Iran-Isrel War: ಕೊನೆಗೂ ಕದನ ವಿರಾಮ ಘೋಷಿಸಿಕೊಂಡ ಇರಾನ್ ಮತ್ತು ಇಸ್ರೇಲ್ !! 12 ದಿನಗಳ ಯುದ್ಧಕ್ಕೆ ತೆರೆ

Iran-Isrel War: ಇಸ್ರೇಲ್ ಮತ್ತು ಇರಾನ್ ಯುದ್ಧ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದೀಗ ಇಸ್ರೇಲ್ ಮೇಲೆ ಆರು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ಮಾಡಿದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಕದನ ವಿರಾಮ ಜಾರಿ ಘೋಷಣೆಯಾಗಿದೆ.

ಹೌದು, ಇದೀಗ ಕದನ ವಿರಾಮ ಜಾರಿಗೆ ಬಂದಿದೆ ಎಂದು ಟೆಹ್ರಾನ್ ಖಚಿತ ಪಡಿಸಿದೆ. ಇದರೊಂದಿಗೆ ಕಳೆದ 12 ದಿನಗಳಿಂದ ನಡೆದ ಭೀಕರ ಯುದ್ಧಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಣೆ ಮಾಡಿದ್ದರು. ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ನಲ್ಲಿ ಬರೆದುಕೊಂಡಿರುವ ಟ್ರಂಪ್, ಎಲ್ಲರಿಗೂ ಅಭಿನಂದನೆಗಳು! ಇಸ್ರೇಲ್ ಮತ್ತು ಇರಾನ್ ನಡುವೆ ಸಂಪೂರ್ಣ ಕದನ ವಿರಾಮ ನಡೆಯಲಿದೆ. ಕದನ ವಿರಾಮಕ್ಕೆ ಎರಡೂ ದೇಶಗಳು ಸಂಪೂರ್ಣವಾಗಿ ಒಪ್ಪಿಕೊಂಡಿವೆ. 12 ದಿನಗಳ ಯುದ್ಧದ ಅಧಿಕೃತ ಅಂತ್ಯವನ್ನು ಜಗತ್ತು ಸ್ವಾಗತಿಸುತ್ತದೆ ಎಂದು ಹೇಳಿದ್ದರು.
ಇನ್ನು ಇರಾನ್ನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಘ್ಚಿ ಕದನ ವಿರಾಮದ ಸುಳಿವು ನೀಡಿದ್ದರು. ಇಸ್ರೇಲ್‌ನ ಆಕ್ರಮಣಕ್ಕೆ ತಕ್ಕ ಶಿಕ್ಷೆ ವಿಧಿಸಲು ನಮ್ಮ ಪ್ರಬಲ ಸಶಸ್ತ್ರ ಪಡೆಗಳ ಮಿಲಿಟರಿ ಕಾರ್ಯಾಚರಣೆಗಳು ಕೊನೆಯ ನಿಮಿಷದವರೆಗೆ ಅಂದರೆ, ಬೆಳಗ್ಗೆ 4 ಗಂಟೆಯವರೆಗೂ ಮುಂದುವರೆದವು. ನಮ್ಮ ಪ್ರೀತಿಯ ದೇಶವನ್ನು ತಮ್ಮ ಕೊನೆಯ ರಕ್ತದ ಹನಿಯವರೆಗೂ ರಕ್ಷಿಸಲು ಸಿದ್ಧರಾಗಿರುವ ಮತ್ತು ಶತ್ರುಗಳ ಯಾವುದೇ ದಾಳಿಗೆ ಕೊನೆಯ ಕ್ಷಣದವರೆಗೂ ಪ್ರತಿಕ್ರಿಯಿಸಿದ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗೆ ಎಲ್ಲ ಇರಾನಿಯನ್ನರೊಂದಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.
Comments are closed.