ಸ್ವರ್ಗದ ಹಾದಿಯಲ್ಲಿ ತೀರಿಕೊಂಡ ಪಾಂಡವರು, ಎಡೆಬಿಡದೆ ಹಿಂಬಾಲಿಸಿದ ಅವರ ನಾಯಿ ಸ್ವರ್ಗ ಸೇರಿತ್ತಾ?

ನಿರೂಪಣೆ: ಸುದರ್ಶನ್ ಬಿ. ಪ್ರವೀಣ್, ಬೆಳಾಲ್

Share the Article

ಮಹಾಭಾರತ-1: ಮಹಾಭಾರತ ಯುದ್ಧ ಘಟಿಸಿದ ನಂತರ ಪಂಚಪಾಂಡವರು ಒಂದಷ್ಟು ಕಾಲ ಹಸ್ತಿನಾಪುರದಲ್ಲಿ ಆಡಳಿತ ನಡೆಸಿದರು. ಆ ಸಮಯದಲ್ಲಿ ಅರ್ಜುನನ್ನು ವ್ಯಾಸ ಮಹರ್ಷಿಯ ಬಳಿ ಬಂದು ಶ್ರೀ ಕೃಷ್ಣ ಬಲರಾಮರು ವೈಕುಂಠದ ಕಡೆ ಹೊರಟು ಹೋದ ವಿಷಯವನ್ನು ತಿಳಿಸುತ್ತಾನೆ. ಜಗದೊಡೆಯ ಶ್ರೀ ಕೃಷ್ಣನೇ ಲೋಕದಲ್ಲಿ ಇಲ್ಲವೆಂದ ಮೇಲೆ ಇನ್ನು ಮುಂದೆ ಅಧರ್ಮ ಲೋಕದಲ್ಲಿ ತಾಂಡವ ಆಡುವುದು ಸತ್ಯ. ಆದುದರಿಂದ ನಿಮ್ಮ ಕಾಲವು ಸಮೀಪಿಸಿತು ಎಂದು ಸೂಚನೆಯನ್ನು ಕೊಡುತ್ತಾರೆ ವ್ಯಾಸ ಮಹರ್ಷಿಗಳು.

ಅರ್ಜುನನು ತನ್ನ ಅಣ್ಣ ಧರ್ಮರಾಯನಿಗೆ ಈ ವಿಷಯವನ್ನು ತಿಳಿಸುತ್ತಾನೆ. ದುರ್ಯೋಧರನ್ನು ವ್ಯಾಸರ ಸೂಚನೆಯನ್ನು ಗ್ರಹಿಸಿ, ‘ಹೌದು ನಮ್ಮ ಕಾಲ ಸನ್ನಿಹಿತವಾಯಿತು, ನಾವಿನ್ನು ಹೊರಡುವ ಸಮಯ’ ಎಂದು ನಿರ್ಧರಿಸಿ ಆಭರಣಾದಿಗಳನ್ನು ಎತ್ತಿಟ್ಟು ಸ್ವರ್ಗದ ಕಡೆ ಪಯಣ ಹೊರಡುತ್ತಾರೆ. ಆದರೆ ಹಾಗೆ ಹೊರಡುವ ಮುನ್ನ ಕುರು ವಂಶದ ಆಡಳಿತವನ್ನು ಧೃತರಾಷ್ಟ್ರನ ಉಳಿದ ಏಕೈಕ ಮಗ ಯುಯುತ್ಸುವಿಗೆ ಮತ್ತು ಹಸ್ತಿನಾಪುರದ ಆಡಳಿತವನ್ನು ಅಭಿಮನ್ಯುವಿನ ಮಗ ಪರೀಕ್ಷಿತನಿಗೆ ವಹಿಸಿ ಬಲರಾಮನ ತಂಗಿ ಸುಭದ್ರೆಯನ್ನು ಕರೆದು, ‘ನೋಡಮ್ಮ ಸುಭದ್ರ, ಕುರುವಂಶ ಮತ್ತು ಪಾಂಡವ ವಂಶಗಳ ಕುಡಿಗಳ ಆಡಳಿತದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಹಿರಿಯಳಾದ ನಿನ್ನದು’ ಎಂದು ನೆನಪಿಸಿ ಧರ್ಮರಾಯ ಹೊರಡುತ್ತಾನೆ. ಆತನ ಜೊತೆಗೆ ಉಳಿದ ಎಲ್ಲಾ ಪಾಂಡವರು ಹೊರಟು ನಿಲ್ಲುತ್ತಾರೆ. ಪಾಂಡವರ ನಿರ್ಗಮನದ ಸುದ್ದಿ ತಿಳಿದ ಹಸ್ತಿನಾಪುರದಲ್ಲಿ ಮಡುಗಟ್ಟಿದ ದುಃಖ ಆವರಿಸಿರುತ್ತದೆ. ‘ಆದರೆ, ಇದು ಅನಿವಾರ್ಯ. ಹುಟ್ಟಿದವನು ಸಾಯಲೇಬೇಕು. ನಮ್ಮ ಕಾಲ ಮುಗಿಯಿತು’ ಎಂದು ಧರ್ಮರಾಯ ನಿರ್ಭಾವುಕನಾಗಿ ಹೇಳಿ ಹೊರಡುತ್ತಾ ಇದ್ದಾಗ ಅದಾಗಲೇ ದ್ರೌಪದಿ ಕಾಶಾಯ ವಸ್ತ್ರ ಧರಿಸಿ ನಿಂತಿರುತ್ತಾಳೆ. ಪರೀಕ್ಷಿತ ಮತ್ತು ಪರಿವಾರಗಳು ಊರು ಕೊನೆಯಾಗುವ ತನಕ ಬಂದು ಪಾಂಡವರನ್ನು ಬೀಳ್ಕೊಡುತ್ತಾರೆ. ಗಾಢ ವಿಷಾದ, ಅಗಾಧ ರೋದನೆಯಿಂದ ಊರಿನ ಜನರು ಪಾಂಡವರನ್ನು ಬೀಳ್ಕೊಡುತ್ತಾರೆ. ಆಗ ಒಂದು ನಾಯಿಯು ಯಾರಿಗೂ ತಿಳಿಯದಂತೆ ಪಾಂಡವರನ್ನು ಹಿಂಬಾಲಿಸುತ್ತದೆ.

ಎಲ್ಲರಿಗಿಂತ ಮೊದಲು ತೀರಿಕೊಂಡಳು ದ್ರೌಪದಿ

ಮುಂದೆ ಪಾಂಡವರು ತೀರ್ಥಯಾತ್ರೆ ಕೈಗೊಂಡು ಹೋದ ಸಂದರ್ಭ ದ್ರೌಪದಿ ಮೊತ್ತ ಮೊದಲು ಮರಣಿಸಿದ ಕಥೆಯನ್ನು ನೀವು ಕಳೆದ ಸಂಚಿಕೆಯಲ್ಲಿ ಓದಿಯೇ ಇದ್ದೀರಿ. ಸ್ವರ್ಗ ಸೇರುವ ಮುಂಚೆಯೇ ಪತಿಯರಲ್ಲಿ ಪ್ರೀತಿ ಹಂಚಿಕೆಯಲ್ಲಿ ಮೋಸ ಮಾಡಿದ ಕಾರಣಕ್ಕಾಗಿ ದ್ರೌಪದಿ ಸ್ವರ್ಗದಿಂದ ವಂಚಿತಳಾಗುತ್ತಾಳೆ. ಆಕೆಯ ಪಾರ್ಥಿವ ಶರೀರವನ್ನು ಹಾಗೆ ಅಲ್ಲಿಯೇ ಬಿಟ್ಟು ಧರ್ಮರಾಯ ಸಹಿತ ಉಳಿದ ಪಾಂಡವರು ಮುನ್ನಡೆಯುತ್ತಾರೆ. ನಂತರ ಒಂದಷ್ಟು ದಾರಿ ಕ್ರಮಿಸಿದ ನಂತರ ಸಹದೇವ ಕುಸಿದು ಬೀಳುತ್ತಾನೆ. ಭೀಮನು ಓಡಿ ಬಂದು, ಸಹದೇವನ ಮರಣದ ಕಾರಣವನ್ನು ಕೇಳುತ್ತಾನೆ.’ನೋಡು ಧರ್ಮಜ, ಸಹದೇವ ಒಳ್ಳೆಯ ಜ್ಞಾನಿ. ಆತನನ್ನು ಮೀರಿಸುವವರು ಈ ಜಗತ್ತಿನಲ್ಲಿ ಯಾರೂ ಕೂಡಾ ಇಲ್ಲ. ಅಲ್ಲದೆ ಆತ ಜೀವಮಾನವಿಡಿ ಧರ್ಮವನ್ನು ಬಿಟ್ಟು ಎಂದೂ ನಡೆದಿಲ್ಲ. ಅಂತವನಿಗೆ ಇಂತಹಾ ಸಾವೆ?’ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಧರ್ಮರಾಯನು, ‘ಸಹದೇವನು ವಿಶೇಷ ಜ್ಞಾನಿ ಅನ್ನೋದು ಸತ್ಯ. ಆದರೆ ನಾನು ಎಲ್ಲವನ್ನು ಬಲ್ಲೆ ಎನ್ನುವ ಗರ್ವ ಅವನಲ್ಲಿತ್ತು. ಅದಕ್ಕಾಗಿ ಅವನನ್ನು ಅವನು ಸ್ವರ್ಗದ ದಾರಿಯಲ್ಲಿ ತೀರಿಕೊಂಡ’ ಎಂದು ಧರ್ಮರಾಜ ಹೇಳುತ್ತಾನೆ.

ಮುಂದೆ ಆತನನ್ನು ಅಲ್ಲಿಯೇ ಬಿಟ್ಟು ಪಾಂಡವರು ಮುನ್ನಡೆಯುತ್ತಾರೆ. ಮುಂದಿನ ಸರದಿ ನಕುಲನದು. ನಕುಲ ಅಲ್ಲಿ ಕುಸಿದು ಬೀಳುತ್ತಾನೆ. ಅದಕ್ಕೂ ಧರ್ಮರಾಜ ಕಾರಣವನ್ನು ಭೀಮನಿಗೆ ವಿವರಿಸುತ್ತಾನೆ. ನಕುಲನು ಈ ಜಗತ್ತಿನ ಅತ್ಯಂತ ರೂಪವಂತ ಹುಡುಗ. ಆ ಗರ್ವ ಅವನಲ್ಲಿತ್ತು, ಅದಕ್ಕಾಗಿ ಈ ಶಿಕ್ಷೆ ಎಂದು ನಿರ್ವಿಕಾರ ಮನಸ್ಸಿನಲ್ಲಿ ನುಡಿದ ಧರ್ಮಜ ಮುಂದೆ ನಡೆಯುತ್ತಾನೆ. ನಕುಲನ ಹೆಣ ಹಾಗೆ ಏಕಾಂಗಿಯಾಗಿ ಅಲ್ಲಿ ಉಳಿಯುತ್ತದೆ.

ಒಬ್ಬಬ್ರು ಸಾಯುವಾಗಲೂ ಕಂಪಿಸುತ್ತಿದ್ದ ಅರ್ಜುನ

ಹೀಗೆ ಒಬ್ಬೊಬ್ಬರಾಗಿ ಕುಸಿದು ಸಾಯುತ್ತಿರುವುದನ್ನು ಕಂಡು ಒಂದು ಅವ್ಯಕ್ತ ಭಯ ಅಲ್ಲಿ ಮೂಡುತ್ತದೆ. ಅರ್ಜುನ ಕಂಪಿಸುತ್ತಾನೆ. ಇನ್ನೂ ನನ್ನ ಸರದಿ ಬಂತು ಅನ್ನುವ ಸೂಚನೆ ಆತನಿಗೆ ಸಿಗುತ್ತದೆ. ಅದರಂತೆ ಸ್ವಲ್ಪವೇ ದೂರದಲ್ಲಿ ಅರ್ಜುನ ಕೂಡ ಸಾಯುತ್ತಾನೆ. ಒಂದು ಕಾಲದಲ್ಲಿ ಜಗತ್ತನ್ನೆ ಗೆಲ್ಲಲು ಬಿಲ್ಲು ಎತ್ತಿದ್ದ ಹುಡುಗ. ಇವತ್ತು ಅನಾಥನಂತೆ ಅಲ್ಲಿ ಬಿದ್ದಿರುತ್ತಾನೆ. ಧರ್ಮರಾಯ ಮತ್ತು ಭೀಮ ಮುನ್ನಡೆಯುತ್ತಾರೆ. ಪಾಂಡವರಲ್ಲಿ ಒಬ್ಬಬ್ಬರು ಸತ್ತು ಬಿದ್ದರೂ ನಾಯಿ ಮಾತ್ರ ಯಾವುದೇ ಅಂಜಿಕೆಯಿಲ್ಲದೆ ಯಥಾ ಪ್ರಕಾರ ಬಾಲ ಅಲ್ಲಾಡಿಸುತ್ತಾ ಉಳಿವರನ್ನು ಹಿಂಬಾಲಿಸುತ್ತದೆ. ಅವರು ಈಗಾಗಲೇ ಅವರು ಕೈಲಾಸ ಪರ್ವತದ ದಾರಿಯ ಅಂಚಿಗೆ ಸಮೀಪಿಸುತ್ತಿದ್ದಾರೆ. ಭೀಮ ಒಳಗೊಳಗೇ ಭಯ ಪಡುತ್ತಾ ನಡೆಯುತ್ತಾನೆ. ಆತ ಸ್ವರ್ಗ ತಲುಪುವ ಮುನ್ನವೇ ಇನ್ನೇನು ಕುಸಿದು ಬೀಳುವ ಸಂದರ್ಭ ತನ್ನ ಇವತ್ತಿನ ಪರಿಸ್ಥಿತಿಗೆ ಕಾರಣವನ್ನು ಕೇಳುತ್ತಾನೆ. ಸಾಯುವ ಸಂದರ್ಭ ಕೂಡಾ ಭೀಮನಿಗೆ ಕುತೂಹಲ ಹೆಚ್ಚಿರುತ್ತದೆ. ಆಗ ಧರ್ಮಜನು, ‘ನೀನು ಮಹಾ ಬಲಿಷ್ಠ ಗಧಾಧಾರಿ. ಧರ್ಮವಂತ ಕೂಡ. ಒಂದು ರೀತಿಯಲ್ಲಿ ಅಮಾಯಕ ಕೂಡ ಹೌದು. ಆದರೆ ನೀನು ಯುದ್ಧದ ಸಂದರ್ಭದಲ್ಲಿ ಶತ್ರುವಿನ ಹತ್ಯೆ ಮಾಡುವಾಗ ಆನಂದಿಸಿದ್ದೀಯಾ. ಇನ್ನೊಬ್ಬರ ನೋವಿನ ಸಂದರ್ಭ ಈ ರೀತಿಯ ಆನಂದ ಒಳ್ಳೆಯದಲ್ಲ. ಅದಕ್ಕಾಗಿ ಈ ಶಿಕ್ಷೆ’ ಎಂದು ಭೀಮನನ್ನೂ ಬಿಟ್ಟು ಹೊರಡುತ್ತಾನೆ. ಬೆನ್ನು ಬಿಡದೆ ನಾಯಿ ಹಿಂಬಾಲಿಸುತ್ತದೆ.

ಬೆನ್ನು ಬಿಡದ ನಾಯಿ ಬಿಟ್ಟು ಸ್ವರ್ಗಕ್ಕೆ ಹೋಗಲೊಲ್ಲದ ಧರ್ಮಜ

ಮುಂದೆ ಸ್ವರ್ಗದ ಬಾಗಿಲಲ್ಲಿ ಪುಷ್ಪಕ ವಿಮಾನ ಬರುವುದು, ಇಂದ್ರ ಕಳಿಸಿದ ಆ ರಥಕ್ಕೆ ನಾನೊಬ್ಬನೇ ಹತ್ತಲಾರೆ. ನನ್ನ ನಾಯಿ ಇರುವಾಗ, ನನ್ನನ್ನು ನಂಬಿ ಬಂದ ನಾಯಿಯನ್ನು ಬಿಟ್ಟು ನಾನು ಸ್ವರ್ಗಕ್ಕೆ ಬರಲಾರೆ ಎಂದು ಧರ್ಮರಾಜ ಹೇಳುವುದು ಮಹಾಭಾರತ ಕಥೆಯಲ್ಲಿದೆ.

ಅಲ್ಲದೆ, ನನ್ನ ಪತ್ನಿ ಮತ್ತು ಸೋದರರು ಸ್ವರ್ಗ ವಾಸಿಯಾಗದೆ ನಾನು ಸ್ವರ್ಗಕ್ಕೆ ಹೋಗಲಾರೆ. ನಾನು ಇಲ್ಲೇ ತಪಸ್ಸು ಮಾಡುತ್ತಾ ಇರುತ್ತೇನೆ ಅನ್ನುತ್ತಾನೆ ಧರ್ಮರಾಯ. ಆತನ ನಿಸ್ಪೃಹತೆ, ಸೋದರ ಪ್ರೀತಿ ಮತ್ತು ನಂಬಿದವರನ್ನು ಕೈ ಬಿಡದ ಧರ್ಮ ನೀತಿಗೆ ಮೆಚ್ಚಿದ ನಾಯಿ ರೂಪಾಂತರಗೊಂಡು ಧುತ್ತೆಂದು ಯಮಧರ್ಮನಾಗಿ ಮುಂದೆ ನಿಲ್ಲುತ್ತದೆ. ಅದಾಗಲೇ ತಮ್ಮ ಪಾರ್ಥಿವ ಶರೀರವನ್ನು ತ್ಯಜಿಸಿ ಉಳಿದ ಪಾಂಡವರು ದ್ರೌಪದಿ ಸಮೇತ ಎಲ್ಲರೂ ಸ್ವರ್ಗಕ್ಕೆ ಈಗಾಗಲೇ ತಲುಪಿರುವುದನ್ನು ಮನವರಿಕೆ ಮಾಡುತ್ತಾನೆ ಯಮ. ಹಾಗೆ ಪಂಚ ಪಾಂಡವರು ಮತ್ತು ದ್ರೌಪದಿ ತಮ್ಮ ಧರ್ಮದ ಕಾರಣದಿಂದ ಸ್ವರ್ಗ ಸೇರಿಕೊಳ್ಳುತ್ತಾರೆ. (ನಿರೂಪಣೆ: ಸುದರ್ಶನ್ ಬಿ. ಪ್ರವೀಣ್, ಬೆಳಾಲ್ )

1 Comment
  1. Anonymous says

    ನಿರ್ವಾಕರು ಎಲ್ಲಿಂದ ತರುತಾರೆ ಸುಪ್ರೀಂಮ್ ಕೋರ್ಟ್ ಆದೇಶ ಪ್ರಯಾಣಿಕರು ತರ್ಬೇಕು ಅಂತ ಎಳಿ ರೋದು ನಿಮಗೆ ನ್ಯೂwಸ್ ಮಾಡೋಕೆ ಏನು ಸಿಗಲ್ವಾ

Leave A Reply

Your email address will not be published.