RCB: RCB ವಿಜಯೋತ್ಸವಕ್ಕೆ ಸರ್ಕಾರದಿಂದಲೇ ತಡೆ! ಮೆರವಣಿಗೆ ಬೇಡ ಅಂದದ್ದು ಯಾಕೆ?

ಬೆಂಗಳೂರು: ಬೆಂಗಳೂರಿನಲ್ಲಿ ಇಂದು ನಡೆಯಲು ಉದ್ದೇಶಿಸಿದ್ದ ಆರ್‌ಸಿಬಿ ವಿಜಯೋತ್ಸವಕ್ಕೆ ತಡೆ ಬಿದ್ದಿದೆ. ಬೆಂಗಳೂರಿನ ಪೊಲೀಸರು ಅನುಮತಿ ನಿರಾಕರಿಸಿರುವ ಹಿನ್ನೆಲೆ ಬುಧವಾರ (ಜೂನ್ 4) ಮಧ್ಯಾಹ್ನ ನಡೆಸಲು ಉದ್ದೇಶಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ ವನ್ನು ರದ್ದುಗೊಳಿಸಲಾಗಿದೆ.

ಇಂದು ಮಧ್ಯಾಹ್ನ ತೆರೆದ ಬಸ್‌ನಲ್ಲಿ ವಿಜಯೋತ್ಸವ ಪರೇಡ್ ನಡೆಸಲು RCB ಯೋಜಿಸಿತ್ತು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡಿಲ್ಲ. ಇದರ ಬದಲಾಗಿ ಇಂದು ಸಂಜೆ 5 ರಿಂದ ಸಂಜೆ 6 ರವರೆಗೆ ಆರ್ ಸಿಬಿಯ ತವರು ಕ್ರೀಡಾಂಗಣ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತಂಡಕ್ಕೆ ಸಮ್ಮಾನ ಕಾರ್ಯಕ್ರಮ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ರವರು ವಿಜೇತ RCB ತಂಡಕ್ಕೆ ಸಮ್ಮಾನ ಮಾಡಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ಮಾನ ಆಯೋಜನೆ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕೆ ಜನಸಾಮಾನ್ಯರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಟಿಕೆಟ್ ಅಥವಾ ಪಾಸ್ ಹೊಂದಿರುವವರಿಗೆ ಮಾತ್ರ ಒಳಗಡೆ ಹೋಗಲು ಅನುಮತಿಸಲಾಗುತ್ತದೆ. ಹಾಗೂ ಸ್ಟೇಡಿಯಂ ಆವರಣದಲ್ಲಿ ಸೀಮಿತ ಪಾರ್ಕಿಂಗ್ ಇರುವುದರಿಂದ, ಸಾರ್ವಜನಿಕರು ಮೆಟ್ರೋ ಮತ್ತು ಇತರ ಪಬ್ಲಿಕ್ ಸಾರಿಗೆಯನ್ನು ಬಳಸುವಂತೆ ಸೂಚಿಸಲಾಗಿದೆ. ಇಂದು ಮಧ್ಯಾಹ್ನ 3 ರಿಂದ ರಾತ್ರಿ 8 ತನಕ ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಇರುವ ಪ್ರದೇಶವನ್ನು ತಪ್ಪಿಸಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ವಿಜಯೋತ್ಸವ ಮೆರವಣೆಗೆ ನಡೆದರೆ ಟ್ರಾಫಿಕ್ ಕಟ್ರೋಲ್ ಕಠಿಣ, ಜತೆಗೆ ಹರಿದು ಬರಬಹುದಾದ ಜನಸ್ತೋಮ ನಿಯಂತ್ರಿಸಲು ಕಷ್ಟ ಎಂದು ಸರ್ಕಾರ ಮೆರವಣಿಗೆಗೆ ತಡೆ ಒಡ್ಡಿದೆ.
Comments are closed.