಾದವ್ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ಚಂದುವನ್ನು ಬಂಧಿಸಿದ್ದಾರೆ. ಆತನ ಪತ್ನಿ ಹಾಗೂ ಸಹಚರರ ವಿರುದ್ಧವೂ ಪ್ರಕರಣ ದಾಖಲಾಗಿದೆ.
Comments are closed.