Mangaluru Plane Crash: ಮಂಗಳೂರು ವಿಮಾನ ದುರಂತಕ್ಕೆ 15 ವರ್ಷ, ಅಂದು ಪೈಲಟ್ ಗ್ಲುಸಿಕಾ ಮಾಡಿದ್ದ ತಪ್ಪೇನು?

Share the Article

Mangalore Air Crash: ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22 ರ ಮುಂಜಾನೆ ಏರ್‌ ಇಂಡಿಯಾ ವಿಮಾನ ರನ್‌ ವೇ ಯಿಂದ ಹೊರಕ್ಕೆ ಬಂದು ಕಮರಿಗೆ ಬಿದ್ದು ಸಂಭವಿಸಿದ ಮಹಾ ದುರಂತಕ್ಕೆ ಇಂದಿಗೆ 15 ವರ್ಷ ಕಳೆದಿದೆ. ದುರಂತದಲ್ಲಿ ಪೈಲಟ್‌, ಸಿಬ್ಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. 8 ಮಂದಿ ಪವಾಡ ಸದೃಶವಾಗಿ ಪಾರಾಗಿ ಬಂದಿದ್ದರು. 15 ವರ್ಷಗಳು ಸಂದರೂ, ಬದುಕುಳಿದು ಬಂದವರ ಆಘಾತ ಇವತ್ತಿಗೂ ಕುಂದಿಲ್ಲ. ಅಂದು ಮಡಿದ ಆಪ್ತರ ನೆನಪುಗಳು, ತರೋ ಕಣ್ಣೀರು ಇವತ್ತಿಗೂ ಮಾಸಿಲ್ಲ.

ದುಬೈಯಿಂದ ಹೊರಟ ವಿಮಾನ ಎಲ್ಲ ಸುರಕ್ಷಾ ಸಂಕೇತಗಳ ವಿನಿಮಯದೊಂದಿಗೆ ಮಂಗಳೂರಿನ ಬಜ್ಪೆ ಗುಡ್ಡದ ತುದಿಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು. ಸುತ್ತಲ ವಾತಾವರಣ ಮೂರೂವರೆ ಕಿಲೋಮೀಟರ್ ಗಳಷ್ಟು ದೂರ ಕಣ್ಣಿಂದ ನೋಡುವಷ್ಟು ತಿಳಿಯಾಗಿತ್ತು. ಆದರೂ ದುರಂತ ನಡೆದು ಹೋಗಿತ್ತು. ಘಟನೆಗೆ ಕಾರಣವನ್ನು ಕೆದಕುತ್ತಾ ಹೋದ ಹಲವು ತನಿಖಾ ತಂಡಗಳು ಕೊನೆಗೊಂದು ನಿರ್ಧಾರಕ್ಕೆ ಬಂದಿದ್ದವು.

ವಿಮಾನದ ಮುಖ್ಯ ಪೈಲೆಟ್ ಆಗಿದ್ದ ಗ್ಲುಸಿಕಾನು ತನ್ನ ಸಹ ಪೈಲೆಟ್ ಅಹ್ಲುವಾಲಿಯಾ ನೀಡಿದ ಎಚ್ಚರಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಮುಂದುವರಿದಿದ್ದ. ದುಬೈನಿಂದ ಮಂಗಳೂರಿಗೆ ಮುಂಜಾನೆ ಹೊರಟ ಬೋಯಿಂಗ್ 737 ವಿಮಾನ ಇನ್ನೇನು ರನ್ ವೇ ನಲ್ಲಿ ಇಳಿದು, ಪ್ರಯಾಣಿಕರು ಇನ್ನೇನು ತಮ್ಮ ಮನೆಗೆ ಸುರಕ್ಷಿತವಾಗಿ ಹೋಗಿಬಿಡಬೇಕು ಅನ್ನುವಷ್ಟರಲ್ಲಿ ಎಡವಟ್ಟು ಮಾಡಿಕೊಂಡಿತ್ತು. ಅದು ಒಟ್ಟು 158 ಜೀವಗಳನ್ನು ಬಲಿ ಪಡೆದಿತ್ತು.

ಆ ದಿನ ಮಂಗಳೂರಿನಲ್ಲಿ ಇಳಿಯಬೇಕಾಗಿದ್ದ ರನ್ ವೇ ಬರೊಬ್ಬರಿ 2.6 ಕಿಲೋಮೀಟರ್ ಗಳ ಉದ್ದದ ರನ್ ವೇ. ಯಾವುದೇ ವಿಮಾನ ರನ್ ವೇ ನಲ್ಲಿ ಇಳಿಯುವ ಮೊದಲು ಅತ್ಯಂತ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹವಾಮಾನ ಸರಿಯಾಗಿರಬೇಕು. ರನ್ ವೇಯಲ್ಲಿ ಮಂಜು ಕವಿದಿರಬಾರದು. ಸರಿಯಾದ ವಿಸಿಬಿಲಿಟಿ, ಅಂದರೆ ಎದುರಿನ ವಸ್ತುಗಳು ಪ್ರದೇಶಗಳು ಕಾಣಿಸುತ್ತಿರಬೇಕು. ಅಲ್ಲಿ ಬೇರಾವುದೇ ವಿಮಾನ ಇರಬಾರದು. ಹಾಗಿದ್ದರೆ ಮಾತ್ರ ವಿಮಾನ ಇಳಿಸಲು ಅನುಮತಿ ದೊರೆಯುತ್ತದೆ.

ಎಲ್ಲ ಸರಿಯಿದೆ ಎಂದು ಖಚಿತವಾದ ನಂತರ ವಿಮಾನದ ಪೈಲಟ್ ವಿಮಾನವನ್ನು ಕೆಳಕ್ಕೆ ಇಳಿಸಿ ರನ್ ವೇೆಗೆ ಹತ್ತಿರ ತಂದ. ಆದರೆ ಆತನ ಅಂದಾಜು ಸರಿಯಾಗಿರಲಿಲ್ಲ. ನಿರ್ದಿಷ್ಟ ಪ್ರದೇಶದಲ್ಲಿ, ಮಾರ್ಕ್ ಮಾಡಲಾದ ಜಾಗದಲ್ಲಿ ವಿಮಾನ ತನ್ನ ವೇಗವನ್ನು ಕಳೆದುಕೊಂಡು ಟೈರ್ ಗಳು ಓಪನ್ ಆಗಿ ನೆಲಕ್ಕೆ ಊರಬೇಕು. ಆ ನಂತರ ಇನ್ನೂ ಸುಮಾರು 200 – 250 ಕಿಲೋಮೀಟರ್ ಗಳ ವೇಗದಲ್ಲಿರುವ ವಿಮಾನ ಕ್ಷಣ ಕ್ಷಣಕ್ಕೆ ತನ್ನ ವೇಗವನ್ನು ಕಳೆದುಕೊಂಡು ಕೊನೆಗೆ ನಿರ್ದಿಷ್ಠ ಝೋನ್ ನಲ್ಲಿ ಹಾಲ್ಟ್ ಗೆ ಬಂದು ನಿಲ್ಲಬೇಕು. ಇದು ಪ್ರತಿ ವಿಮಾನ ಲ್ಯಾಂಡಿಂಗ್ ಆಗುವಾಗಿನ ಚಟುವಟಿಕೆ. ಆದರೆ ಅಲ್ಲಿ 2.4  ಕಿಲೋಮೀಟರ್ ಉದ್ದದ ರನ್ ವೇ ಯಲ್ಲಿ ಅದಾಗಲೇ 1.6 ಕಿಲೋಮೀಟರ್ ನ ನಂತರವಷ್ಟೆ ವಿಮಾನ ತನ್ನ ಚಕ್ರಗಳನ್ನು ನೆಲದ ಮೇಲೆ ಇಟ್ಟಿತ್ತು. ಅಷ್ಟು ಉದ್ದದ ರನ್ ವೇನಲ್ಲಿ 300 ಮೀಟರ್ ನಲ್ಲಿಯೇ ವಿಮಾನ ನೆಲಸ್ಪರ್ಷ ಮಾಡಬೇಕು. ಆಗ ವಿಮಾನಕ್ಕೆ ವೇಗ ಕಮ್ಮಿಮಾಡಿಕೊಂಡು ನಿಲ್ಲಲು ಸಾಕಷ್ಟು ಸಮಯಾವಕಾಶ ದೊರೆಯುತ್ತದೆ. ಆದರೆ ಅಲ್ಲಿ 300 ಮೀಟರ್ ಗಳ ಬದಲು, 1,600 ಮೀ. ಮುಂದಕ್ಕೆ ರನ್ ವೇನಲ್ಲಿ ವಿಮಾನದ ಚಕ್ರಗಳು ಭೂ ಸ್ಪರ್ಶ ಮಾಡಿದ್ದವು. ಮುಂದೆ ಇದ್ದದ್ದು ಕೇವಲ 800 ಮೀಟರ್ ಗಳ ದೂರ. ಅಷ್ಟರಲ್ಲಿ ವಿಮಾನ ತನ್ನ ಪೂರ್ತಿ ವೇಗ ಕಳೆದುಕೊಳ್ಳಬೇಕು. ಅದು ಕಷ್ಟ ಸಾಧ್ಯ.

ಸಹ ಪೈಲಟ್ ಅಹ್ಲುವಾಲಿಯಾ ಮುಖ್ಯ ಪೈಲಟ್ ಗ್ಲುಸಿಕಾನನ್ನು ವಿಮಾನ ರನ್ ವೇಯ ಮೇಲೆ ಬರುವ ಮೊದಲೇ ಎಚ್ಚರಿಸಿದ್ದ. ‘ ರನ್ ಅರೌಂಡ್ ‘ ಅಂತ ಕೂಗಿಕೊಳ್ಳುತ್ತಾನೆ ಆತ. ಅಂದರೆ ಮತ್ತೆ ಹಾರು ಮೇಲಕ್ಕೆ ಅಂತ ಅರ್ಥ. ಆದರೆ ಆತ್ಮವಿಶ್ವಾಸದ ಮೂಟೆ ಗ್ಲುಸಿಕಾ ಅದನ್ನು ನಿರ್ಲಕ್ಷಿಸುತ್ತಾನೆ. ‘ವಿಮಾನ ನನಗೇನು ಹೊಸದಾ ? ಹೇಗಾದರೂ, ಆಟಿಕೆ ಥರ ಆಡಿಸಿ ಕಂಟ್ರೋಲ್ ಮಾಡ್ತೇನೆ ‘ ಎಂಬ ಹಮ್ಮು ಆತನದು.

ಆದರೆ, ಕೆಲವೇ ಕ್ಷಣದಲ್ಲಿ ರನ್ ವೇಯ ಕೊನೆ ಇನ್ನೇನು ಕೆಲ ನೂರು ಮೀಟರ್ ಗಳ (240 ಮೀ) ದೂರದಲ್ಲಿದೆ, ವಿಮಾನ ರನ್ ವೇ ಒಳಗೆ ನಿಲ್ಲುವುದಿಲ್ಲ ಈಗ ಅಂತ ಪೈಲೆಟ್ ಗ್ಲುಸಿಕಾನಿಗೆ ಖಚಿತವಾಗಿದೆ. ಆಗ ಆತ ಮತ್ತೆ ವಿಮಾನವನ್ನು ಏರಿಸಲು ಅಕ್ಸೆಲರೆಟರ್ ತುಳಿದಿದ್ದಾನೆ. ವಿಮಾನವನ್ನು ಮತ್ತೆ ಮೇಲಿರಿಸಿಬಿಡುವ ಪ್ರಯತ್ನ ಆತನದು. ಆದರೆ ಕಾಲ ಮಿಂಚಿತ್ತು. ಅದು ಆತ ಮಾಡಿದ ಎರಡನೆಯ ದೊಡ್ಡ ತಪ್ಪು. ವಿಮಾನ ಮೇಲಕ್ಕೆ ಹಾರಲು ಇನ್ನೂ ಹೆಚ್ಚಿನ ಸಮಯ ಬೇಕಿತ್ತು. ಮತ್ತೆ ಕೊಟ್ಟ ಅಕ್ಸೆಲರೇಟರ್ ನಿಂದ ಮತ್ತಷ್ಟು ವೇಗ ಪಡೆದ ವಿಮಾನ ರನ್ ವೇಯ ಕೊನೆಗೆ ಇದ್ದ ಮರಳ ರಸ್ತೆಗೆ ಹೋಗಿ, ಮುಂದಕ್ಕೆ ಚಲಿಸುತ್ತಲೇ ಸೂಚನಾ ಗೋಪುರದ ಕಂಬಗಳಿಗೆ ಢಿಕ್ಕಿಯಾಗಿ ಅಲ್ಲಿಂದ ನೇರ ಕಾಡಿನ ಕಮರಿಗೆ ನುಗ್ಗಿದೆ. ಕೆಲ ಕ್ಷಣಗಳಲ್ಲೆ ಬೆಂಕಿ ಆವರಿಸಿಕೊಂಡಿದೆ. ಹೆಚ್ಚಿನವರು ಕ್ರಾಶ್ ನ ಗಾಯಕ್ಕಿಂತಲೂ, ಬೆಂಕಿಯ ಸುಟ್ಟ ಗಾಯಗಳಿಂದಲೇ ಸತ್ತು ಹೋಗಿದ್ದಾರೆ. ಅಂದರೆ, ಮತ್ತೆ ವಿಮಾನವನ್ನು ಮೇಲಕ್ಕೆ ಏರಿಸಲು ನೋಡದೆ ಇದ್ದಿದ್ದರೆ, ವಿಮಾನ ಕ್ರಾಶ್ ಆಗುತ್ತಿದ್ದರೂ, ಬಹುಪಾಲು ಮಂದಿ ಬದುಕುತ್ತಿದ್ದರು. ಪೈಲಟ್ ನ ಈ ಒಂದು ನಿರ್ಧಾರ ಮತ್ತೆ ರಾಂಗ್ ಹೊಡೆದಿತ್ತು. ಈಗ ಒಟ್ಟು 158 ಜನರು ಮರಣಿಸಿ, ಕೇವಲ 8 ಜನ ಗಟ್ಟಿ ಆಯುಷ್ಯದ ಜನರು ಮಾತ್ರ ಅಂದು ಬದುಕಿ ಉಳಿದಿದ್ದಾರೆ.

ಪೈಲಟ್ ಝಡ್ ಗ್ಲುಸಿಕಾ ಅನುಭವಿ ಹಾರಾಟಗಾರ. ಒಟ್ಟು 10,000 ಗಂಟೆಗಳ ಕಾಲ ಆಕಾಶದಲ್ಲಿ ವಿಮಾನ ಓಡಿಸಿದ ಅನುಭವ ಉಳ್ಳ ವ್ಯಕ್ತಿಯಾಗಿದ್ದ. ತಪ್ಪು ನಿರ್ಧಾರ ಮಾಡಿದರೆ, ಮತ್ತು ಸೂಚನೆಗಳನ್ನು ಪಾಲಿಸದ ಯಾವುದೇ ವ್ಯಕ್ತಿಯನ್ನು ಕೂಡ ಅಪಘಾತವು ಆತನ ಅನುಭವವನ್ನು ಗಣನೆಗೆ ತೆಗೆದುಕೊಂಡು ಕ್ಷಮಿಸಿ ಬಿಟ್ಟುಬಿಡಲ್ಲವಲ್ಲ? ಇಲ್ಲಿ ಕೂಡಾ ಅದೇ ಆಗಿದೆ.

ಒಟ್ಟಾರೆ ಪೈಲಟ್ ನ ನಿರ್ಲಕ್ಷ್ಯ 158 ಜನ ಪ್ರಯಾಣಿಕರನ್ನು ಸಾಯಿಸಿತ್ತು. ಅಷ್ಟೆ ಅಲ್ಲ, ಪೈಲೆಟ್ ಗ್ಲುಸಿಕಾ ಎಂತವನೆಂದರೆ, ದುಬೈನಿಂದ ಮಂಗಳೂರಿಗೆ ಒಟ್ಟು ಇರುವುದು 3.45 ಗಂಟೆಯ ಪ್ರಯಾಣ. ಆದರೆ ಅಷ್ಟರೊಳಗೆ ಆತ ಬರೋಬ್ಬರಿ 1 ಗಂಟೆ 30 ನಿಮಿಷಗಳ ಕಾಲ ಫ್ಲೈಟ್ ಅನ್ನು ಆಟೋ ಮೋಡ್ ಗೆ ಹಾಕಿ ನಿದ್ರಿಸಿದ್ದ. ಅಷ್ಟೇ ಅಲ್ಲ, ಆತ ನಿದ್ರಿಸುವಾಗ ಹೊಡೆದ ಗೊರಕೆ ಕೂಡಾ ಇನ್ವೆಸ್ಟಿಗೇಷನ್ ನ ಸಂದರ್ಭ ಬೆಳಕಿಗೆ ಬಂದಿತ್ತು. ವಿಮಾನದ ಪೈಲಟ್ ತನ್ನ ‘ಡ್ರೈವರ್ ‘ ಉದ್ಯೋಗದಲ್ಲಿ ಒಂದೇ ಒಂದು ಕೂಡಾ ತಪ್ಪನ್ನು ಮಾಡಬಾರದು. ಅಷ್ಟರ ಮಟ್ಟಿಗೆ ಆತ ಸಮರ್ಥ ಮಾತ್ರವಲ್ಲ ಎಲ್ಲಾ ರೀತಿಯಿಂದಲೂ ಪರ್ಫೆಕ್ಟ್ ಆಗಿರಬೇಕು. ತಪ್ಪಿದಲ್ಲಿ ಮಂಗಳೂರಿನಲ್ಲಿ 15 ವರ್ಷಗಳ ಹಿಂದೆ ಆದಂತಹ ಅಪಘಾತ ಮತ್ತು ಇವತ್ತಿಗೂ ಅಚ್ಚಿ ಒತ್ತಿಂದಂತೆ ಉಳಿದ ಅಳಿದವರ ನೆನಪು ಕಾಡುತ್ತಲೇ ಇರುತ್ತದೆ.

 

ಇನ್ನೊಂದು ಭೀಕರ ವಿಮಾನ ದುರಂತ ಇವತ್ತು ಪಾಕಿಸ್ತಾನದ ಕರಾಚಿಯಲ್ಲಿ ನಡೆದಿತ್ತು. ಈ ವಿಮಾನ ದುರಂತದಲ್ಲಿ 107 ಜನರು ಮರಣಿಸಿದ್ದರು. ಸರಿಯಾಗಿ 10 ವರ್ಷಗಳ ನಂತರ, ಸರಿಯಾಗಿ ದಿನ ಲೆಕ್ಕ ಮಾಡಿಕೊಂಡು ಅಪಘಾತ ಆದ ಹಾಗೆ ಮೇ 22 ರಂದೇ ಈ ದುರ್ಘಟನೆ ನಡೆದಿತ್ತು ಅನ್ನೋದು ವಿಶೇಷ.

Comments are closed.